ಬೆಂಗಳೂರು, ಜು. 06 : ಕಾಸಾ ಗ್ರಾಂಡೆ ಲೊರೆಂಜಾ ಐಷರಾಮಿ ಅಪಾರ್ಟ್ ಮೆಂಟ್ ಗೆ ನೀಡಿದ್ದ ಸ್ವಾಧೀನ ಪ್ರಮಾಣ ಪತ್ರವನ್ನು ಬಿಬಿಎಂಪಿ ಹಿಂಪಡೆದುಕೊಂಡಿದೆ. ಯಲಹಂಕದ ಕೋಗಿಲು ಮುಖ್ಯರಸ್ತೆಯಲ್ಲಿ ಕಾಸಾ ಗ್ರಾಂಡೆ ಲೊರೆಂಜಾ ಅಪಾರ್ಟ್ ಮೆಂಟ್ ಅನ್ನು ನಿರ್ಮಾಣ ಮಾಡಲಾಗಿದೆ. ಬಿಲ್ಡರ್ ಗಳು ನಿಯಮ ಉಲ್ಲಂಘಿಸಿರುವ ಕಾರಣ 160 ಫ್ಲಾಟ್ ಗಳಿಗೆ ಬಿಬಿಎಂಪಿ ನೀಡಿದ್ದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಅನ್ನು ವಾಪಸ್ ಪಡೆದಿದೆ. ಈ ಅಪಾರ್ಟ್ ಮೆಂಟ್ ನಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ.
ಈ ಅಪಾರ್ಟ್ ಮೆಂಟ್ ನಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮನೆಗಳಿದ್ದು, ಇದರ ಫ್ಲಾಟ್ ಒಂದರಲ್ಲಿರುವ ಮಾಲೀಕರು ಬಿಬಿಎಂಪಿಗೆ ಕಳೆದ ವರ್ಷ ದೂರು ಸಲ್ಲಿಸಿದ್ದಾರೆ. ಕಾಸಾ ಗ್ರಾಂಡೆ ಗಾರ್ಡನ್ ಸಿಟಿ ಬಿಲ್ಡರ್ ಪ್ರೈವೇಟ್ ಲಿಮಿಟೆಡ್’ನ ಬಿಲ್ಡರ್ ಗಳು ನಿಯಮ ಉಲ್ಲಂಘಿಸಿದ್ದಾರೆ. 2017-2018 ರಲ್ಲಿ ಪ್ರಾರಂಭವಾದ ಕಾಮಗಾರಿ ಕೆಲಸಗಳು ಅಕ್ಟೋಬರ್ 2020 ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿತ್ತು.
ಹಾಗಾಗಿ 2019ರಲ್ಲಿ ರೂ.1.3 ಕೋಟಿ ನೀಡಿ 2BHK ಮತ್ತು 3BHKಯ 2 ಫ್ಲ್ಯಾಟ್ ಗಳನ್ನು ಮಾಲೀಕರೊಬ್ಬರು ಖರೀದಿ ಮಾಡಿದ್ದರು. ಆದರೆ, ನಿರ್ಮಾಣ ಪೂರ್ಣಗೊಂಡಿದ್ದು 2022 ಜನವರಿಯಲ್ಲಿ. ಈ ಕಟ್ಟ ನಿರ್ಮಾಣದಲ್ಲಿ ಸಾಕಷ್ಟು ಲೋಪದೋಷಗಳಿವೆ. ಕಟ್ಟಡದ ನೆಲಮಹಡಿಯನ್ನು ಯಾರಿಗೋ ಮಾರಾಟ ಮಾಡಲಾಗಿದೆ. ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಣೆ ಮಾಡಿಲ್ಲ. ಸೋಲಾರ್ ವಾಟರ್ ಹೀಟರ್ ಗಳ ವ್ಯವಸ್ಥೆ ಇಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‌ಒಸಿ ಅನ್ನು ಕೂಡ ಪಡೆದುಕೊಂಡಿಲ್ಲ.
ಇಷ್ಟೇ ಅಲ್ಲದೇ, ಮಳೆ ನೀರು ಕೋಯ್ಲು ಹಾಗೂ ಒಳಚರಂಡಿ ಸಂಸ್ಕರಣಾ ಘಟಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಬಿಲ್ಡರ್ ಗಳೂ ನಿಯಮ ಉಲ್ಲಂಘಿಸಿದ್ದಾರೆ. ಹಾಗಿದ್ದರೂ ಬಿಲ್ಡರ್ ಗಳು ಬಿಬಿಎಂಪಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೆಟ್ ಪಡೆದಿದ್‌ದಾರೆ ಎಂದು ದೂರು ನೀಡಲಾಗಿತ್ತು. ಈ ಸಂಬಂಧ ಜನವರಿ ತಿಂಗಳಿನಲ್ಲಿ ಬಿಬಿಎಂಪಿ ನೋಟಿಸ್ ನೀಡಿತ್ತು. ಬಿಲ್ಡರ್ ಗಳಿಂದ ಸಮಾಧಾನಕರ ಉತ್ತರ ಬಾರದ ಕಾರಣ ಈಗ ಸ್ವಾಧೀಪತ್ರವನ್ನು ಹಿಂಪಡೆದುಕೊಂಡಿದೆ.