ಬೆಂಗಳೂರು ಜೂ 28; ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಕರ್ನಾಟಕದಾದ್ಯಂತ ಇಂದು(ಬುಧವಾರ) ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ ಬಾಗಲಕೋಟೆ,ಬೆಂಗಳೂರು,ರಾಯಚೂರು,ಕಲಬುರಗಿ,ಸೇರಿದಂತೆ ಇನ್ನು ಇತರೆ ಜಿಲ್ಲೆಗಳಲ್ಲೂ ಲೋಕಾಯುಕ್ತ ದಾಳಿಯಾಗಿದೆ,ದಾಳಿ ವೇಳೆ ಹಲವು ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಾಗಲಕೋಟೆ :ಜಿಲ್ಲೆಯ ವಿವಿಧ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ವಿದ್ಯಾಗಿರಿಯ ಅಕ್ಕಿಮರಡಿ ಲೇಔಟನಲ್ಲಿರುವ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟಿಲ್ ಸಹಾಯಕ ಕೃಷಿ ನಿರ್ದೇಶಕರು ಕೃಷ್ಣ ಶಿರೂರು ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಮನೆಯಲ್ಲಿ ದೊರಕಿದ ಪ್ರಮುಖ ದಾಖಲೆಗಳ ತನಿಖೆಯನ್ನುನಡೆಸುತ್ತಿದ್ದಾರೆ,ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರು: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.ಕೆ.ಆರ್.ಪುರ ತಹಶೀಲ್ದಾರ್ ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ, ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಶೋಧ ನಡೆಸಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಇವರ ವರ್ಗಾವಣೆಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು. ಲೋಕಾಯುಕ್ತ ಎಸ್‌ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ರಾಯಚೂರು;ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರ ಕಚೇರಿ ಮೇಲೆ ಮನೆಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪ ಅವರ ಮೇಲಿತ್ತು.ಲೋಕಾಯುಕ್ತ ಪೊಲೀಸರು ಆಸ್ತಿ ದಾಖಲೆಗಳ ಪರಿಶೀಲನೆ ನಡೆದಿದೆ.
ಕಲಬುರಗಿ;ನಗರ ಯೋಜನಾಧಿಕಾರಿ ಶರಣಪ್ಪ ಮಡಿವಾಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿದ್ದಾರೆ. ಕಲಬುರಗಿ ಹೊರವಲಯದ ನಾಗನಹಳ್ಳಿ ಬಳಿಯ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ರೇಡ್ ಮಾಡಿದೆ. ಶರಣಪ್ಪ ಮಡಿವಾಳ ಸದ್ಯ ಸಿಂಧನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂಧನೂರು ಕಲಬುರಗಿ ಎರಡೂ ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ನೇತೃತ್ವದಲ್ಲಿ ಪೊಲೀಸರು ಕಲಬುರಗಿಯ ಫಾರ್ಮ್ ಹೌಸ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.