21.1 C
Bengaluru
Thursday, December 19, 2024

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂಗೆ ಕೋಕ್ : ಎಚ್‌ಡಿಕೆಗೆ ಪಟ್ಟ : ದೊಡ್ಡ ಗೌಡರ ಮೂರು ಸಾಲಿನ ವಿಸರ್ಜನೆ ನೋಟ್ !

#JDS #H.D Devegowda, #JDS State president CM Ibrahim #HD Kumarswamy,

ಬೆಂಗಳೂರು, ಅ. 19: ಬಿಜೆಪಿ – ಜೆಡಿಎಸ್ ಮೈತ್ರಿಯ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು “ವಿಸರ್ಜನೆ” ಮಾಡಿ ಜೆಡಿಎಸ್ ವರಿಷ್ಠ, ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ ಅವರನ್ನು ಜೆಡಿಎಸ್ ಅಡಹಾಕ್ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ದೊಡ್ಡಗೌಡರು, ಸಕಾರಣ ನೀಡದೇ ಸಂವಿಧಾನದ ವಿಧಿ ಉಲ್ಲೇಖಿಸಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೆಸರು ಉಲ್ಲೇಖಿಸದೇ ಹುದ್ದೆ ಸೂಚಿಸಿ ಹೊರ ಹಾಕಿದ್ದಾರೆ.ರಾಜ್ಯದಲ್ಲಿ ಮುಂದಿನ ವರ್ಷ ಎದುರಾಗಲಿರುವ ಲೋಕ ಸಭಾ ಚುಣಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಕಣ್ಣೀರು ಹಾಕುತ್ತಾ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರಿದ್ದ ಸಿ.ಎಂ. ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಿದ್ದರು. ರಾಜ್ಯದಲ್ಲಿ ಪೂರ್ಣಾವಧಿ ಕಾಂಗ್ರೆಸ್‌ ಸರ್ಕಾರ ಬಂದ ಹಿನ್ನೆಲೆಯಲ್ಲಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತು.

ಬಿಜೆಪಿ – ಜೆಡಿಎಸ್ ಮೈತ್ರಿಯ ಬಗ್ಗೆ ಸಿಎಂ ಇಬ್ರಾಹಿಂ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ನಾನು ರಾಜ್ಯಾಧ್ಯಕ್ಷ, ಕುಮಾರಸ್ವಾಮಿಯನ್ನೇ ಪಕ್ಷದಿಂದ ಉಚ್ಛಾಟಿಸುತ್ತೇನೆ ಎಂದು ಇತ್ತೀಚೆಗೆ ಹೇಳಿಕೆ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕುಮಾರಸ್ವಾಮಿ ಕೌಂಟರ್ ನೀಡಿದ್ದರು.

ಈ ಭಿನ್ನಮತದ ಮೇಲಾಟಗಳ ನಡುವೆ ದೊಡ್ಡಗೌಡರು ಎಂಟ್ರಿ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷರನ್ನು ಮಾತ್ರವಲ್ಲದೇ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಒಗ್ಗೂಡಿಸಿ ವಿಸರ್ಜನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮೂರು ಸಾಲಿನ ಆದೇಶದಲ್ಲಿ ಸಿಎಂ ಇಬ್ರಹಾಂ ಹೆಸರು ಉಲ್ಲೇಖಿಸದೇ ರಾಜ್ಯಾಧ್ಯಕ್ಷರು ಸಂಬೋಧಿಸಿ ಜೆಡಿಎಸ್ ನಿಂದ ಹೊರ ಹಾಕಿದ್ದಾರೆ. ಇದಕ್ಕೆ ಸಂವಿಧಾನದ ಕ್ಲಾಸ್ xx (10) ವಿಧಿ ಉಲ್ಲೇಖಿಸಿ ವಿಸರ್ಜನೆ ಮಾಡಿದ್ದಾರೆ. ಬಿಜೆಪಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ ಇಬ್ರಾಹಿಂ ಅವರನ್ನು ಹುದ್ದೆಯಿಂದ ಕೆಳಗೆ ಇಳಿಸಿದ್ದಾರೆ. ಪಕ್ಷದ ಚಟುವಟಿಕೆಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅಡಹಾಕ್ ಅಧ್ಯಕ್ಷರನ್ನಾಗಿ ನೇಮಿಸಿ ದೊಡ್ಡ ಗೌಡರು ಆದೇಶ ಹೊರಡಿಸಿದ್ದಾರೆ. ದೊಡ್ಡ ಗೌಡರ ಈ ನಡೆಯಿಂದ ಬಿಜೆಪಿ- ಜೆಡಿಎಸ್ ಮೈತ್ರಿಯ ಹಾದಿಗೆ ಪಕ್ಷದಲ್ಲಿದ್ದ ಆಂತರಿಕ ತೊಡಕು ಸದ್ಯಕ್ಕೆ ನಿವಾರಣೆ ಆದಂತಾಗಿದೆ.

ಮತ್ತೆ ಕಾಂಗ್ರೆಸ್ ಸೇರುವರೆ ಇಬ್ರಾಹಿಂ ? ರಾಜಕಾರಣದಲ್ಲಿ ಹಾಸ್ಯ ಮಿಶ್ರಿತ ಡೈಲಾಗ್‌ ಗಳಿಂದಲೇ ಕುಹುಕವಾಡುವ ಮೂಲಕ ಪರಿಚಿತ ಸಿ.ಎಂ ಇಬ್ರಾಹಿಂ ಭಾಷಣವೆಂದರೆ ರಾಜ್ಯದ ಜನರಿಗೆ ಮನೋರಂಜನೆ ಸಿಗುತ್ತದೆ. ಆ ಪರಿಯ ಅವರ ಮಾತಗಾರಿಕೆ ಕೌಶಲ್ಯ ಹೊಂದಿದ್ದಾರೆ. ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗಿದ್ದ ಸಿ.ಎಂ. ಇಬ್ರಾಹಿಂ ಇತ್ತೀಚೆಗಷ್ಟೇ ಜ್ಯಾತ್ಯಾತೀತ ಪಕ್ಷ ಸೇರಿದ್ದರು. ಬಿಜೆಪಿ ಜತೆಗಿನ ಸಖ್ಯಕ್ಕೆ ವಿರೋಧ ತೋರಿದ್ದರು. ಇದೀಗ ಜೆಡಿಎಸ್ ನಿಂದ ಹೊರ ಬಿದ್ದಿದ್ದು ಅವರ ಮುಂದಿನ ಹಾದಿ ಕಾಂಗ್ರೆಸ್ ನತ್ತವೇ ಇಲ್ಲಾ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಕಾದು ನೋಡಬೇಕು. ಕಾಂಗ್ರೆಸ್ ತೊರೆಯುವ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಬೇಸರದ ಮಾತುಗಳನ್ನಾಡಿ ಕಣ್ನೀರು ಹಾಕಿದ್ದರು. ರಾಜಕೀಯ ನಿವೃತ್ತಿ ಘೋಷಣೆ ಮಾಡುವ ದಟ್ಟ ಸಾಧ್ಯತೆಯಿದೆ.

 

Related News

spot_img

Revenue Alerts

spot_img

News

spot_img