ಫೆ-21;ಭದ್ರತ ಸಿಬ್ಬಂದಿಯ ಬೇಜಾವಾಬ್ದಾರಿಯಿಂದಾಗಿ ಫೆ.21 ರಂದು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಗೆ ಸೇರಿದ ಬಸ್ಸನ್ನು ಕೆಲವು ಖದೀಮರು ಓಡಿಸಿಕೊಂಡು ಪರಾರಿಯಾಗಿದ್ದಾರೆ. ಸದರಿ ಬಸ್ಸಿನ ನೊಂದಣಿ ಸಂಖ್ಯೆ: ಕೆಎ 38 ಎಫ್ 971 ಆಗಿದ್ದು ಬೀದರ್ ಜಿಲ್ಲೆಗೆ ಡಿಫೋ-02 ಗೆ ಸೇರಿದ ವಾಹನವಾಗಿರುತ್ತದೆ.
ಮೂಲಗಳ ಪ್ರಕಾರ, ಕಳ್ಳರು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನು ಮುಂಜಾನೆ 3.30 ರ ಸುಮಾರಿಗೆ ತೆಗೆದುಕೊಂಡು ಚಿಂಚೋಳಿ ತಾಲೂಕಿನ ಮಿರಿಯಾನ್ ಗ್ರಾಮಕ್ಕೆ ತೆರಳುವ ಮಾರ್ಗವಾಗಿ ತಾಂಡೂರಿನಲ್ಲಿ ತೆಲಂಗಾಣ ಗಡಿಯನ್ನು ದಾಟಿದ್ದಾರೆ. ಈ ಕಡೆ ಪ್ರಕರಣ ದಾಖಲಿಸಿಕೊಂಡು ಎರಡು ವಿಶೇಷ ತಂಡಗಳನ್ನು ರಚಿಸಿ ಕಳ್ಳತನವಾದ ಬಸ್ ಪತ್ತೆಗೆ ಶೋಧ ನಡೆಸಸುತ್ತಿರುವ ಪೊಲೀಸರು ದುಷ್ಕರ್ಮಿಗಳು ಬಸ್ ಅನ್ನು ಪ್ರತ್ಯೇಕ ಸ್ಥಳದಲ್ಲಿ ಬಿಟ್ಟು ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಹಾಗೂ ಬಸ್ಸಿನ ಬಗ್ಗೆ ಯಾವುದಾದರೂ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.