#It raid, #HD Kumaraswamy, #CM Siddaramaiah, #It raid in Karnataka,
ವಾಸ್ತು ಶಿಲ್ಪಿಯ ವಾಸ್ತು ಹುಡುಕಿ; ಸತ್ಯ ಗೊತ್ತಾಗುತ್ತೆ ಎಂದ ಮಾಜಿ ಸಿಎಂ
ಮೈಸೂರು oct 16: ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ದಾಳಿಯ ಕುರಿತಂತೆ ಸ್ಫೋಟಕ ಅಂಶಗಳನ್ನು ಬಹಿರಂಗ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಮೊದಲ ದಿನ ಸಿಕ್ಕಿದ್ದು ಎಸ್.ಎಸ್.ಟಿ. ಟ್ಯಾಕ್ಸ್ ಹಣ, ಎರಡನೇ ದಿನ ಸಿಕ್ಕಿದ್ದು ವೈ.ಎಸ್.ಟಿ. ಟ್ಯಾಕ್ಸ್ ಹಣ ಎಂದು ಹೇಳಿದ್ದಾರೆ.ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಧ್ಯಮಗಳ ಜತೆ ಮಾತನಾಡಿದರು.ಇದು ಯಾರಪ್ಪನ ದುಡ್ಡು ಅಲ್ಲ, ಗುತ್ತಿಗೆದಾರರದು ಅಥವಾ ರಾಜಕಾರಣಿಗಳ ಹಣವಲ್ಲ. ಇದು ಸಂಪೂರ್ಣವಾಗಿ ರಾಜ್ಯದ ಜನರ ಹಣ ಎಂದರು ಮಾಜಿ ಮುಖ್ಯಮಂತ್ರಿಗಳು.
ನಾನು ಸತ್ಯ ಹರಿಶ್ಚಂದ್ರ, ಸಿದ್ದ ಪುರುಷ ಅಂತ ಹೇಳುವ ಸಿಎಂ ಐಟಿ ದಾಳಿ ಬಗ್ಗೆ ತನಿಖೆ ಮಾಡಿಸಲಿ. ಇವರು ತನಿಖೆ ಮಾಡಿದರೆ ಏನಾಗುತ್ತದೆ ಎಂದು ನಮಗೂ ಗೊತ್ತು. ರಾಜ್ಯಪಾಲರಿಗೆ ಕೃಷಿ ಇಲಾಖೆ ಅಧಿಕಾರಿಗಳು ಪತ್ರ ಬರೆದ ಪ್ರಕರಣ ಏನಾಯಿತು? ಈ ಬಗ್ಗೆ ತನಿಖೆ ಮಾಡಿಸಿದ್ದೀರಲ್ಲ ಏನಾಯಿತು? ಈಗ ಸಿಕ್ಕಿರುವ ಹಣದ ಬಗ್ಗೆಯೂ ತನಿಖೆ ಮಾಡಿಸಿ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಐಟಿ ದಾಳಿ ವೇಳೆ ಹಣ ಸಿಕ್ಕವರು ದೊಡ್ಡ ಗುತ್ತಿಗೆದಾರರೇನಲ್ಲ. ಆದರೆ, ಆ ಹಣ ಯಾರದ್ದು ಎನ್ನುವ ಅನುಮಾನಗಳು ಸಾಕಷ್ಟು ಇವೆ. ಗುತ್ತಿಗೆದಾರನಿಗೂ ವಾಸ್ತು ಶಿಲ್ಪಿಗೂ ಏನು ಸಂಬಂಧ? ಬೆಂಗಳೂರಿನಲ್ಲಿರುವ ಸಿಎಂ ಮನೆ ನವೀಕರಣ ಮಾಡುತ್ತಿರುವರು ಯಾರು? ಮೈಸೂರಿನ ಮನೆಯ ವಾಸ್ತು ಶಿಲ್ಪದ ಕೆಲಸ ಮಾಡುತ್ತಿರುವವರು ಯಾರು? ಈ ವಾಸ್ತು ಶಿಲ್ಪಿ ಯಾರಿಗೆ ಹತ್ತಿರ ಇದ್ದಾರೆ? ವಾಸ್ತುಶಿಲ್ಪಿ ವಾಸ್ತು ಕೆದಕಿದರೆ ಎಲ್ಲ ಬಯಲಾಗುತ್ತದೆ. ಎಲ್ಲವೂ ತನಿಖೆ ಆಗಬೇಕು ಎಂದು ಅವರು ಒತ್ತಾಯ ಮಾಡಿದರು.
ಸೂಕ್ತ ರೀತಿಯಲ್ಲಿ ತನಿಖೆ ನಡೆದರೆ ಎಲ್ಲವೂ ಬಯಲಾಗುತ್ತದೆ. ಐಟಿ ದಾಳಿ ವೇಳೆ ಸಿಕ್ಕ ಹಣಕ್ಕೆ ಮೈಸೂರಿನ ನಂಟು ಇದೆಯಾ ಎನ್ನುವ ಬಗ್ಗೆಯೂ ಅನುಮಾನ ಇದೆ. ಅದು ಕೂಡ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಆಗ್ರಹಪಡಿಸಿದರು.
ಪಂಚರಾಜ್ಯಗಳ ಎಲೆಕ್ಷನ್ ಗೆ ಕಾಂಗ್ರೆಸ್ ಹೈಕಮಾಂಡ್ ಹಣ ಕೇಳಿಲ್ಲ ಅಂತಾರೆ ಇವರು. ಕೇಳದಿದ್ದರೆ ಇಷ್ಟೊಂದು ಹಣ ಸಂಗ್ರಹ ಮಾಡುತ್ತಾರೆಯೇ? ಒಂದು ವೇಳೆ ಸ್ವತಃ ಹೈಕಮಾಂಡ್ ನವರೇ ಕೇಳಿದರೆ ಇನ್ನು ಎಷ್ಟೊಂದು ಹಣ ಸಂಗ್ರಹ ಮಾಡುತ್ತಿದ್ದರು ಇವರು? ರಾಜ್ಯದಲ್ಲಿ ಈಗ ಜಿ.ಎಸ್.ಟಿ ಕಲೆಕ್ಷನ್ ಗಿಂತ ಎಸ್.ಎಸ್.ಟಿ. ಮತ್ತು ವೈ.ಎಸ್.ಟಿ. ಟ್ಯಾಕ್ಸ್ ಕಲೆಕ್ಷನ್ನೇ ಜೋರಾಗಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರವಿದು. ಜನ ಭಾರೀ ನಿರೀಕ್ಷೆಯಿಂದ ಇವರನ್ನು ಗೆಲ್ಲಿಸಿದ್ದರು. ಆದರೆ ಹಿಟಾಚಿಗಳಿಂದ ಹಣವನ್ನು ಬಾಚುತ್ತಿದ್ದಾರೆ. ಜನರೇ ತಿರುಗಿ ಬೀಳುವ ಕಾಲ ದೂರವಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದವು, ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕೆಲಸಗಳು ಏನಾರೂ ಆಗುತ್ತಿವೆಯಾ? ಬರೀ ಶೂನ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೊಸತಾಗಿ ಗೆದ್ದ ಶಾಸಕರು ತಮ್ಮ ಕ್ಷೇತ್ರಗಳ ಕಡೆ ತಲೆ ಹಾಕುತ್ತಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಅಂತ ಅವರು ಗೋಳಾಡುತ್ತಿದ್ದಾರೆ. ಶಾಸಕರು ನಾಪತ್ತೆ ಆಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.ನಾಗಮಂಗಲ ಬಸ್ ಕಂಡಕ್ಟರ್ ವಿಷ ಕುಡಿದ ಪ್ರಕರಣ ಏನಾಯಿತು? ಆ ಪ್ರಕರಣದ ತನಿಖೆ ಎಲ್ಲಿಗೆ ಬಂತು? ಇವರ ತನಿಖೆಗಳ ಹಣೆಬರಹ ನನಗೆ ಚೆನ್ನಾಗಿ ಗೊತ್ತಿದೆ. ಎಲ್ಲೆಲ್ಲಿ ಯಾರು ಯಾರನ್ನು ಅಡ್ಜೆಸ್ಟ್ ಮಾಡಿಕೊಳ್ತಿದ್ದೀರಾ ಅನ್ನೋದು ನನಗೂ ಗೊತ್ತಿದೆ. ನಾವು ಸತ್ಯ ಹರಿಶ್ಚಂದ್ರರು ಎಂದು ಹೇಳುವವರು ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಹೇಳಲಿ ನೋಡೋಣ ಎಂದು ಅವರು ಮತ್ತೆ ಮತ್ತೆ ಒತ್ತಾಯ ಮಾಡಿದರು.
ಐಟಿ ದಾಳಿ ಮಾಡುವಾಗ ನಮ್ಮ ರಾಜ್ಯದ ಅಧಿಕಾರಿಗಳು ಇರುವುದಿಲ್ಲವೇ? ಅವರಿಗೂ ಮಾಹಿತಿ ಇರುತ್ತದೆ, ಕೊನೆಪಕ್ಷ ಅವರಿಂದಲಾದರೂ ಮಾಹಿತಿ ಪಡೆದು ಸತ್ಯಾಂಶ ಹೇಳಿ. ಐಟಿ ದಾಳಿಯಲ್ಲಿ ಸಿಕ್ಕ ಹೆಚ್ಚು ಕಡಿಮೆ ನೂರು ಕೋಟಿ ರೂಪಾಯಿ ಹಣ ಜನರ ತೆರಿಗೆ ಹಣದ ಬಗ್ಗೆ ಸತ್ಯ ಹೇಳಿ. ಈ ಹಣ ಯಾವುದೋ ಗುತ್ತಿಗೆದಾರ ಅಥವಾ ಬೇರೆ ವ್ಯಕ್ತಿಗೆ ಸೇರಿದ್ದಲ್ಲ. ಆ ಹಣ ಯಾರಿಗೆ ಸೇರಿದ್ದು ಎಂದು ಸರಿಯಾಗಿ ತನಿಖೆ ಮಾಡಿದರೆ ಇವರೆಲ್ಲರ ಬಣ್ಣ ಬಯಲಾಗುತ್ತದೆ ಎಂದು ಅವರು ಹೇಳಿದರು.
ಪಂಡಿತ್ ರಾಜೀವ್ ತಾರಾನಾಥ್ ರಿಂದ ಕಮೀಷನ್ ಕೇಳಿದ್ದು ನಾಚಿಕೆಗೇಡು
ಹಿಂದುಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ರಾಜೀವ್ ತಾರಾನಾಥರ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳು ಮೂರು ಲಕ್ಷ ರೂಪಾಯಿ ಕಮೀಷನ್ ಕೇಳಿದ್ದು ನಾಚಿಕೆಗೇಡು, ಇದು ರಾಜ್ಯಕ್ಕೆ ಅಪಮಾನ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.ಇದು ಸಾಧಾರಣ ಪ್ರಕರಣ ಅಲ್ಲ. ಇಲ್ಲಿ ಅಧಿಕಾರಿ ಲಂಚ ಕೇಳಲು ಮೂಲ ಕಾರಣ ಯಾರು? ಆ ಅಧಿಕಾರಿ ದೊಡ್ಡ ಪ್ರಮಾಣದಲ್ಲಿ ಲಂಚ ಕೊಟ್ಟು ಇಲ್ಲಿಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದಾನೆ. ಅದಕ್ಕೆ ಲಂಚ ಕೇಳಿದ್ದಾನೆ. ಈ ಸರಕಾರದಲ್ಲಿ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.