26.7 C
Bengaluru
Sunday, December 22, 2024

ಲೋಕಾಯುಕ್ತ ವಿರುದ್ಧ ಕೆಆರ್ಎಸ್ ಅಧ್ಯಕ್ಷ ಬೇಸರ: ನಗರದಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ಮಾರ್ಚ್ 14: ಲಂಚ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಅವರನ್ನು ಬಂಧಿಸದೆ ಲೋಕಾಯುಕ್ತ ಜಾಮೀನಿನ ಮೇಲೆ ಹೊರಗೆ ಬಿಟ್ಟು ಕರ್ತವ್ಯ ಲೋಪವನ್ನು ಎಸಗಿದ್ದಾರೆ. ಇದು ಖಂಡನೀಯ. ಭ್ರಷ್ಟ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆರೋಪಿಸಿ ಲೋಕಾಯುಕ್ತಗೆ ಕೆಆರ್ ಎಸ್ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಅವರು ಪತ್ರ ಬರೆದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ರವಿ ಕೃಷ್ಣ ರೆಡ್ಡಿ ಅವರು ಲೋಕಾಯುಕ್ತಗೆ ಪತ್ರವನ್ನು ಬರೆದಿದ್ದಾರೆ. ಭ್ರಷ್ಟ ಶಾಸಕ ಮಾಡಾಳ ವಿರೂಪಾಕ್ಷಪ್ಪ ಮತ್ತು ಮಾಗಡಿಯ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ನನ್ನು ಬಂಧಿಸದೆ ಅವರು ಜಾಮೀನಿನ ಮೇಲೆ ಹೊರಗಿರುವಂತೆ ಪಿತೂರಿ ಮಾಡಿ ಕರ್ತವ್ಯಲೋಪ ಎಸಗಿರುವ ಲೋಕಾಯುಕ್ತದ ಎಲ್ಲಾ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಜನವರಿ 2, 2023 ರಂದು ಲೋಕಾಯುಕ್ತ ಸಂಸ್ಥೆಯವರು ಲಂಚದ ಪ್ರಕರಣದಲ್ಲಿ ಮಾಗಡಿಯ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದನ ಕಚೇರಿ ಮೇಲೆ ದಾಳಿ ಮಾಡಿ ಆತನ ಏಜೆಂಟ್ ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದರು. ಆದರೆ ಪ್ರಕರಣದೆ ಎ1 ಆರೋಪಿ ಶ್ರೀನಿವಾಸ್ ಪ್ರಸಾದನನ್ನು ಬಂಧಿಸದೆ, ಆತ ತಪ್ಪಿಸಿಕೊಂಡು ಓಡಿಹೋಗಲು ಅವಕಾಶ ಮಾಡಿಕೊಟ್ಟರು. ವಾರಗಟ್ಟಲೆ ಆದರೂ ಆತನನ್ನು ಬಂಧಿಸದೆ ಇದ್ದಾಗ ಕೆಆರ್ ಎಸ್ ಪಕ್ಷದ ವತಿಯಿಂದ ರಾಮನಗರ ಜಿಲ್ಲೆಯ ಲೋಕಾಯುಕ್ತ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ಲೋಕಾಯುಕ್ತ ಅಧಿಕಾರಿಗಳ ಅದಕ್ಷತೆಯನ್ನು ಖಂಡಿಸಲಾಯಿತು.

ಆದರೆ, ಆಗಲೂ ಅವರು ತಮ್ಮ ಅಯೋಗ್ಯತೆ ಮುಂದುವರೆಸಿದ ಕಾರಣ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ ಪ್ರಸಾದ್ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಸಾಧ್ಯವಾಯಿತು. ಇಲ್ಲಿ ಕೇವಲ ಅದಕ್ಷತೆ ಮಾತ್ರವಲ್ಲ, ಲೋಕಾಯುಕ್ತ ಅಧಿಕಾರಿಗಳು ಆರೋಪಿಯಿಂದ ಲಂಚ ಪಡೆದು ಡೀಲ್ ಆಗಿರುವ ಸಾಧ್ಯತೆಗಳೇ ಹೆಚ್ಚು. ಇದಾದ ಎರಡು ತಿಂಗಳ ನಂತರ 02-03-2023 ರಂದು ಒಂದು ದೊಡ್ಡ ಹೈ ಪ್ರೊಫೈಲ್ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರತಿಷ್ಠಿತ ಕೆಎಸ್ ಡಿಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಮಗನೂ, ಕೆಎಎಸ್ ಅಧಿಕಾರಿಯೂ ಆಗಿರುವ ಪ್ರಶಾಂತ್, ತನ್ನ ತಂದೆಯ ಹೆಸರಿನಲ್ಲಿ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸ್ಥಳದಲ್ಲಿಯೇ ಬಂಧಿಸಿದರು.

ಆದರೆ, ಈ ಪ್ರಕರಣದಲ್ಲಿ ಎ1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪನನ್ನು ಬಂಧಿಸದೆ ಕಾಲಹರಣ ಮಾಡಿದರು. ಆರೋಪಿಗಳ ಮನೆಯಿಂದ ದಾಖಲೆ ಇಲ್ಲದ ಏಳೆಂಟು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದರೂ, ಮಾಡಾಳು ವಿರೂಪಾಕ್ಷಪ್ಪನನ್ನು ಬಂಧಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಇದಾದ ಆರೇಳು ದಿನಗಳ ನಂತರ ವಿರೂಪಾಕ್ಷಪ್ಪನ ಪರವಾಗಿ ತರಾತುರಿಯಲ್ಲಿ ರಾಜ್ಯ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ, ಆ ಸಮಯದಲ್ಲಿ ಬೇಕಂತಲೇ ಲೋಕಾಯುಕ್ತದ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಗೈರು ಹಾಜರಾಗುವ ಹಾಗೆ ನೋಡಿಕೊಳ್ಳಲಾಯಿತು. ಈ ಎಲ್ಲಾ ಪಿತೂರಿ, ಆದಕ್ಷತೆ, ನಾಲಾಯಕ್ತನ, ಭ್ರಷ್ಟಾಚಾರದ ಕಾರಣ ಕಡುಭ್ರಷ್ಟ ಆರೋಪಿಗೆ ಜಾಮೀನು ಸಿಕ್ಕಿತು.

ಈ ಪ್ರಕರಣ ಇಡೀ ಲೋಕಾಯುಕ್ತ ಸಂಸ್ಥೆಗೆ ಅವಮಾನಕಾರಿ. ಮಾಡಾಳು ವಿರೂಪಾಕ್ಷಪ್ಪನ ಮೆರವಣಿಗೆಯಂತೂ ರಾಜ್ಯದ ಜನರಿಗೆ ಮಾಡಿದ ಅವಮಾನ. ರಾಜ್ಯದ ಜನರ ಮರ್ಯಾದೆ ದೇಶ ಮಟ್ಟದಲ್ಲಿ ಹರಾಜಾಯಿತು. ಇದಕ್ಕೆಲ್ಲ ಕಾರಣ ಲೋಕಾಯುಕ್ತ ಸಂಸ್ಥೆಯ ಅಯೋಗ್ಯತನ, ಭ್ರಷ್ಟಾಚಾರ. ಹಾಗಾಗಿ ಈ ಕೂಡಲೇ ಈ ವಿಚಾರವಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ, ಅವರ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಆಂತರಿಕ ವಿಚಾರಣೆ ಆಗಬೇಕು ಎಂದು ಕೆಆರ್ ಎಸ್ ಪಕ್ಷ ಆಗ್ರಹಿಸುತ್ತದೆ. ರಾಜ್ಯದ ಜನರ ದೃಷ್ಟಿಯಲ್ಲಿ ನಗೆಪಾಟಲಿಗೀಡಾಗಿರುವ ಮತ್ತು ವಿಶ್ವಾಸವನ್ನು ಕಳೆದುಕೊಂಡಿರುವ ಲೋಕಾಯುಕ್ತ ಸಂಸ್ಥೆಯ ವಿಶ್ವಾಸವನ್ನು ಮರಳಿ ಪಡೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ಮಾಡಬೇಕೆಂದು ಒತ್ತಾಯಿಸುತ್ತೇವೆ. ಮಾಡಲು ಆಗದಿದ್ದದಲ್ಲಿ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಕೈ ಮುಗಿದು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

Related News

spot_img

Revenue Alerts

spot_img

News

spot_img