ಬೆಂಗಳೂರು, ಏ. 19 : ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂಗೆ ಸಂಕಷ್ಟ ಎದುರಾಗಿದೆ. ಇಡಿ ಅಧಿಕಾರಿಗಳು ಕಾರ್ತಿ ಪಿ ಚಿದಂಬರಂ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾರ್ತಿ ಚಿದಂಬರಂ ಅವರಿಗೆ ಸೇರಿದ ಕೊಡಗಿನಲ್ಲಿರುವ 4 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಆಸ್ತಿಗಳ ಒಟ್ಟು ಮೌಲ್ಯ 11 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪಿ ಚಿದಂಬರಂ ಹಾಗೂ ಪುತ್ರ ಕಾರ್ತಿ ಪಿ ಚಿದಂಬರಂ ಅವರು ಐಎನ್‌ಎಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಅಕ್ರಮ ನಡೆಸಿದ್ದಾರೆ. ಕಂಪನಿಯಿಂದ ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ. ಶೆಲ್ ಕಂಪನಿಗಳ ಒಡೆತನವನ್ನೂ ಕೂಡ ಈ ಕುಟುಂಬ ತಮ್ಮ ಪ್ರಯೋಜನಕ್ಕೆ ಬಳಸಿಕೊಂಡಿರುವುದು ಇಡಿ ತನಿಖೆ ಮೂಲಕ ತಿಳಿದು ಬಂದಿದೆ. ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಕಾರ್ತಿ ಚಿದಂಬರಂ ಈಗಾಗಲೇ 3 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ.
ಜಾಮೀನಿನ ಮೇಲೆ ಹೊರ ಬಂದಿದ್ದು, ನ್ಯಾಯಾಲಯ ಹಲುವ ಷರತ್ತುಗಳನ್ನು ವಿಧಿಸಿದೆ. 106 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಕಾರ್ತಿ ಚಿದಂಬರಂ ಇದ್ದರು. ಈಗ ಪುನಃ ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಮುನ್ನೆಲೆಗೆ ಬಂದಿದೆ. 2007ರಲ್ಲಿ ಯುಪಿಎ ಸರ್ಕಾರದಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದರು. ಐಎನ್‌ಎಕ್ಸ್ ಮೀಡಿಯಾ ಗ್ರೂಪ್ ವಿದೇಶದಿಂದ 305 ಕೋಟಿ ರೂಪಾಯಿ ಬಂಡವಾಳ ಪಡೆಯಲು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ಅನುಮತಿ ಕೊಡಿಸಿದ್ದರು. ಇದರಲ್ಲಿ ಅಕ್ರಮ ನಡೆದಿತ್ತು. ಈ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2017ರಲ್ಲಿ ಪ್ರಕರಣ ದಾಖಲಾಗಿ ತನಿಖೆ ಶುರುವಾಗಿತ್ತು.