26.7 C
Bengaluru
Sunday, December 22, 2024

ಖಾಸಗಿ ಜಾಗದಲ್ಲಿ ವಾಸಿಸುವರಿಗೆ ಹಕ್ಕುಪತ್ರ: ಕಂದಾಯ ಇಲಾಖೆ ಆದೇಶ

ಬೆಂಗಳೂರು, ನ.8: ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಕೊಡುವ ಸಂಬಂಧ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದಲ್ಲಿ ನೆಲೆಗೊಂಡಿರುವ ಜನವಸತಿ ಪ್ರದೇಶಗಳ ಪೈಕಿ ಹಲವಾರು ಜನವಸತಿಗಳು, ವಿಶೇಷವಾಗಿ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರ ಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಇತ್ಯಾದಿಗಳನ್ನು ಜನವಸತಿ ಪ್ರದೇಶಗಳು ಎಂದು ಗುರುತಿಸಲಾಗುತ್ತದೆ. ಇದರಲ್ಲಿ ಬಹುತೇಕವು ಖಾಸಗಿ ಜಮೀನುಗಳಲ್ಲಿ ಮನೆಗಳು ನಿರ್ಮಾಣವಾಗಿದ್ದು, ದಾಖಲೆ ರಹಿತವಾಗಿವೆ. ಆದ್ದರಿಂದ ಅವು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೂ ಸಾಧ್ಯವಾಗಿಲ್ಲ. ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ಥಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ, ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕ ಸರ್ಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಗಿ ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಕಂದಾಯ ಗ್ರಾಮಗಳ ರಚನಾ ಕೋಶದ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್ ಎಂ.ಎನ್. ಅವರು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.

* ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಉಲ್ಲೇಖ (1) ತಿಳಿಸಿರುವ ಮಾನದಂಡಗಳ ಅನ್ವಯ ಖಾಸಗಿ ಜಮೀನಿನಲ್ಲಿ ಜನವಸತಿ ಇದ್ದಲ್ಲಿ ಅಂತಹ ಸರ್ವೇ ನಂಬರ್ ಮತ್ತು ವಿಸ್ತೀರ್ಣವನ್ನು ಗುರುತಿಸುವುದು.

* ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮ/ ಗ್ರಾಮದ ಭಾಗ, ಬಡಾವಣೆ/ ಉಪ ಗ್ರಾಮ ಆಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಬೇಕು. ಸಾರ್ವಜನಿಕ ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು.

* ದಾಖಲೆರಹಿತ ಜನವಸತಿಯು ನೆಲೆಸಿರುವ ಖಾಸಗಿಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂ ಮಾಲೀಕರೇ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಆದರೆ, ಗ್ರಾಮಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು.

* ಜಿಲ್ಲಾಧಿಕಾರಿಗಳ ಆದೇಶದ ತರುವಾಯ ಪಹಣಿ ಪತ್ರಿಕೆಯಲ್ಲಿ 2-ಇ ಅಧಿಸೂಚನೆಯನ್ನು ಮ್ಯುಟೇಷನ್ ಮುಖಾಂತರ ಖಾಸಗಿ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಅಂದರೆ, ಕಲಂ 9ರಲ್ಲಿ ಭೂ ಮಾಲೀಕರ ಹೆಸರನ್ನು ತೆಗೆದು ಸರ್ಕಾರ ಎಂದು ನಮೂದಿಸಬೇಕು. 2-ಇ ಅಧಿಸೂಚನೆಯಲ್ಲಿ ಹೊರಡಿಸಿರುವ ವಿಸ್ತೀರ್ಣಕ್ಕೆ ಮಾತ್ರವೇ ಪಹಣಿಯಲ್ಲಿ ಸೇರ್ಪಡೆ ಮಾಡಬೇಕು.

* ಸರ್ಕಾರ ಎಂದು ಪಹಣಿಯಲ್ಲಿ ಸೇರ್ಪಡೆಯಾದ ನಂತರ ಖಾಸಗಿ ಜಾಗದಲ್ಲಿ ನೆಲೆಸಿರುವ ಸಹಾಯಕ ಆಯುಕ್ತರು/ ತಹಶೀಲ್ದಾರ್ ರವರಿಗೆ ಮನೆಯ ಅಥವಾ ಅದಕ್ಕೆ ಸೇರಿದ ಭೂಮಿಗೆ ಮಾಲೀಕರಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಬಹುದು.

* ಕೃಷಿ ಕಾರ್ಮಿಕನು ಮಾಲೀಕತ್ವ ನೋಂದಾಯಿಸಿಕೊಳ್ಳುವುದಕ್ಕೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು ನಮೂನೆ 2-ಇ ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಒಳಗೆ ಸಹಾಯಕ ಆಯುಕ್ತರು/ ತಹಶೀಲ್ ಕಚೇರಿಗೆ ಸಲ್ಲಿಸಬೇಕು. ಖಾಸಗಿ ಜಮೀನಿನನ್ನು ಸರ್ಕಾರಕ್ಕೆ ವಶಪಡಿಸಿಕೊಂಡ ತಕ್ಷಣವೇ ತಹಶೀಲ್ದಾರ್‌ರವರು ಮತ್ತು ಸಹಾಯಕ ಆಯುಕ್ತರು, ಖಾಸಗಿ ಜಮೀನಿನಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಬಹುದು. ಹೊಸ ಕಂದಾಯ ಗ್ರಾಮ ಘೋಷಣೆಯಾಗುವವರೆಗೆ ಕಾಯುವ ಅವಶ್ಯಕತೆ ಇಲ್ಲ.

ದಾಖಲೆ ರಹಿತ ಜನವಸತಿಗಳು ಇದ್ದರೆ…

* ತಹಶೀಲ್ದಾರ್‌ರವರು ದಾಖಲೆ ರಹಿತ ಜನವಸತಿಗಳಿಗೆ ಖುದ್ದಾಗಿ ತಂಡದ ಜೊತೆ ಭೇಟಿ ನೀಡಿ ಗ್ರಾಮವಾರ ಅರ್ಜಿ ಸ್ವೀಕಾರ ಮಾಡಬೇಕು. ಬಳಿಕ ಆ ಆರ್ಜಿಗಳನ್ನು ತಹತಶೀಲ್ದಾರ್ ಕಚೇರಿಗೆ ಕಳುಹಿಸಬೇಕು. ಬಳಿಕ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಸರ್ವೆ ನಂಬರ್, ವಿಸ್ತೀರ್ಣ ಮತ್ತು ಗಡಿಗಳನ್ನು ನಿರ್ದಿಷ್ಟಪಡಿಸಿ ಪಟ್ಟಿ ಮಾಡಬೇಕು.

* ಉಪಸಹಾಯಕವಾಗಿ ಸೇರಿರುವ ಭೂಮಿಯಲ್ಲಿ ವಾಸಿಸುವ ಮನೆ ಮಾಲೀಕರು ಸಲ್ಲಿಸಿರುವ ಅರ್ಜಿಯನ್ನು ಸಹಾಯಕ ಆಯುಕ್ತರು ವಿಚಾರಣೆ ನಡೆಸಬೇಕು. ವಿಚಾರಣೆ ನಡೆಸಲು ವೈಯಕ್ತಿಕವಾಗಿ (ನಮೂನೆ 2-ಐ ರಲ್ಲಿ) ಮತ್ತು ಸಾರ್ವಜನಿಕವಾಗಿ ಸೂಚನೆ/ ನೋಟಿಸ್ (ನಮೂನೆ 2- ಎಚ್‌)ರಲ್ಲಿ ಹೊರಡಿಸಬೇಕು. ಈ ನೋಟಿಸ್‌ನಲ್ಲಿ ಸಹಾಯಕ ಆಯುಕ್ತರು, ಅರ್ಜಿದಾರು ಹಾಜರಾಬೇಕಾದ ದಿನಾಂಕ, ಸಮಯ, ನ್ಯಾಯಾಲಯದ ಆವರಣ ಮತ್ತು ಇತ್ಯಾದಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

* ವಿಚಾರಣೆಯನ್ನು ಕಡ್ಡಾಯವಾಗಿ ಸಹಾಯಕ ಆಯುಕ್ತರೇ ನಡೆಸಬೇಕು. ಅರ್ಹ ವ್ಯಕ್ತಿಯನ್ನು ಮನೆಯ ಮತ್ತು ಅದಕ್ಕೆ ಸೇರಿದ ಭೂಮಿಗೆ ಮಾಲೀಕರಾಗಿ ನೋಂದಾಯಿಸಲು ಅರ್ಹವಿರುವ ವ್ಯಕ್ತಿಗೆ 4000 ಚ.ಮೀಟರ್. ಮೀರದಂತೆ ಅಥವಾ ವ್ಯಕ್ತಿಯ ನೈಜ ಸ್ವಾಧೀನದ ಭೂಮಿಯನ್ನು ಲಿಖಿತ ಆದೇಶದ ಮೂಲಕ ನಿರ್ಧರಿಸಬೇಕು.

* ಸಹಾಯಕ ಆಯುಕ್ತರ ವಿಚಾರಣೆಯ ನಂತರ ವೈಯಕ್ತಿಕವಾಗಿ ಸರ್ವೆ ನಂಬರ್‌ವಾರು ಆದೇಶವನ್ನು ಹೊರಡಿಸಬಹುದು.

* ವಿಚಾರಣೆಯಲ್ಲಿ ಅರ್ಜಿದಾರನು ಭೂ ಮಾಲೀಕನೆಂದು ಸಹಾಯಕ ಆಯುಕ್ತರು ಘೋಷಣೆ ಅಥವಾ ಆದೇಶ ಮಾಡಿದ ತರುವಾಯ ತಹಶೀಲ್ದಾರ್‌ರವರು ಅರ್ಹ ಭೂ ಮಾಲೀಕರ ಪಟ್ಟಿಯನ್ನು ಸಿದ್ಧಪಡಿಸಬೇಕು.

* ತಹಶೀಲ್ದಾರ್‌ರವರು ಸಹಾಯಕ ಆಯುಕ್ತರಿಂದ ವಿಚಾರಣೆ ಆದೇಶವನ್ನು ಸ್ವೀಕರಿಸಿದ ನಂತರ ಅರ್ಜಿ ದಾರರಿಗೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮೊತ್ತವನ್ನು ನಿಗದಿಪಡಿಸಬೇಕು. ಅರ್ಜಿದಾರರಿಗೆ ಮಂಜೂರು ಮಾಡುತ್ತಿರುವ ಜಾಗದ ಜೊತೆಗೆ ಸಮುದಾಯದ ಜನರು ಬಳಸುತ್ತಿರುವ ರಸ್ತೆ, ಕಿರುದಾರಿ, ಪಥ, ಬೀದಿ, ಶಾಲೆ, ದೇವಾಲಯ, ಆರೋಗ್ಯ, ಚಿಕಿತ್ಸಾಲಯ, ಕೊಳವೆ ಬಾವಿ, ತೆರೆದ ಬಾವಿ, ಮೈದಾನ, ತಿಪ್ಪೆಗಳ ವಿಸ್ತೀರ್ಣಕ್ಕೆ ವಾಸಸ್ಥಳದಲ್ಲಿ ವಾಸಿಸುವ ಕೃಷಿ ಕಾರ್ಮಿಕನು ಮಂಜೂರಾದ ಭೂಮಿಗೆ ಅನುಪಾತದಲ್ಲಿ ಮೊತ್ತವನ್ನು ಸಹ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

Related News

spot_img

Revenue Alerts

spot_img

News

spot_img