ಬೆಂಗಳೂರು, ಮೇ. 19 : ಧಾರವಾಡದ ಕೆಐಎಡಿಬಿಯಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಇದರ ತನಿಖೆ ಚುರುಕುಗೊಂಡಿದೆ. ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯನ್ನು ಸೃಷ್ಟಿ ಮಾಡಿ ಕೋಟಿಗಟ್ಟಲೇ ಹಣವನ್ನು ನುಂಗಿರುವುದು ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕೆಐಎಡಿಬಿಯಲ್ಲಿ ಏಜೆಂಟ್ ಆಗಿದ್ದ ಅಷ್ಪಾಕ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಷ್ಫಾಕ್ ಸೇರಿದಂತೆ ಇಲ್ಲಿಯವರೆಗೂ ಒಟ್ಟು ಎಂಟು ಜನರನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ರೈತರ ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವವರನ್ನು ಮಟ್ಟ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಪ್ರಕರಣ ಸಂಬಂಧ ಹಲವು ದಿನಗಳಿಂದ ಧಾರವಾಡದಲ್ಲಿಯೇ ಸಿಐಡಿ ತಂಡ ಬೀಡು ಬಿಟ್ಟಿದೆ. ಇದುವರೆಗೂ 14 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶತಾಯಗತಾಯ ಅನ್ಯಾಯ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಎಂದು ಸಿಐಡಿ ಅಧಿಕಾರಿಗಳು ಪಣ ತೊಟ್ಟಿದ್ದಾರೆ.
ಪ್ರಕರಣವೇನು?
ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಸರ್ಕಾರಕ್ಕೆ ವಂಚಿಸಿದ್ದರು. ಇದರಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿತ್ತು. ನಕಲಿ ಖಾತೆ ಮೂಲಕ ಸರ್ಕಾರದಿಂದ ಸುಮಾರು 22 ಕೋಟಿ ರೂಪಾಯಿ ಅನ್ನು ಲಪಟಾಯಿಸಲಾಗಿತ್ತು. ನಕಲಿ ದಾಖಲೆಯ ಮೂಲಕ ಒಂದೇ ಜಮೀನಿಗೆ ಎರಡು ಬಾರಿ ಪರಿಹಾರವನ್ನು ಪಡೆಯಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ರೈತರು ಹೋರಾಟ ಮಾಡಿದ್ದು, ಆಗ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.