ಮಂಡ್ಯ: ಗೋದಾಮಿಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಜಿಲ್ಲೆಯ ಮಳವಳ್ಳಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಲ್ಕುಣಿ ಆನಂದ್ ಎಂಬವರು ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.ಗೋದಾಮು ನಿರ್ಮಾಣಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕಾರ್ಯದರ್ಶಿ ವಿರುದ್ಧ ಲೋಕಾಯುಕ್ತ ಕಚೇರಿಗೆ ಕಲ್ಕುಣಿ ಆನಂದ್ ಅವರು ದೂರು ನೀಡಿದ್ದಾರೆ. ಅದರಂತೆ ಕಲ್ಕುಣಿ ಆನಂದ್ ಎಂಬುವರ ಬಳಿಯಿಂದ ಬೇಡಿಕೆ ಇಟ್ಟ 50 ಸಾವಿರ ಲಂಚದ ಹಣದ ಪೈಕಿ ಇಂದು ಮುಂಗಡವಾಗಿ 20 ಸಾವಿರ ಹಣ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಾಕಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.