ತೊಂದರೆ ಮುಕ್ತವಾದ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದಾಗಿ ರಾಜ್ಯದ ಎಲ್ಲಾ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ʻಕಾವೇರಿ 2.0ʼ ತಂತ್ರಾಂಶ ಪರಿಚಯಿಸಲು ಕರ್ನಾಟಕ ಸರ್ಕಾರ ಸಜ್ಜಾಗಿದೆ. ʻಹೊಸ ತಂತ್ರಾಂಶವನ್ನು ಈಗಾಗಲೇ ಕಲಬುರಗಿಯ ಚಿಂಚೋಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ನವೆಂಬರ್ 1ರಿಂದ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆʼ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆಸ್ತಿ ನೋಂದಣಿ ಸಲುವಾಗಿ ಮೇಲಿಂದ ಮೇಲೆ ಉಪನೋಂದಣಾಧಿಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ತಂತ್ರಾಂಶವನ್ನು ಪರಿಚಯಿಸಲಾಗಿದೆ. ಕಾವೇರಿ 2.0 ಸಹಾಯದಿಂದ ಸಾರ್ವಜನಿಕರು ಆನ್‌ಲೈನ್ ಮೂಲಕವೇ ನೋಂದಣಿ ಮಾಡಬೇಕಾದ ಆಸ್ತಿಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಶುಲ್ಕವನ್ನೂ ಭರಿಸಬಹುದಾಗಿದೆ.
ಇದಾದ ನಂತರ ಆನ್‌ಲೈನ್‌ನಲ್ಲಿಯೇ ಉಪನೋಂದಣಾಧಿಕಾರಿ ಕಚೇರಿ ಭೇಟಿ ದಿನಾಂಕ ನಿಗದಿ ಮಾಡಿಕೊಳ್ಳಬಹುದು ಮತ್ತು ಭೇಟಿ ಸಂದರ್ಭದಲ್ಲಿ ಬಯೋಮೆಟ್ರಿಕ್ ವಿವರ ಸಲ್ಲಿಸಬಹುದು.
“ಒಮ್ಮೆ ಕಚೇರಿಗೆ ಭೇಟಿ ನೀಡಿದ ನಂತರ ಸಂಪೂರ್ಣ ನೋಂದಣಿ ಪ್ರಕ್ರಿಯೆಯು 5-10 ನಿಮಿಷಗಳಲ್ಲಿ ಪೂರ್ಣಗೊಂಡುಬಿಡುತ್ತದೆ” ಎಂದು ಸಚಿವರು ತಿಳಿಸಿದರು. ಆಸ್ತಿಯ ವಿಸ್ತಾರ ಮತ್ತು ವಿವರಗಳಿಗೆ ಅನುಗುಣವಾಗಿ ಖರೀದಿದಾರರು ಭರಿಸಬೇಕಾದ ಶುಲ್ಕವನ್ನು ತಂತ್ರಾಂಶವೇ ಸ್ವಯಂಚಾಲಿತವಾಗಿ ಲೆಕ್ಕಹಾಕುತ್ತದೆ ಎಂದೂ ಅವರು ಸೇರಿಸಿದರು.
ಆಸ್ತಿಯ ಯಶಸ್ವಿ ನೋಂದಣಿಯ ನಂತರ ಮೊಬೈಲ್ ಫೋನ್ಗಳಲ್ಲಿ ಮಾಹಿತಿ ನೀಡುವ ಜೊತೆಗೇ ಖರೀದಿದಾರರ ಡಿಜಿ-ಲಾಕರ್ಗೂ ದಾಖಲೆಗಳನ್ನು ರವಾನಿಸಲಾಗುತ್ತದೆ.
ʻನವೀಕರಿಸಿದ ತಂತ್ರಾಂಶವು ವ್ಯವಸ್ಥೆಯಲ್ಲಿ ಈಗ ಇರುವ ದೋಷಗಳನ್ನು ತೊಡೆದುಹಾಕುತ್ತದೆ. ಎಲ್ಲಾ ತಾಲ್ಲೂಕುಗಳಲ್ಲಿ ಆಸ್ತಿ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಏಜೆನ್ಸಿಗಳನ್ನು ಸ್ಥಾಪಿಸಲಿದೆ. ಮನೆ ಖರೀದಿದಾರರನ್ನು ಮೋಸಗೊಳಿಸುವುದರಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಏಜೆನ್ಸಿಗಳು ಕಾನೂನು ಪ್ರಕರಣಗಳನ್ನು ಗುರುತಿಸಲಿವೆ ಮತ್ತು ಅಗತ್ಯ ಬಿದ್ದಲ್ಲಿ ಕಡಿಮೆ ಶುಲ್ಕದಲ್ಲಿ ಗ್ರಾಹಕರಿಗೆ ಕಾನೂನು ನೆರವನ್ನೂ ಒದಗಿಸಲಿವೆʼ ಎಂದು ಸಚಿವರು ತಿಳಿಸಿದ್ದಾರೆ.
ಮೂರು ತಿಂಗಳು ರಿಯಾಯಿತಿ ಮುಂದುವರಿಕೆ: ʻರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಖರೀದಿದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನು ಮುಂದಿನ ಮೂರು ತಿಂಗಳುಗಳಿಗೆ ವಿಸ್ತರಿಸಲಿದೆ. ಇದಕ್ಕೆ ಸಂಬಂಧಿಸಿ ಆದೇಶ ಹೊರಡಿಸಲಾಗುವುದುʼ ಎಂದೂ ಅವರು ಇದೇ ವೇಳೆ ತಿಳಿಸಿದರು.
ʻರಿಯಾಯಿತಿಯ ಫಲಿತಾಂಶವಾಗಿ ಆಸ್ತಿ ವಹಿವಾಟಿನಲ್ಲಿ ಹೆಚ್ಚಳ ಉಂಟಾಗಿದೆ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮುದ್ರಾಂಕ ಮತ್ತು ಇತರ ಶುಲ್ಕದ ರೂಪದಲ್ಲಿ 6,700 ಕೋಟಿ ರೂಪಾಯಿ ಹರಿದುಬಂದಿದೆ. ಇದು 5,647 ಕೋಟಿ ರೂಪಾಯಿ ಸಂಗ್ರಹಿಸಲು ಹಾಕಿಕೊಂಡಿದ್ದ ಗುರಿಯನ್ನು ಮೀರಿದೆʼ ಎಂದರು.
ಈ ಆರ್ಥಿಕ ವರ್ಷದಲ್ಲಿ 14,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೊತ್ತವನ್ನು ಮುದ್ರಾಂಕ ಮತ್ತು ನೋಂದಣಿಯಿಂದ ಸಂಗ್ರಹಿಸಲು ರಾಜ್ಯ ಸರ್ಕಾರವು ಗುರಿ ನಿಗದಿಪಡಿಸಿಕೊಂಡಿದೆ.