28.2 C
Bengaluru
Wednesday, July 3, 2024

ರಿಯಲ್‌ ಎಸ್ಟೇಟ್‌ ಯೋಜನೆ ನೋಂದಣಿ ರದ್ದತಿಗೆ ಮಹಾರಾಷ್ಟ್ರ ರೇರಾ ಸಮ್ಮತಿ

ಟರ್ಫ್ ಎಸ್ಟೇಟ್ ಜಾಯಿಂಟ್ ವೆಂಚರ್ ಎಲ್ಎಲ್‌ಪಿ ಎದುರು ಕೇಸರಿ ರಿಯಾಲ್ಟಿ ಮತ್ತಿತರರ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಯೋಜನೆಯೊಂದರ ನೋಂದಣಿ ರದ್ದತಿಗೆ ಮಹಾರಾಷ್ಟ್ರ ರೇರಾ ಅನುಮೋದನೆ ನೀಡಿದೆ. 2016ರ ಕಾಯ್ದೆಯ ನಿಯಮಗಳಲ್ಲಿ ಅನುಮತಿ ಇಲ್ಲದ ಹೊರತಾಗಿಯೂ ಮಹಾರಾಷ್ಟ್ರ ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದೆ.

ʻಡಿಬಿ ಟರ್ಫ್ ವ್ಯೂವ್ ರಿಯಲ್ ಎಸ್ಟೇಟ್ ಯೋಜನೆಗೆ ಸಂಬಂಧಿಸಿದ ಅರ್ಜಿಯೊಂದು ಮೊದಲು ಟರ್ಫ್ ಎಸ್ಟೇಟ್ ಜೆವಿ ಎಂದು ಕಾಯ್ದೆಯ 5ನೇ ಸೆಕ್ಷನ್ ಅಡಿಯಲ್ಲಿ ನೋಂದಣಿಯಾಗಿತ್ತು. ಈ ಯೋಜನೆಯಲ್ಲಿ ಹಂಚಿಕೆ ಪಡೆದ 27 ಜನರಲ್ಲಿ ಮೂರನೇ ಎರಡರಷ್ಟು ಜನರ ಒಪ್ಪಿಗೆ ಪಡೆದ ಟರ್ಫ್ ಎಸ್ಟೇಟ್ ಜೆವಿ ಸೆಕ್ಷನ್ 15ರ ಅಡಿ ಪ್ರವರ್ತಕರ (ಪ್ರಮೋಟರ್) ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿತು. ಈ ಒಪ್ಪಿಗೆ ಪತ್ರವು ಯೋಜನೆಯನ್ನು ವಸತಿ ಉದ್ದೇಶದ ಬದಲಾಗಿ ವಾಣಿಜ್ಯ ಉದ್ದೇಶಕ್ಕೆ ಬದಲಿಸುವ ಅಂಶವನ್ನೂ ಒಳಗೊಂಡಿತ್ತು. ಹಂಚಿಕೆ ಪಡೆದವರ ಪೈಕಿ ಐವರು ಈ ಬದಲಾವಣೆಗೆ ಒಪ್ಪಿರಲಿಲ್ಲ. ಈ ನಡುವೆ ಪ್ರವರ್ತಕರ ಬದಲಾವಣೆಗಾಗಿ ಸಲ್ಲಿಕೆ ಆದ ಅರ್ಜಿಯನ್ನು ಪ್ರಾಧಿಕಾರವು ಸ್ವೀಕರಿಸಿದೆ ಮತ್ತು ಟರ್ಫ್ ಎಸ್ಟೇಟ್ ಜಾಯಿಂಟ್ ವೆಂಚರ್ ಎಲ್ಎಲ್ಪಿ ಈ ಯೋಜನೆಯ ಹೊಸ ಪ್ರವರ್ತಕರಾಗಿದ್ದಾರೆ.

27ರಲ್ಲಿ 22 ಜನರಿಗೆ ಈ ವಿಚಾರವಾಗಿ ಮಾಹಿತಿ ನೀಡಲಾಗಿದ್ದು, ಸಂಬಂಧಿಸಿದ ಪ್ರಕರಣಗಳಲ್ಲಿ ಹಣವನ್ನು ಮರಳಿಸಿ ಅವರ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ. ಉಳಿದ ಐವರಿಗೂ ಮರಳಿಸಬೇಕಾದ ಹಣವನ್ನು ಶೇ 9ರಷ್ಟು ಬಡ್ಡಿಯೊಂದಿಗೆ ಚೆಕ್ ರವಾನಿಸಲಾಗಿ ಎಂದು ಪ್ರವರ್ತಕರು ತಿಳಿಸಿದ್ದಾರೆ.

ಹಣ ಹಿಂಪಡೆಯಲು ತಿರಸ್ಕರಿಸಿರುವ ಐವರು ತಮಗೆ ಹಂಚಿಕೆ ಆದ ಮನೆಯನ್ನು ರದ್ದು ಮಾಡಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅದರ ತೀರ್ಪು ಬಾಕಿ ಇದೆ. ಯೋಜನೆಯ ನೋಂದಣಿ ರದ್ದುಪಡಿಸಲು ಪ್ರವರ್ತಕರು ಕ್ರಮ ಕೈಗೊಳ್ಳದಂತೆ ನಿರ್ಬಂಧಿಸುವಂತೆಯೂ ಕೋರಿ ಇವರು ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ರಿಟ್ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು, ಮನೆ ಹಂಚಿಕೆ ಪಡೆದವರನ್ನು ಪ್ರತಿವಾದಿಗಳನ್ನಾಗಿಸಿ ಅವರಿಗೆ ಅರ್ಜಿಯನ್ನು ವಿರೋಧಿಸಲು ಅವಕಾಶ ನೀಡುವಂತೆ ಹೊಸದಾಗಿ ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸುವಂತೆ ಪ್ರವರ್ತಕರಿಗೆ ನಿರ್ದೇಶಿಸಿದೆ. ನ್ಯಾಯಾಲಯವು ನ್ಯಾಯವ್ಯಾಪ್ತಿ ಮತ್ತು ನೋಂದಣಿ ರದ್ದುಗೊಳಿಸುವ ಪರಿಹಾರದ ಲಭ್ಯತೆಯ ಪ್ರಶ್ನೆಗಳನ್ನು ಮುಕ್ತವಾಗಿರಿಸಿದೆ. ಹೊಸ ಅರ್ಜಿಯನ್ನು ಸ್ವೀಕರಿಸಿದ ಪ್ರಾಧಿಕಾರವು ಯೋಜನೆಯ ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸಿದೆ.

ಪ್ರಾಧಿಕಾರ ಹೇಳದ್ದೇನು?
ರಿಯಲ್‌ ಎಸ್ಟೇಟ್‌ ಯೋಜನೆಯ ನೋಂದಣಿಯನ್ನು ಶಾಶ್ವತವಾಗಿ ನೀಡಲಾಗಿದೆಯೇ ಎಂಬ ಪರ್ಯಾಯ ಪ್ರಶ್ನೆಯ ಮೂಲಕ ನೋಂದಣಿ ರದ್ದತಿಯನ್ನು ಪ್ರಾಧಿಕಾರ ಅನುಮೋದಿಸಿದೆ. ಒಂದೊಮ್ಮೆ ಶಾಶ್ವತ ಅಲ್ಲ ಎಂದಾದರೆ, ಯೋಜನೆ ಪೂರ್ಣವಾಗುವ ಮುನ್ನವೇ ನೋಂದಣಿಯ ಕಾಲಾವಧಿ ಮುಗಿದಿದ್ದರೆ ನೋಂದಣಿ ರದ್ದು ಮಾಡಲು ಸೆಕ್ಷನ್‌ 7ರ ಅಡಿ ಅವಕಾಶ ಇದೆ. ಯೋಜನೆಯನ್ನು ಮೂಲ ಪ್ರವರ್ತಕರೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುವ ಯಾವ ಅವಕಾಶವೂ ಕಾಯ್ದೆಲ್ಲಿ ಇಲ್ಲ. ಯೋಜನೆಯನ್ನು ಮುಂದುವರಿಸಲು ಪ್ರವರ್ತಕರು ಅಸಮರ್ಥರಾದಾಗ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಮತ್ತು ಹಂಚಿಕೆ ಪಡೆದವರು ನಿರ್ಗಮಿಸಲು ನಿರಾಕರಿಸುತ್ತಾರೆ. ಪ್ರವರ್ತಕರು ಯೋಜನೆ ಪೂರ್ಣಗೊಳಿಸುವಲ್ಲಿ ವಿಫಲರಾದಾಗ ಹಂಚಿಕೆ ಪಡೆದವರು ಯೋಜನೆಯನ್ನು ಪೂರ್ಣಗೊಳಿಸುವಂತೆ ಒತ್ತಡ ಹೇರುವಂತಿಲ್ಲ. ಅಂತಹ ಸಂದರ್ಭದಲ್ಲಿ, ಯೋಜನೆಯ ನೋಂದಣಿ ರದ್ದತಿಗೆ ನಿಯಮದಲ್ಲಿ ಪೂರಕ ಅವಕಾಶಗಳಿಲ್ಲ ಎಂದ ಮಾತ್ರಕ್ಕೆ ಪ್ರಾಧಿಕಾರವು ಮೂಕ ಪ್ರೇಕ್ಷಕನಾಗಿ ಉಳಿದುಕೊಳ್ಳಲು ಸಾದ್ಯವಿಲ್ಲ ಎಂದು ವಾದಿಸಿದೆ.

ಇದೀಗ ಪ್ರಕರಣ ದಾಖಲಿಸಿದ್ದ ಐವರು ತಮ್ಮ ಹಣವನ್ನು ಬಡ್ಡಿ ಸಹಿತ ಹಿಂಪಡೆಯುವುದು ಮಾತ್ರ ಉಳಿದ ಪರಿಹಾರಾತ್ಮಕ ಕ್ರಮವಾಗಿದೆ. ಈ ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ಪ್ರಾಧಿಕಾರವು ಈ ವಿಚಾರವಾಗಿ ಏನನ್ನೂ ಹೇಳುವುದಿಲ್ಲ ಎಂದಿದೆ. ಒಟ್ಟಾರೆ ಈ ಪ್ರಕರಣವು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನೋಂದಣಿ ರದ್ದತಿಗೆ ಕೋರುವ ಅರ್ಜಿಗಳ ಸಂಖ್ಯೆ ಹೆಚ್ಚಳವಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಂತೂ ಸುಳ್ಳಲ್ಲ.

Related News

spot_img

Revenue Alerts

spot_img

News

spot_img