ಬೆಂಗಳೂರು, ಏ. 24 : ಹೈದರಾಬಾದ್‌ನಿಂದ ಬೀದರ್‌ಗೆ ಸಾಗಿಸುತ್ತಿದ್ದ 18 ಲಕ್ಷ ರೂ. ಹಣ ಹಾಗೂ 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ. ದಾಖಲೆ ಇಲ್ಲದೆ ಹಣ ಮತ್ತು ಬೆಳ್ಳಿ ನಾಣ್ಯಗಳನ್ನು ಬೀದರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೀದರ್ ಮತ್ತು ತೆಲಂಗಾಣ ಗಡಿಯ ಶಾಪೂರ್ ಗ್ರಾಮದ ಬಳಿ ಚೆಕ್ ಪೋಸ್ಟ್‌ನಲ್ಲಿ ಹಣ ಪತ್ತೆಯಾಗಿದೆ. ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ 18 ಲಕ್ಷ ರೂ. ಹಣ, 5 ಗ್ರಾಂನ 1,250 ನಾಣ್ಯಗಳು ಮತ್ತು 1 ಗ್ರಾಂನ 1,000 ಬೆಳ್ಳಿ ನಾಣ್ಯಗಳು ಪತ್ತೆಯಾಗಿದೆ.
ಸ್ಥಳಕ್ಕೆ ಜೊಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಅಕ್ರಮ ಸಾಗಾಟ ಮಾಡುತ್ತಿದ್ದ ಕಾರು, ಹಣ ಹಾಗೂ ಬೆಳ್ಳಿಯ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ 25 ದಿನಗಳು ಕಳೆದಿವೆ. ಅಷ್ಟರಲ್ಲಾಗಲೇ ಕೋಟಿಗಟ್ಟಲೆ ಅಕ್ರಮ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ರಂಗು ರಾಜ್ಯದಲ್ಲಿ ಜೋರಾಗಿದೆ. ಮತಬೇಟೆಗೆ ರಾಜಕಾರಣಿಗಳು ಇನ್ನಿಲ್ಲದ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದರೂ ಕೂಡ ತಮ್ಮ ಮತಬ್ಯಾಂಕ್ ಅನ್ನು ತುಂಬಿಸಿಕೊಳ್ಳಲು ಮರೆ ಮರೆಯಲ್ಲಿ ಏನೆಲ್ಲಾ ಮಾಡಬೇಕೋ ಎಲ್ಲವನ್ನು ಮಾಡುತ್ತಿದ್ದಾರೆ. ಆದರೆ, ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ಸುಮ್ಮನೆ ಕೂರದೆ, ರಾಜ್ಯದ ಹಲವೆಡೆ ಚೆಕ್ ಪೋಸ್ಟ್ ಗಳನ್ನು ಹಾಕಿದ್ದಾರೆ. ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.