ನೀವು ರಿಯಲ್ ಎಸ್ಟೇಟ್ ಆಸ್ತಿ ಹುಡುಕಾಟದ ವೇಳೆ ಎದುರಾದ ಕೆಲವು ಪದಗಳ ಅರ್ಥಕ್ಕಾಗಿ ತಡಕಾಡಿದ್ದೀರಾ? ಹಾಗಾದರೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಲು ಈ ಲೇಖನವನ್ನು ಓದಿ, ರಿಯಲ್ ಎಸ್ಟೇಟ್ ಸಂಬಂಧಿ ಮಾಹಿತಿ, ಪರಿಭಾಷೆಗಳನ್ನು ಕರಗತ ಮಾಡಿಕೊಂಡು, ಎದುರಾಗಬಹುದಾದ ಸಮಸ್ಯೆಗಳನ್ನು ದೂರಮಾಡಿ.
ಚದರ ಅಡಿ
ಮನೆ, ಕಚೇರಿ ಅಥವಾ ಭೂಮಿಯ ನಿಖರವಾದ ಗಾತ್ರವನ್ನು ನಿರ್ಧರಿಸಲು ಸಾಮಾನ್ಯವಾಗಿ ಬಳಸಲಾಗುವ ಮಾನದಂಡ ಚದರ ಅಡಿ. ಒಂದು ಅಡಿ ಉದ್ದ ಹಾಗೂ ಅಷ್ಟೇ ಅಗಲದ ಚಚ್ಚೌಕವನ್ನು ಚದರ ಅಡಿ ಎನ್ನುತ್ತೇವೆ. ಒಂದು ಚದರ ಅಡಿಯ ವಿಸ್ತೀರ್ಣ 0.3048 ಮೀಟರ್. ಇದೇ ಮಾನದಂಡವನ್ನು ಯಾವುದೇ ಆಕಾರದ ಸ್ವತ್ತುಗಳನ್ನು ಅಳೆಯಲೂ ಬಳಸಬಹುದು.
ಸೈಟ್ ಪ್ಲಾನ್/ ನಿವೇಶನದ ನಕ್ಷೆ
ಭೂಮಿ/ ನಿವೇಶನದ ಸಮತಲ ಪ್ರದೇಶದ ರೇಖಾಚಿತ್ರವೇ ನಿವೇಶನದ ನಕ್ಷೆ. ಇದು ನಿವೇಶನದ ಸ್ವರೂಪ, ಭೂಮಿಯ ಗಡಿ ಮತ್ತು ಭೌತಿಕ ವಿಸ್ತಾರವನ್ನು ತೋರಿಸುತ್ತದೆ ಅಥವಾ ಮನೆ, ವಸತಿ ಸಮುಚ್ಚಯ ನಿರ್ಮಿಸಬೇಕಾದ ಜಾಗವನ್ನು ನಿರ್ದಿಷ್ಟಪಡಿಸುತ್ತದೆ. ವಿಶಿಷ್ಟವಾದ ನಕ್ಷೆಯು ಸುತ್ತಲೂ ಅಸ್ತಿತ್ವದಲ್ಲಿರುವ ಕಟ್ಟಡಗಳನ್ನು ಅಥವಾ ಮೆಟ್ರೋ ರೈಲು ಮಾರ್ಗ, ಹೆದ್ದಾರಿ ಇತ್ಯಾದಿ ಯಾವುದೇ ಪ್ರಸ್ತಾವಿತ ಅಭಿವೃದ್ಧಿ ಯೋಜನೆಯನ್ನು ಸಹ ತೋರಿಸಬಹುದು.
ಬೇರ್ ಶೆಲ್
ಈ ಪದವು ಎಲ್ಲಾ ನಿರ್ಮಾಣ ಚಟುವಟಿಕೆಗಳು ಪೂರ್ಣಗೊಂಡ ನಂತರ ಮನೆ, ಕಚೇರಿ, ವಾಣಿಜ್ಯ ಸ್ಥಳದ ಸ್ಥಿತಿಯನ್ನು ಸೂಚಿಸುತ್ತದೆ. ಬೇರ್ ಶೆಲ್‌ನಲ್ಲಿ ಪ್ಲಾಸ್ಟರ್ ಮಾಡಲಾದ ಗೋಡೆ; ಸಿಮೆಂಟ್, ಮೊಸಾಯಿಕ್, ಟೈಲ್ಸ್ ಅಥವಾ ಗ್ರಾನೈಟ್ ನೆಲಹಾಸು; ಶೌಚಾಲಯ, ಅಡುಗೆ ಕೋಣೆ ಉಗ್ರಾಣ ಎಲ್ಲವನ್ನೂ ತೋರಿಸಲಾಗುತ್ತದೆ.
ಕಾಮನ್ ಏರಿಯಾ
ನಿರ್ಮಾಣಗೊಂಡಿರುವ ಮನೆ, ಕಚೇರಿ, ಮಳಿಗೆ ಇತ್ಯಾದಿ ಕಟ್ಟಡಗಳ ನಿವಾಸಿಗಳು ಅಥವಾ ಎಲ್ಲ ಬಳಕೆದಾರರು ಬಳಸುವ ಸಾಮಾನ್ಯ ಸ್ಥಳವನ್ನು ಕಾಮನ್ ಏರಿಯಾ ಎನ್ನುತ್ತೇವೆ. ವಾಹನ ನಿಲುಗಡೆ ಸ್ಥಳ, ಲಾನ್, ಈಜುಕೊಳ, ಸಮುದಾಯ ಭವನ, ವರಾಂಡ, ಲಾಬಿ, ಲಿಫ್ಟ್-ಈ ಪ್ರದೇಶಗಳನ್ನು ಆ ಕಟ್ಟಡದ ಮಾಲೀಕತ್ವ ಹೊಂದಿರುವ ಎಲ್ಲರೂ ಬಳಸುತ್ತಾರೆ. ಯಾವುದೇ ಒಬ್ಬ ಮಾಲೀಕನ ನಿಯಂತ್ರಣಕ್ಕೆ ಒಳಪಡುವುದಿಲ್ಲ.
ಕಾರ್ಪೆಟ್ ಏರಿಯಾ
ಸರಳವಾಗಿ ಹೇಳಬೇಕೆಂದರೆ, ನಿರ್ಮಾಣವಾದ ಕಟ್ಟಡದ ಗೋಡೆಗಳ ಒಳಾಂಗಣ, ಅಂದರೆ ಕಾರ್ಪೆಟ್ ಹಾಕಲು ಅವಕಾಶ ಇರುವ ಸ್ಥಳವೇ ಕಾರ್ಪೆಟ್ ಏರಿಯಾ. ಕಟ್ಟಡದೊಳಗಿನ ಗೋಡೆಗಳ ದಪ್ಪವನ್ನು ಹೊರತುಪಡಿಸಿ, ಬಳಕೆಗೆ ಲಭ್ಯವಾಗುವ ಸ್ಥಳಾವಕಾಶವನ್ನು ಇದು ಸೂಚಿಸುತ್ತದೆ.
ಬಿಲ್ಟ್—ಅಪ್ ಏರಿಯಾ
ಒಂದು ಕಟ್ಟಡ ನಿರ್ಮಾಣವಾಗಿರುವ ಒಟ್ಟು ಸ್ಥಳಾವಕಾಶವನ್ನು, ಅಂದರೆ ಹೊರಗಿನ ಗೋಡೆ ಮತ್ತು ಒಳಗಿನ ಜಾಗ ಎಲ್ಲವನ್ನೂ ಸೇರಿಸಿ ಬಿಲ್ಟ್-ಅಪ್ ಅಥವಾ ಪ್ಲಿಂಥ್ ಏರಿಯಾ ಎನ್ನಲಾಗುತ್ತದೆ. ಕಾರ್ಪೆಟ್ ಏರಿಯಾ, ನಿರ್ಮಾಣವಾದ ಕಟ್ಟಡದೊಳಗಿನ ಯುಟಿಲಿಟಿ ಡಕ್ಟ್, ಒಳ ಮತ್ತು ಹೊರಗಿನ ಗೋಡೆಗಳನ್ನು ಸೇರಿಸಿ ಲೆಕ್ಕ ಹಾಕಲಾಗುತ್ತದೆ.
ಸೂಪರ್ ಬಿಲ್ಟ್—ಅಪ್ ಏರಿಯಾ
ಬಿಲ್ಟ್-ಅಪ್ ಏರಿಯಾ ಮತ್ತು ಕಾಮನ್ ಏರಿಯಾಗಳ ಒಟ್ಟು ಸ್ಥಳಾವಕಾಶವೇ ಸೂಪರ್ ಬಿಲ್ಟ್-ಅಪ್ ಏರಿಯಾ. ಇಲ್ಲಿ ಏಟ್ರಿಯಾ/ಲಾಬಿ, ಎಲಿವೇಟರ್ ಶಾಫ್ಟ್ಸ್, ಪೈಪ್ ಡಕ್ಟ್‌ಗಳು, ಏರ್ ವೆಂಟ್, ಗಜಿಬೋಸ್, ಸಮುದಾಯ ಕೇಂದ್ರ, ಕ್ಲಬ್ ಹೌಸ್, ಜಿಮ್, ಕವರ್ಡ್ ಕಾಮನ್ ಪ್ರದೇಶಗಳು ಬರುತ್ತವೆ. ಆದರೆ, ಉದ್ಯಾನ, ತಾರಸಿ ಉದ್ಯಾನ, ತಾರಸಿಯಂತಹ ಮುಕ್ತ ಪ್ರದೇಶಗಳನ್ನು ಪರಿಗಣಿಸಲಾಗುವುದಿಲ್ಲ.