ಬೆಂಗಳೂರು, ಮಾ. 15 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ನೌಕರರಿಗೆ ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಷ್ಕರದ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟಿದ್ದು, ನೌಕರರಿಗೆ ಸಂತಸವನ್ನು ತಂದಿದೆ. ಕೆ ಪಿಟಿಸಿ ಎಲ್ ನ ಎಲ್ಲಾ ಎಸ್ಕಾಂ ನೌಕರರ ವೇತನ ಹೆಚ್ಚಳವನ್ನು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2022 ರ ಏಪ್ರಿಲ್ ನಿಂದ ಅನ್ವಯವಾಗುವಂತೆ ವೇತನ ಹೆಚ್ಚಳದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈಗಿರುವ ವೇತನದ ಮೇಲೆ ಶೇ.20 ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಟಿಸಿ ಎಲ್ ನೌಕರರು ಮಾಡಿದ್ದ ಪ್ರತಿಭಟನೆಯ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಕೆಪಿಟಿಸಿ ಎಲ್ ನೌಕರರು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದರು. ಕಳೆದ ವರ್ಷವೇ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ, ಸರ್ಕಾರ ವೇತನ ಪರಿಷ್ಕರಣ ಮಾಡದ ಹಿನ್ನೆಲೆ ಕೆಪಿಟಿಸಿಎಲ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದರು. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 14 ದಿನಗಳ ಗಡುವು ಕೂಡ ನೀಡಿದ್ದರು. ನೌಕರರು ನೀಡಿದ್ದ ಗಡುವು ಇಂದಿಗೆ ಮುಕ್ತಾಯಗೊಂಡಿದೆ. ನಾಳೆಯಿಂದ ಕೆಲಸಕ್ಕೆ ಹಾಜರಾಗದೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನೌಕರರು ಮುಂದಾಗಿದ್ದರು. ತಕ್ಷಣ ಎಚ್ಚೆತ್ತ ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.