22.9 C
Bengaluru
Saturday, July 6, 2024

ವಸತಿ ಘಟಕ ನೋಂದಣಿ ರದ್ದು ಪ್ರಕ್ರಿಯೆಗೆ ಮಹಾರಾಷ್ಟ್ರ ರೇರಾ ಅಸ್ತು

ವಸತಿ ಸಮುಚ್ಚಯ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಡೆವಲಪರ್‌ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದಾಗ ಅದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಲು ರೇರಾ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದಿದೆ ಮಹಾರಾಷ್ಟ್ರದ ರೇರಾ.

ಈಗಾಗಲೇ ಪ್ರಾರಂಭಗೊಂಡಿರುವ ವಸತಿ ಯೋಜನೆಯ ನೋಂದಣಿಯನ್ನು ರದ್ದು ಮಾಡಲು ಮಹಾರಾಷ್ಟ್ರದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಡೆವಲಪರ್‌ ಆದ ಟರ್ಫ್‌ ಎಸ್ಟೇಟ್ ಜಾಯಿಂಟ್‌ ವೆಂಚರ್‌ಗೆ ಅವಕಾಶ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ಒಂದುವೇಳೆ ಯೋಜನೆಯನ್ನು ಪೂರ್ಣಗೊಳಿಸಲು ತನ್ನ ಅಸಮರ್ಥತೆಯನ್ನು ಡೆವಲಪರ್‌ ವ್ಯಕ್ತಪಡಿಸಿದಲ್ಲಿ ಅದನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲು ರೇರಾದಲ್ಲಿ ಅವಕಾಶವಿಲ್ಲ ಎಂದು ಅದು ಹೇಳಿದೆ.

ದಕ್ಷಿಣ ಮುಂಬಯಿ ವ್ಯಾಪ್ತಿಯಲ್ಲಿ ಟರ್ಫ್‌ ಎಸ್ಟೇಟ್‌ ಜಾಯಿಂಟ್‌ ವೆಂಚರ್‌ ʼಡಿಬಿ ಟರ್ಫ್‌ ವ್ಯೂʼ ಎನ್ನುವ ವಸತಿ ಯೋಜನೆಯನ್ನು ಅಭಿವೃದ್ಧಿ ಪಡಿಸುತ್ತಿತ್ತು. ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಖರೀದಿದಾರರಲ್ಲಿ ಮೂರನೇ ಎರಡರಷ್ಟು ಜನರಿಗೆ ಬಡ್ಡಿ ಸಮೇತ ಹಣವನ್ನು ಹಿಂತಿರುಗಿಸಿತ್ತು. ಖರೀದಿದಾರರಲ್ಲಿ ಐವರು ಮರುಪಾವತಿಯನ್ನು ಸ್ವೀಕರಸಲು ಒಪ್ಪದೆ ಟರ್ಫ್‌ ಎಸ್ಟೇಟ್‌ ಜಾಯಿಂಟ್‌ ವೆಂಚರ್‌ನ ಈ ನಿರ್ಧಾರವನ್ನು ಪ್ರಶ್ನಿಸಿ ʼರೇರಾʼ ಮೊರೆ ಹೋಗಿದ್ದರು.

ಟರ್ಫ್‌ ಎಸ್ಟೇಟ್‌ ಜಾಯಿಂಟ್‌ ವೆಂಚರ್‌ ಜನವರಿ ತಿಂಗಳಿನಲ್ಲಿಯೇ ನೋಂದಣಿಯನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು. ಜೊತೆಗೆ 27 ಖರೀದಿದಾರರಲ್ಲಿ 21ಮಂದಿಗೆ ಶೇ 9ರಂತೆ ಬಡ್ಡಿ ಸೇರಿಸಿ ಹಣವನ್ನು ಈಗಾಗಲೇ ಮರುಪಾವತಿಸಿ ಹಂಚಿಕೆಯನ್ನು ರದ್ದುಗೊಳಿಸಿರುವ ಬಗ್ಗೆ ದಾಖಲಾತಿಯನ್ನು ನೀಡಿತ್ತು.

ʼಈ ಹಿನ್ನೆಲೆಯಲ್ಲಿ ಮೌನ ವಹಿಸಿದ್ದ ಪ್ರಾಧಿಕಾರವು ನಿರ್ಧಾರ ಕೈಗೊಳ್ಳಲೇ ಬೇಕಾದ ಸಂದರ್ಭ ಬಂದಾಗ ಕಾನೂನಾತ್ಮಕವಾಗಿ ನಿರ್ಧಾರ ತೆಗೆದುಕೊಂಡಿದೆʼ ಎಂದು ಹೇಳಿಕೊಂಡಿದೆ ಮಹಾರಾಷ್ಟ್ರದ ರೇರಾ.

ʼನೋಂದಣಿಯನ್ನು ರದ್ದುಗೊಳಿಸಲು ರೇರಾ ಕಾಯಿದೆಯಲ್ಲಿ ಯಾವುದೇ ನಿರ್ದಿಷ್ಟ ಅವಕಾಶಗಳಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಯೋಜನೆ ವಾಣಿಜ್ಯದ ದೃಷ್ಟಿಯಲ್ಲಿ ಕಾರ್ಯಸಾಧುವಲ್ಲ ಎನಿಸಿದಾಗ ಇನ್ನುಳಿದ ಡೆವಲಪರ್‌ಗಳು ಈ ಆದೇಶವನ್ನು ದಾಳವಾಗಿ ಬಳಸಿಕೊಳ್ಳುವ ಅಪಾಯವಿದೆ. ಹೀಗಾಗಿ ನೋಂದಣಿ ರದ್ದು ಪ್ರಕ್ರಿಯೆಯಂಥ ಆದೇಶವನ್ನು ನೀಡುವಾಗ ಒಟ್ಟಾರೆ ಯೋಜನೆಯ ಸ್ಥಿತಿಗತಿ, ಹಂಚಿಕೆದಾರರ ಸಂಖ್ಯೆ ಹಾಗೂ ಅವರ ಅಭಿಪ್ರಾಯಗಳ ಮೇಲೆ ನಿರ್ಧಾರ ಕೈಗೊಳ್ಳಬೇಕುʼ ಎಂದು ಮುಂಬಯಿಯಲ್ಲಿರುವ ವಕೀಲೆ ತೃಪ್ತಿ ದಫ್ತಾರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related News

spot_img

Revenue Alerts

spot_img

News

spot_img