ಗೃಹ ಸಾಲ ಪೂರೈಕೆದಾರ ದೊಡ್ಡ ಸಂಸ್ಥೆಯಾದ ಎಲ್ಐಸಿ ಹೌಸಿಂಗ್ ಫೈನಾನ್ಸ್ ತನ್ನ ಗೃಹಸಾಲಗಳ ಮೇಲಿನ ಬಡ್ಡಿದರವನ್ನು 50 ಮೂಲ ಅಂಶಗಳಷ್ಟು ಏರಿಕೆ ಮಾಡಿದೆ. ಪರಿಣಾಮವಾಗಿ ಶೇ 7.50ರಷ್ಟು ಇದ್ದ ಬಡ್ಡಿ ದರ ಈಗ ಶೇ 8ಕ್ಕೆ ಬಂದು ನಿಂತಿದೆ.
ಎಲ್‌ಐಸಿ ಹೌಸಿಂಗ್ ವೆಬ್‌ಸೈಟ್ ಮಾಹಿತಿ ಪ್ರಕಾರ, 800ಕ್ಕೂ ಅಧಿಕ ಸಿಬಿಲ್ ಸ್ಕೋರ್ ಹೊಂದಿರುವ ನೌಕರಿದಾರರಿಗೆ ರೂ. 15 ಕೋಟಿ ವರೆಗಿನ ಗೃಹ ಸಾಲಕ್ಕೆ ಶೇ 8ರಷ್ಟು ಬಡ್ಡಿದರ ಇರಲಿದೆ. 750ರಿಂದ 799ರ ವರೆಗೆ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ರೂ. 5 ಕೋಟಿ ವರೆಗಿನ ಸಾಲಕ್ಕೆ ಶೇ 8.05ರಷ್ಟು ಮತ್ತು ರೂ. 5 ಕೋಟಿಗಿಂತ ಹೆಚ್ಚು ಹಾಗೂ ರೂ. 15 ಕೋಟಿಗಿಂತ ಕಡಿಮೆ ಮೊತ್ತದ ಸಾಲಕ್ಕೆ ಶೇ 8.40ರಷ್ಟು ಬಡ್ಡಿ ದರ ಇರಲಿದೆ.
700ರಿಂದ 749ರ ನಡುವೆ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ರೂ. 50 ಲಕ್ಷದ ವರೆಗಿನ ಸಾಲಕ್ಕೆ ಶೇ 8.20 ಹಾಗೂ ರೂ. 50 ಲಕ್ಷದಿಂದ ರೂ. 2 ಕೋಟಿ ವರೆಗಿನ ಸಾಲಕ್ಕೆ ಬಡ್ಡಿದರ ಶೇ 8.40ರಷ್ಟು ಆಗಿದೆ. ರೂ. 2 ಕೋಟಿಯಿಂದ ರೂ. 15 ಕೋಟಿ ವರೆಗಿನ ಸಾಲಕ್ಕೆ ಶೇ 8.55ರಷ್ಟು ಬಡ್ಡಿ ವಿಧಿಸಲಾಗಿದೆ.
ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಬಡ್ಡಿರದ ಹೆಚ್ಚಳ ಮಾಡುತ್ತಿರುವುದು ಎರಡು ತಿಂಗಳುಗಳಲ್ಲಿ ಇದು ಎರಡನೇ ಬಾರಿ. ಆಗಸ್ಟ್ 22ರಂದು ತನ್ನ ಮೂಲ ಸಾಲದ ದರವನ್ನು 50 ಅಂಶಗಳಷ್ಟು ಹೆಚ್ಚಳ ಮಾಡಿತ್ತು.
ಬಡ್ಡಿದರವನ್ನು ಹೆಚ್ಚಿಸುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನ ಇತ್ತೀಚಿನ ನಿರ್ಧಾರವು ಆರ್‌ಬಿಐನ ವಿತ್ತೀಯ ನೀತಿ ನಿರ್ಧಾರಕ್ಕಿಂತ ಸ್ವಲ್ಪ ಮುಂಚಿತವಾಗಿ ಬಂದಿದೆ. ಹಣದುಬ್ಬರ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಕೇಂದ್ರೀಯ ಬ್ಯಾಂಕ್ ಮತ್ತೊಮ್ಮೆ ಮೂಲ ಸಾಲದ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಗಮನಾರ್ಹ ಅಂಶವೆಂದರೆ, ಹಣದುಬರವು ಸತತವಾಗಿ ಕೆಲವು ತಿಂಗಳುಗಳ ವರೆಗೆ ಆರ್‌ಬಿಐ ಸಹಿಷ್ಣುತಾ ವ್ಯಾಪ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ.
“ನಿರೀಕ್ಷೆಯಂತೆಯೇ, ಆರ್‌ಬಿಐ ಆಗಸ್ಟ್ 5ರಂದು ರೆಪೊ ದರವನ್ನು 50 ಮೂಲ ಅಂಶಗಳಷ್ಟು ಹೆಚ್ಚಳ ಮಾಡಿದ್ದು ಸರಿಯಾದ ಕ್ರಮವೇ ಆಗಿದೆ ಮತ್ತು ಜಾಗತಿಕ ಆರ್ಥಿಕ ಪ್ರವೃತ್ತಿಗೆ ಅನುಗುಣವಾಗಿದೆ. ರೆಪೊ ದರ ಹೆಚ್ಚಳದಿಂದಾಗಿ ಗೃಹ ಸಾಲಗಳ ಇಎಂಐ ಮತ್ತು ಮರುಪಾವತಿ ಅವಧಿಯ ಮೇಲೆ ಕನಿಷ್ಠ ಪ್ರಭಾವ ಬೀರಿದೆ. ಆದರೆ ಮನೆಗಳ ಬೇಡಿಕೆಯಂತೂ ದೃಢವಾಗಿಯೇ ಇರಲಿದೆ. ಆದ್ದರಿಂದ, ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಬಡ್ಡಿದರ ಹೆಚ್ಚಳವೂ ಮಾರುಕಟ್ಟೆಯ ಸನ್ನಿವೇಶಕ್ಕೆ ಅನುಗುಣವಾಗಿದೆ” ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈ. ವಿಶ್ವನಾಥ ಗೌಡ ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಕಳೆದ ಮೂರು ನೀತಿ ನಿರೂಪಕರ ಸಭೆಗಳಿಂದಾಗಿ ರೆಪೊ ದರದಲ್ಲಿ ಒಟ್ಟು 140 ಮೂಲ ಅಂಶಗಳಷ್ಟು ಹೆಚ್ಚಳ ಮಾಡಿದೆ. ಮೇ ತಿಂಗಳಲ್ಲಿ 40 ಮೂಲ ಅಂಶಗಳಷ್ಟು, ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ತಲಾ 50 ಮೂಲ ಅಂಶಗಳಷ್ಟು ಹೆಚ್ಚಳ ಆಗಿದೆ.