24.5 C
Bengaluru
Thursday, December 19, 2024

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನಿವೃತ್ತಿ: ರಜನೀಶ್‌ ಗೋಯಲ್‌ಗೆ ಸಿಎಸ್ ಭಾಗ್ಯ!

#Vnaditha Sharma, #Rajanish Goyal, #Chief Secretary of Karnataka,

ಬೆಂಗಳೂರು, ನ. 21: ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ನವೆಂಬರ್‌ ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್‌ ಗೋಯಲ್ ಅವರು ಆಯ್ಕೆಯಾಗುವ ಸಂಭವವಿದೆ.

2022 ಮೇ ನಲ್ಲಿ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಹಿಂದಿನ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ ಅವರ ನಿವೃತ್ತಿ ಹಿನ್ನೆಲೆಯಲ್ಲಿ ವಂದಿತಾ ಶರ್ಮಾ ಅವರನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನೇಮಿಸಿತ್ತು.

1986 ನೇ ಬ್ಯಾಚ್‌ ನ ಐಎಎಸ್ ಅಧಿಕಾರಿಯಾಗಿದ್ದ ವಂದಿತಾ ಶರ್ಮಾ ಅವರು ರಾಜ್ಯದ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. 36 ವರ್ಷ ಸೇವಾವಧಿಯಲ್ಲಿ ಕಂದಾಯ ಭೂಮಿ ನಿರ್ವಹಣೆ, ಜಿಲ್ಲಾ ಆಡಳಿತ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷರಾಗಿದ್ದ ವಂದಿತಾ ಶರ್ಮಾ ಅವರು ಐಎಎಸ್ ಅಧಿಕಾರಿ ವಿಶ್ವನಾಥ್‌ ಮೇಲೆ ಕೆ.ಅರ್‌. ಪುರಂ ಮಾಜಿ ಶಾಸಕ ನಂದೀಶ್‌ ರೆಡ್ಡಿ ನಡೆಸಿದ್ದ ಹಲ್ಲೆ ಪ್ರಕರಣವನ್ನು ಬಹಿರಂಗವಾಗಿ ಖಂಡಿಸಿದ್ದರು. ಕೋವಿಡ್‌ ಸಂಕಷ್ಟ ದಲ್ಲಿ ರಾಜ್ಯದಲ್ಲಿ ವಾಕ್ಸಿನೇಷನ್‌ ನ ನೋಡಲ್ ಅಧಿಕಾರಿಯಾಗಿ ಸಮರ್ಥ ಕೆಲಸ ನಿರ್ವಹಿಸಿದ್ದರು.

ಮುಖ್ಯ ಕಾರ್ಯದರ್ಶಿ ಹುದ್ದೆ ಮಹತ್ವ: ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆ ಕಾರ್ಯಾಂಗದ ಅತಿ ಹುನ್ನತ ಹುದ್ದೆ. ಹಿರಿಯ ಐಎಎಸ್ ಅಧಿಕಾರಿಯನ್ನು ರಾಜ್ಯದ ಮುಖ್ಯಮಂತ್ರಿಗಳು ನೇಮಕ ಮಾಡುತ್ತಾರೆ. ಮುಖ್ಯಮಂತ್ರಿಗಳಿಗೆ ಪ್ರಧಾನ ಸಲಹೆಗಾರರಾಗಿ ಹಾಗೂ ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ. ಇವರ ಸೇವಾವಧಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಸಾಮಾನ್ಯವಾಗಿ ನಿವೃತ್ತಿ ಆಗುವ ವರೆಗೂ ಆ ಹುದ್ದೆಯಲ್ಲಿ ಮುಂದುವರೆಯಬಹುದು. ಮುಖ್ಯ ಕಾರ್ಯದರ್ಶಿಯ ಸೇವೆ ತೃಪ್ತಿ ತರದಿದ್ದರೆ ಮುಖ್ಯಮಂತ್ರಿಗಳು ಸಮ ದರ್ಜೆಯ ಬೇರೆ ಐಎಎಸ್ ಅಧಿಕಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬಹುದು.

ನೂತನ ಸಿಎಸ್ ಆಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇಮಕವಾಗುವ ಸಾಧ್ಯತೆಯಿದ್ದು, ಅವರ ನಿವೃತ್ತಿ ಬಳಿಕ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್‌ ಅವರು ಸಿಎಸ್ ಆಗುವ ಸಂಭವವಿದೆ.

Related News

spot_img

Revenue Alerts

spot_img

News

spot_img