26.9 C
Bengaluru
Friday, July 5, 2024

ಪೊಲೀಸರ ‘ಕಾಮಿಡಿ ಕ್ಯಾಪ್’ ಗೆ ಮುಕ್ತಿ ಯಾವಾಗ ?

ಬೆಂಗಳೂರು ಡಿ. 14:
ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಓಡುವಾಗ ಚೆಡ್ಡಿ ಅದೆಲ್ಲಿ ಕಳಚಿ ಬೀಳುತ್ತೋ ಎನ್ನುವ ಭಯದಲ್ಲಿ ಕೈಯಲ್ಲಿ ಹಿಡಿದುಕೊಂಡೇ ಓಡೋದನ್ನು ನೋಡಿದ್ದೀವಿ! ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಗಳ ‘ಕಾಮಿಡಿ ಕ್ಯಾಪ್’ ಪರಿಸ್ಥಿತಿಯೂ ಅದೇ ತರ ಇದೆ. ಕಳ್ಳ ಅಥವಾ ಕ್ರಿಮಿನಲ್ ನನ್ನು ಬೆನ್ನಟ್ಟಿ ಹಿಡಿಯಲು ಹೋದಾಗ ಒಂದು ಕೈಯಲ್ಲಿ ಹ್ಯಾಟ್ ಹಿಡಿದುಕೊಂಡೇ ರನ್ ಮಾಡಬೇಕು! ಬ್ರಿಟೀಷರು ಜಮಾನದಲ್ಲಿ ಕುದುರೆ ಜಾಕಿಗಳಿಗೆ ಪರಿಚಯಿಸಿದ ಟೋಪಿ ಧರಿಸುವ ಬಗ್ಗೆ ಪೊಲೀಸ್ ಕಾನ್‌ಸ್ಟೇಬಲ್ ವಲಯದಲ್ಲಿ ಅಪಸ್ವರವಿದೆ.

ಈಗಿರುವ ಕ್ಯಾಪ್ ಧರಿಸಿ ಪೊಲೀಸರು ಬೈಕ್ ನಲ್ಲಿ ಚಲಿಸಲು ಸಾಧ್ಯವಿಲ್ಲ. ಅನೇಕ ಸಿನಿಮಾಗಳಲ್ಲಿ ಪೊಲೀಸರ ಕ್ಯಾಪ್ ಮೂಲಕವೇ ಕಾಮಿಡಿ ಮಾಡುವುದು ಚಾಲ್ತಿಯಲ್ಲಿದೆ. ಕರ್ನಾಟಕ ಪೊಲೀಸರು ಇಡೀ ದೇಶಕ್ಕೆ ಮಾದರಿ. ತನಿಖೆ, ಶಿಸ್ತು ವಿಚಾರದಲ್ಲಿ ದೇಶದಲ್ಲಿಯೇ ಕೀರ್ತಿ ಗಳಿಸಿರುವ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಟೆಕ್ನಾಲಜಿಯಲ್ಲಿ ಎಲ್ಲರಿಗಿಂತಲೂ ಕರ್ನಾಟಕ ಪೊಲೀಸರು ಒಂದು ಹೆಜ್ಜೆ ಮುಂದೆ ಇದ್ದಾರೆ. ಅದರಂತೆ ಪೊಲೀಸ್ ಕಾನ್‌ಸ್ಟೇಬಲ್ ಗಳ ಬಹು ವರ್ಷಗಳ ಬೇಡಿಕೆ ‘ ಕ್ಯಾಪ್ ಬದಲಾವಣೆ’ ಮಾತ್ರ ಈವರೆಗೂ ಅಗಲೇ ಇಲ್ಲ.
ಹೌದು. ಪೊಲೀಸರ ಟೋಪಿ ವಿಚಾರ ದಶಕಗಳಿಂದಲೂ ಚರ್ಚೆಯಲ್ಲಿಯೇ ಉಳಿದುಕೊಂಡಿದೆ. ಬ್ರಿಟೀಷರು ಓಬಿರಾಯನ ಕಾಲದಲ್ಲಿ ಪರಿಚಯಿಸಿದ ಟೋಪಿಯನ್ನೇ ಈಗಲೂ ಪೊಲೀಸರು ಧರಿಸುತ್ತಿದ್ದಾರೆ. ಅದನ್ನು ಧರಿಸಿ ಓಡಲು ಸಾಧ್ಯವಿಲ್ಲ. ಕಳ್ಳ ಅಥವಾ ಕ್ರಿಮಿನಲ್ ನನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವೇ ಇಲ್ಲ! ಒಂದು ವೇಳೆ ಓಡುವಾಗ ಬಿದ್ದು ಹೋದರೆ ಶಿಸ್ತಿನ ಹುದ್ದೆಗೆ ಅಗೌರವ ತೋರಿದಂತಾಗುತ್ತದೆ.

ಬ್ರಿಟೀಷಕರು ಪರಿಚಯಿಸಿರುವ ಓಬಿರಾಯನ ಕಾಲದ ಟೋಪಿ ಬದಲಿಸಿ ಎಂದು ಪೊಲೀಸರು ದಶಕಗಳಿಂದಲೂ ಕೇಳುತ್ತಲೇ ಇದ್ದಾರೆ. ಪೊಲೀಸ್ ಇಲಾಖೆಯಾಗಲೀ , ಗೃಹ ಮಂತ್ರಿಯಾಗಲೀ ಈ ವರೆಗೂ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯದ 225 ಶಾಸಕರಲ್ಲಿ ಒಬ್ಬರೂ ಸಹ ಈ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿಲ್ಲ. ಬೆಳಗಾವಿಯಲ್ಲಿ ಡಿಸೆಂಬರ್ 19 ರಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಹ್ಯಾಟ್ ವಿಚಾರ ಪೊಲೀಸ್ ವಲಯದಲ್ಲಿ ಬಾರೀ ಚರ್ಚೆ ಹುಟ್ಟು ಹಾಕಿದೆ. ಈಗಲಾದರೂ ಪೊಲೀಸರ ಕಾಮಿಡಿ ಹ್ಯಾಟ್ ಗೆ ಮುಕ್ತಿ ಸಿಗಬಹುದೇ ? ಅಂದಹಾಗೆ ಪೊಲೀಸರು ಪ್ರಸ್ತುತ ಧರಿಸುತ್ತಿರುವ ಟೋಪಿ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಪೊಲೀಸ್ ಮಾದರಿ ಪೊಲೀಸ್ ಎಂದೇ ಖ್ಯಾತಿ ಪಡೆದಿದೆ. ತನಿಖೆ, ಕಾರ್ಯ ಕ್ಷಮತೆ, ಅಧುನೀಕರಣ, ತಂತ್ರಜ್ಞಾನ ಬಳಕೆಯಲ್ಲಿ ದೇಶದಲ್ಲೇ ಮಾದರಿ ಹೆಜ್ಜೆಗಳನ್ನು ಇಟ್ಟಿದೆ. ಕಾಲ ಬದಲಾದಂತೆ ಪೊಲೀಸ್ ಇಲಾಖೆಯಲ್ಲಿ ಸಮವಸ್ತ್ರ ಸೇರಿದಂತೆ ಎಲ್ಲವೂ ಬದಲಾಗಿದೆ. ಆದರೆ ಓಬಿರಾಯನ ಕಾಲದಲ್ಲಿ ಪರಿಚಯಿಸಿದ ಟೋಪಿ ಬಿಟ್ಟು    ಈಗಿರುವ ವೃತ್ತಾಕಾರದ ಟೋಪಿಯ ಬಗ್ಗೆ ಪೊಲೀಸ್ ಕಾನ್‌ಸ್ಟೇಬಲ್ ಗಳು ಅಪಸ್ವರ ಎತ್ತುತ್ತಿದ್ದಾರೆ. ಆದರೆ, ಅದನ್ನು ಹೇಳಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಅನೇಕ ಸಲ ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಈವರೆಗೂ ಆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವೂ ಆಗಿಲ್ಲ.

ಸದ್ಯ ಪೊಲೀಸರು ಧರಿಸುತ್ತಿರುವ ಟೋಪಿ ಅನಾದಿ ಕಾಲದಲ್ಲಿ ಬ್ರಿಟೀಷಕರು ಕುದುರೆ ಜಾಕಿಗಳಿಗೆ ಪರಿಚಯಿಸಿದ ಟೋಪಿ. ಸದ್ಯ ಈ ಟೋಪಿ ಧರಿಸಿ ಪೊಲೀಸರು ಕರ್ತವ್ಯ ನಿರ್ವಹಿಸುವುದು ಹಿರಲಿ. ಅನೇಕ ಪ್ರಸಂಗಗಳಲ್ಲಿ ಜನ ಸಾಮಾನ್ಯರೇ ಆಡಿಕೊಳ್ಳುವಂತಿದೆ. ವಾಸ್ತವದಲ್ಲಿ ಈಗಿರುವ ಟೋಪಿ ಧದರಿಸಿ ಓಡಾಡಲಿಕ್ಕೆ ಸಾಧ್ಯವಿಲ್ಲ. ಹ್ಯಾಟ್ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ. ಇದೇ ಹ್ಯಾಟ್ ಧರಿಸಿ ಕರ್ತವ್ಯದ ಮೇಲೆ ದೂರ ತೆರಳಲು ಸಾಧ್ಯವಿಲ್ಲ. ಅಪರಾಧಿಗಳನ್ನು ಬೆನ್ನಟ್ಟಿ ಹಿಡಿಯುವಾಗ ಈ ಟೋಪಿ ರಕ್ಷಣೆ ಮಾಡುವುದೇ ದೊಡ್ಡ ದುಸ್ಸಾಹಸ. ಅನೇಕ ಸಿನಿಮಾಗಳಲ್ಲಿ ಪೊಲೀಸರ ಹಳೇ ಹ್ಯಾಟ್ ಧೊರಿಸಿ ಅಪಹಾಸ್ಯ ಮಾಡಿ ಮಾನಸ್ಥಿಕ ಸ್ಥೈರ್ಯ ವನ್ನೇ ಕುಗ್ಗಿಸಲಾಗಿದೆ. ವಾಸ್ತವದಲ್ಲಿ ಈ ಟೋಪಿಯಿಂದ ಏನೂ ಪ್ರಯೋಜನವಿಲ್ಲ. ಅದರ ಬದಲಿಗೆ ಕಮಾಂಡೋ ಕ್ಯಾಪ್ ಅಥವಾ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಗಳು ಧರಿಸುತ್ತಿರುವ ಕ್ಯಾಪ್ ಗಳನ್ನು ಪೊಲೀಸ್ ಕಾನ್‌ಸ್ಟೇಬಲ್ ಗಳಿಗೂ ಕೊಡಲಿ ಎಂಬುದು ಪೊಲೀಸ್ ಸಿಬ್ಬಂದಿಯ ಮನದಾಳದ ಮನವಿ. ಈವರೆಗೂ ಬದಲಾವಣೆಯ ಸಣ್ಣ ಪ್ರಯತ್ನವೂ ಅಗಿಲ್ಲ.

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಅದಕ್ಕೆ ತಕ್ಕಂತೆ ಎಲ್ಲವೂ ಬದಲಾಗಿದೆ. ಆದ್ರೆ ಟೋಪಿ ಮಾತ್ರ ಬದಲಾಗಿಲ್ಲ. ಈಗಲಾದರೂ ಪೊಲೀಸರ ಓಬಿರಾಯನ ಕಾಲದ ಟೋಪಿ ಬದಲಿಗೆ ಪೊಲೀಸರು ಗರ್ವ ಪಡುವಂತಹ , ತಲೆ ಮೇಲೆ ನಿಲ್ಲುವಂತಹ ಕಮಾಂಡೋ ಕ್ಯಾಪ್ ಗಳನ್ನು ಕೊಡುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡುವರೇ ಎಂಬ ಚರ್ಚೆ ನಡೆಯುತ್ತಿದೆ. ಬದಲಾವಣೆ ಕೇವಲ ಆಧುನೀಕರಣಕ್ಕೆ ಸೀಮಿತವಾಗದೇ ಪೊಲೀಸ್ ಕಾನ್‌ಸ್ಟೇಬಲ್ ಗಳ ಬಹು ವರ್ಷಗಳ ಬೇಡಿಕೆ ಈಡೇರೀತೇ ಎಂಬ ಪ್ರಶ್ನೆ ಪೊಲೀಸರದ್ದು. ಈ ಮನವಿಗೆ ಗೃಹ ಸಚಿವರು ಸ್ಪಂದಿಸಿ ಕಾಮಿಡಿ ಕ್ಯಾಪ್ ಬದಲಿಸುವರೇ ?

ಬದಲಾವಣೆ ಗೆ ಏನು ಮಾಡಬೇಕು ? : ಪೊಲೀಸರ ಕ್ಯಾಪ್ ಬದಲಾವಣೆಗೆ ಸಂಬಂಧಪಟ್ಟಂತೆ ನ್ಯಾಯಾಧೀಶರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಪೊಲೀಸರ ಕ್ಯಾಪ್ ಬದಲಾವಣೆ ಸಾಧಕ ಬಾಧಕಗಳ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಒಂದು ವೇಳೆ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಎಲ್ಲವನ್ನೂ ಪರಮಾರ್ಶಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಅದಕ್ಕೆ ಸಮ್ಮಿತಿ ಸೂಚಿಸಿದರೆ ಪೊಲೀಸ್ ಟೋಪಿ ಬದಲಾವಣೆ ಮಾಡಬಹುದು ಎನ್ನುತ್ತಾರೆ ಕಾನೂನು ತಜ್ಞರು.

Related News

spot_img

Revenue Alerts

spot_img

News

spot_img