ಬೆಂಗಳೂರು: ಆರ್ಥಿಕ ವರ್ಷದ ಕೊನೆ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಸಾಮಾನ್ಯ ಜನರಿಗೆ ಶಾಕ್ ನೀಡಿದೆ.ದೇಶೀಯ ಅನಿಲ ಕಂಪನಿಗಳು ಗ್ರಾಹಕರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಿವೆ.LPG ಸಿಲಿಂಡರ್ ಗ್ರಾಹಕರಿಗೆ ತಿಂಗಳ ಮೊದಲ ದಿನ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಿಸಲಾಗಿದೆ. 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದ್ದು, 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ 350.50 ಏರಿಕೆಯಾಗಿದೆ.ನೂತನ ದರ ಇಂದಿನಿಂದ ಜಾರಿಗೆ ಬರಲಿದೆ.
ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ದರ ಮಾರ್ಚ್ 1 ರಿಂದಲೇ ಜಾರಿಗೆ ಬರಲಿದೆ ಎಂದು ಒಎಂಸಿ ತಿಳಿಸಿದೆ. ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ 350.50 ರೂಪಾಯಿ ಏರಿಕೆ ಮಾಡಿದ್ದು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಗಳು ಬೆಲೆ ಏರಿಕೆ ಬಿಸಿ ಅನುಭವಿಸಲಿವೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಊಟದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಬಳಕೆ ಸಿಲಿಂಡರ್ ದರದಲ್ಲಿ 50 ಏರಿಕೆ ಮಾಡಿರುವುದು ಜನರಲ್ಲಿ ಆತಂಕ ತಂದಿದೆ.ಬೆಂಗಳೂರಿನಲ್ಲಿ ಎಲ್‌ಪಿಜಿ ಬೆಲೆ ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ದರಗಳು ಹೆಚ್ಚಾಗುತ್ತವೆ. ಬಡ ವರ್ಗಗಳಿಗೆ, ಸರ್ಕಾರವು ಈ ಬೆಲೆಗಳನ್ನು ಸಬ್ಸಿಡಿ ಮಾಡಿದೆ. ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1,105 ರೂಪಾಯಿ 50 ಪೈಸೆಯಾಗಿದೆ. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಸರಿಸುಮಾರು ಇದೇ ದರ ಅನ್ವಯವಾಗುತ್ತದೆ.
ವಿವಿಧ ಮಹಾನಗರಗಳಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳ ಹೊಸ ಬೆಲೆ
ಚೆನ್ನೈನಲ್ಲಿ ದೇಶೀಯ ಎಲ್‌ಪಿಜಿ ಬೆಲೆ 1068.50 ರೂ.ನಿಂದ 118.50 ರೂ.ಗೆ ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಬೆಲೆ 1079 ರೂ.ನಿಂದ 1129 ರೂ.ಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಬೆಲೆ 1053 ರೂ.ನಿಂದ 1103 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ದೇಶೀಯ ಎಲ್‌ಪಿಜಿ ಬೆಲೆ ಸಿಲಿಂಡರ್‌ಗೆ 1052.50 ರೂ.ನಿಂದ 1102.50 ರೂ.ಗೆ ಏರಿಕೆಯಾಗಿದೆ.
ವಿವಿಧ ಮಹಾನಗರಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಹೊಸ ಬೆಲೆ
ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಬೆಲೆ 1869 ರೂ.ನಿಂದ 2219.50 ರೂ.ಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ ವಾಣಿಜ್ಯ LPG ಬೆಲೆ 1917 ರೂ.ನಿಂದ 2267.50 ರೂ.ಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಬೆಲೆ 1769 ರೂ.ನಿಂದ 2119.50 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಬೆಲೆ ಸಿಲಿಂಡರ್‌ಗೆ 1721 ರೂ.ನಿಂದ 2071.50 ರೂ.ಗೆ ಏರಿಕೆಯಾಗಿದೆ.