ಬೆಂಗಳೂರು, ಆ. 18 : ಭ್ರಷ್ಟ ಅಧಿಕಾರಿಗಳ ಮೇಲೆ ಸದಾ ಕಣ್ಣಿಟ್ಟಿರುವ ಲೋಕಾಯುಕ್ತ ಏಕಕಾಲದಲ್ಲಿ ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಈ ವೇಳೆ ಆಸ್ತಿ ಪತ್ರಗಳ ದಾಖಲೆಗಳು, ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಹಾರಂಗಿ ಜಲಾಶಯದ ಅಧೀಕ್ಷಕ ಇಂಜಿನಿಯರ್ ರಘುಪತಿ ಅವರ ಮನೆಯ ಮೇಲೂ ದಾಳಿ ನಡೆಸಿದ್ದರು. ಮೈಸೂರಿನ ನಿವಾಸದಲ್ಲಿ ದಾಳಿ ನಡೆಸಿದಾಗ ಲೋಕಾಯುಕ್ತ ಪೊಲೀಸರಿಗೆ ಶಾಕ್ ಕಾದಿತ್ತು.
ಮನೆಯ ಒಳಗಡೆ ಮರದ ವಿನ್ಯಾಸವನ್ನು ಮಾಡಿಸಲಾಗಿದೆ. ಇದಕ್ಕೆ ಬಳಸಿರುವ ಮರ ಬಹಳ ಬೆಲೆ ಬಾಳುವುದು ಎಂದು ಅಧಿಕಾರಿಗಳು ಅರಣ್ಯ ಇಲಾಖೆಯವರನ್ನು ಕರೆಸಿ ಪರಿಶೀಲಿಸುತ್ತಿದ್ದಾರೆ. ಮನೆಯ ಪೀಠೋಪಕರಣಗಳು ಕೂಡ ದುಬಾರಿಯದ್ದಾಗಿವೆ. ಕೊಡಗಿನ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ವಿರುದ್ಧ ನಡೆದ ದಾಳಿ ವೇಳೆ 3.53 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಂಜುಂಡೇಗೌಡ ಅವರ ಬಳಿ ಹಣ ಮತ್ತು ಚಿನ್ನಾಭರಣಕ್ಕಿಂತಲೂ ಅಧಿಕ ಭುಮಿಯನ್ನು ಹೊಂದಿದ್ದಾರೆ.
ಕೊಳ್ಳೇಗಾಲದಲ್ಲಿ 83 ಲಕ್ಷ ಮೌಲ್ಯದ 1.23 ಎಕರೆ ತೋಟ, ಪಿರಿಯಾಪಟ್ಟಣದಲ್ಲಿ 35.50 ಲಕ್ಷ ಮೌಲ್ಯದ 8 ಎಕರೆ ತೋಟ, 16 ಲಕ್ಷ ಮೌಲ್ಯದ 11 ಎಕರೆ ತೋಟ, 20 ಲಕ್ಷ ಮೌಲ್ಯದ ತೋಟದ ಮನೆ, ಸುಂಟಿಕೊಪ್ಪದಲ್ಲಿ 10 ಲಕ್ಷ ಮೌಲ್ಯದ ನಿವೇಶನ, ಮೈಸೂರು ನಗರದಲ್ಲಿ 8.50 ಲಕ್ಷ ಹಾಗೂ 17 ಲಕ್ಷ ಮೌಲ್ಯದ 2 ನಿವೇಶನಗಳು, ಮೈಸೂರು ತಾಲ್ಲೂಕಿನಲ್ಲಿ ತ 14.70 ಲಕ್ಷ ಮೌಲ್ಯದ 1.9 ಎಕರೆ ತೋಟ, ಕೊಡಗಿನ ಭಾಗಮಂಡಲದಲ್ಲಿ 40.30 ಲಕ್ಷ ಮೌಲ್ಯದ 6.80 ಎಕರೆ ತೋಟ ಸೇರಿದಂತೆ ಒಟ್ಟು 2.55 ಕೋಟಿ ಮೌಲ್ಯದ ಭೂ ದಾಖಲೆಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಕೃಷಿಭೂಮಿ, ಪಿರಿಯಾಪಟ್ಟಣದಲ್ಲಿ ತೋಟದ ಮನೆ ಮತ್ತು ಕೃಷಿಭೂಮಿ, ಮೈಸೂರು ಮತ್ತು ಸುಂಟಿಕೊಪ್ಪದಲ್ಲಿ ಮನೆ ನಿವೇಶನಗಳು, ಮೈಸೂರಿನಲ್ಲಿ ಕೃಷಿಭೂಮಿ ಮತ್ತು ಕೊಡಗಿನ ಭಾಗಮಂಡಲದಲ್ಲಿ 6.80 ಎಕರೆ ಕೃಷಿಭೂಮಿ ಸೇರಿದಂತೆ 2.55 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.