ಬೆಂಗಳೂರು, ನ.3: ಬೆಂಗಳೂರಿನ 14 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆಸಲಾಗಿದೆ.
ಹಿರಿಯ ಉಪನೋಂದಣಾಧಿಕಾರಿಗಳು ಮತ್ತು ವಿವಾಹ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಬದಿರುವ ದೂರುಗಳನ್ನು ಆಧರಿಸಿ ಈ ಬೃಹತ್ ದಾಳಿ ನಡೆಸಲಾಗಿದೆ. ಬೆಳಗ್ಗೆಯಿಂದ ಶೋಧ ಕಾರ್ಯ ನಡೆದಿದ್ದು, ಸಂಜೆಯವರೆಗೂ ಮುಂದುವರಿದಿತ್ತು.
ಲೋಕಾಯುಕ್ತರ ದಾಳಿ ವೇಳೆ ಹಲವು ಕಚೇರಿಗಳಲ್ಲಿ ಬೃಹತ್ ಮೊತ್ತದ ಹಣವನ್ನು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮಗಳಲ್ಲಿ ಭಾಗಿಯಾದ ಆರೋಪದ ಮೇಲೆ ಕೆಲವು ಸಬ್‌ರಿಜಿಸ್ಟ್ರಾರ್‌ಗಳು ಮತ್ತು ಮಧ್ಯವರ್ತಿಗಳ ಮೇಲೆ ಎಫ್‌ಐಆರ್ ಸಹ ದಾಖಲಾಗಿದೆ.
ಬೆಂಗಳೂರಿನ ಯಲಹಂಕ, ಬಾಣಸವಾಡಿ, ಮಹದೇವಪುರ, ವರ್ತೂರು, ಇಂದಿರಾನಗರ, ಬಸವನಗುಡಿ, ಆನೇಕಲ್, ಬನಶಂಕರಿ, ಕೆಂಗೇರಿ, ಜೆ.ಪಿ. ನಗರ, ಬ್ಯಾಟರಾಯನಪುರ ಸಹಿತ ಹಲವು ಕಚೇರಿಗಳ ಮೇಲೆ ದಾಳಿ ನಡೆದಿದೆ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಕಚೇರಿಗಳಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.