#Kaveri 2.0 #Karnataka #Revenue department #Complaint #Lokayuktha
ಬೆಂಗಳೂರು, ಮೇ. 03: ಆಸ್ತಿಗಳ ನೋಂದಣಿಯನ್ನು ಆನ್‌ಲೈನ್ ನಲ್ಲಿಯೇ ಮಾಡುವ ಕಾವೇರಿ 2.0 ತಂತ್ರಾಂಶದಿಂದ ಹೈಟೆಕ್ ಬ್ರೋಕರ್ ಗಳ ಹುಟ್ಟಿಗೆ ನಾಂದಿ ಹಾಡಿದ್ದು, ಜನ ಸಾಮಾನ್ಯರು ಅನಿವಾರ್ಯವಾಗಿ ಬ್ರೋಕರ್ ಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟವಾಗಲಿದ್ದು, ಕಾವೇರಿ 2.0 ತಂತ್ರಾಂಶ ಕಾರ್ಯಗತ ಮಾಡುವಲ್ಲಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಸ್ಟಾಂಪ್ಸ್ ಅಂಡ್ ರಿಜಿಸ್ಟೇಷನ್ ಮಮತಾ ಹಾಗೂ ಎಐಜಿಆರ್ ಎಚ್.ಎಲ್ ಪ್ರಭಾಕರ್ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ ಡಿ. ರಾಮಸ್ವಾಮಿ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾಗಿರುವ ರಾಮಸ್ವಾಮಿ ಅವರು ನೀಡಿರುವ ದೂರಿನ ಸಾರಾಂಶವಿದು. ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಹೊರಡಿಸುರವ ಸುತ್ತೋಲೆಯಂತೆ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ 2 ತಂತ್ರಾಂಶಶವನ್ನು ಪರಿಚಯಿಸಲಾಗಿದೆ. ಈ ಕಾವೇರಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡಿದ್ದು,ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಖಾಸಗಿ ಕಂಪನಿಗಳಿಂದ ಅಕ್ರಮ ಹಣ ಸಂದಾಯ ಮಾಡಿದ್ದು, ಇದರಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಕಾವೇರಿ 2 ತಂತ್ರಂಶ ಪರಿಚಯಿಸುತ್ತಿರುವುದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಿಲ್ಲ. ಜೀವನದಲ್ಲಿ ಒಂದೆರಡು ಸಾರಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗುವ ಸಾರ್ವಜನಿಕರು ಕಾವೇರಿ 2 ತಂತ್ರಾಂಶ ಅರ್ಥಮಾಡಿಕೊಂಡು ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರು ನೋಂದಣಿಗಾಗಿ ಅನಿವಾರ್ಯವಾಗಿ ಬ್ರೋಕರ್ ಗಳನ್ನೇ ಅವಲಂಭಿಸಬೇಕಾಗಿದೆ. ಕಾವೇರಿ 2 ತಂತ್ರಾಂಶ ಪರಿಚಯಿಸುತ್ತಿರುವ ಕಾರಣದಿಂದ ಉಪ ನೋಂದಣಾಧಿಕಾರಿಗಳ ಕಚೇರಿ ಸುತ್ತಮುತ್ತ ಸೈಬರ್ ಸೆಂಟರ್ ಗಳು ಹುಟ್ಟಿಕೊಂಡಿದ್ದು, ದಾಖಲೆಗಳ ಅಪ್‌ಲೋಡ್ ಗಾಗಿಯೇ ನೂರಾರು ರೂಪಾಯಿ ನಿಗದಿ ಮಾಡಿದ್ದು, ಬ್ರೋಕರ್ ಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಆದ್ದರಿಂದ ಕಾವೇರಿ 2 ತಂತ್ರಾಂಶ ವನ್ನು ಹಿಂಪಡೆಯಬೇಕು. ಸಾರ್ವಜನಿಕರು ನೇರವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಾರ್ವಜನಿಕರ ದಾಖಲೆಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಬೇಕು. ಕಾವೇರಿ 2 ತಂತ್ರಾಂಶದಿಂದ ಹುಟ್ಟಿಕೊಂಡಿರುವ ಮಧ್ಯವತಿ್ಗಳಿಗೆ ಕಡಿವಾಣ ಹಾಕಲು ಸರ್ಕಾರವೇ ಸಾರ್ವಜನಿಕರ ದಾಸ್ತವೇಜುಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಕಾವೇರಿ 2 ತಂತ್ರಾಂಶದಿಂದ ರಾಜ್ಯದ ಶೇ. 80 ರಷ್ಟು ಮಂದಿ ದಾಸ್ತವೇಜುಗಳ ನೋಂದಣಿಗಾಗಿ ಹೊರಗಿನ ಬ್ರೋಕರ್ ಗಳನ್ನು ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕರ್ನಾಟಕ ಸ್ಟಾಂಪ್ಸ್ ಅಂಡ್ ರಿಜಿಸ್ಟ್ರೇಷನ್ ಕಾಯ್ದೆಯ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ಕಾವೇರಿ 2 ತಂತ್ರಾಂಶ ಕಾರ್ಯಗತ ಮಾಡುವುದರಿಂದ ಉಪ ನೋಂದಣಾಧಿಕಾರಿಗಳ ಕಚೇರಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬದಲಿಗೆ ಮತ್ತಷ್ಟು ಬ್ರೋಕರ್ ಗಳ ಉಗಮಕ್ಕೆ ನಾಂದಿ ಹಾಡಿದೆ. ಹೀಗಾಗಿ ಕಾವೇರಿ 2 ತಂತ್ರಾಂಶ ವನ್ನು ತಡೆ ಹಿಡಿದು ಈ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.