ಬೆಂಗಳೂರು, ಜೂ. 29 : ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯನ್ನು ನಡೆಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಡಿಕೇರಿ, ತುಮಕೂರು, ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ರಾಯಚೂರು, ಬೆಳಗಾವಿ, ಕೋಲಾರ, ಯಾದಗಿರಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳೂ ರೈಡ್ ಮಾಡಿದ್ದಾರೆ. ಭ್ರಷ್ಟರ ಮನೆಯನ್ನು ಜಾಲಾಡಿರುವ ಅಧಿಕಾರಿಗಳು ಅಪಾರ ಮೌಲ್ಯದ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
62 ಕಡೆಗಳಲ್ಲಿ ಒಂದೇ ಬಾರಿಗೆ 15 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ರಾಜ್ಯಾದ್ಯಂತ ಬೇಟೆಯಾಡಿದ್ದಾರೆ. ರಾಜಧಾನಿ ಬೆಂಗಳೂರಿನ 10 ಕಡೆ ದಾಳಿ ನಡೆಸಿದ್ದು, ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಅವರ ಮನೆ, ಕಚೇರಿ ಸೇರಿ 11 ಕಡೆ ದಾಳಿ ನಡೆಸಲಾಗಿತ್ತು. ಇವರ ಮನೆಯಲ್ಲಿ ಮನೆಯಲ್ಲಿ 40 ಲಕ್ಷ ನಗದು ಸೇರಿ 1 ಕೋಟಿ 90 ಲಕ್ಷ ಮೌಲ್ಯದ ವಸ್ತುಗಳು, 100 ಎಕರೆಗೂ ಹೆಚ್ಚು ಬೇನಾಮಿ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಇನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯಲ್ಲಿ 32 ಲಕ್ಷ ನಗದು, ಚಿನ್ನಾಭರಣ ದೊರೆತಿದೆ. ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರುಗೆ ಸೇರಿದ 4 ಕಡೆ ದಾಳಿ ಮಾಡಲಾಗಿದ್ದು, 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ. ಚಿಕ್ಕಮಗಳೂರಿನಲ್ಲಿ ಒಟ್ಟು 4 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಜಿಲ್ಲಾ ನಿರ್ಮಿತಿ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಗಂಗಾಧರ್ ಮನೆ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ 16 ನಿವೇಶನಗಳು ಸೇರಿದಂತೆ ಒಟ್ಟು 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ.
ತುಮಕೂರಿನಲ್ಲಿ ಕೃಷಿ ಇಲಾಖೆ ಜಂಟಿ ಆಯುಕ್ತ ರವಿ ಮನೆಯಲ್ಲಿ 4.27 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ. ಮಡಿಕೇರಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಫ್ಡಿಎ ಅಬ್ದುಲ್ ಬಶೀರ್ ಬಳಿ 14 ಲಕ್ಷ ನಗದು ಸೇರಿ 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಬಳಿ 3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಎಲ್ಲಾ ಆಸ್ತಿ, ಚಿನ್ನಾಭರಣ ಹಾಗೂ ನಗದನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು, ಸದ್ಯ ಇದರ ಸಂಬಂಧ ತನಿಖೆ ನಡೆಯುತ್ತಿದೆ.