ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಜೀವಮಾನ ಪೂರ್ತಿ ದುಡಿದರೂ ಒಂದು ಮನೆ ಕಟ್ಟಿಕಳ್ಳುವುದು ಅಥವಾ ಒಂದು ಯಾವುದಾದರೂ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಫ್ಲಾಟ್ ಖರೀದಿಸುವುದೇ ದೊಡ್ಡ ಸಾಧನೆ. ಇಂತಹದ್ದರಲ್ಲಿ ಮನೆ ಖರೀದಿಸಲು ಮುಂದಾದ ವ್ಯಕ್ತಿ ಆರ್ಥಿಕವಾಗಿ ಹಣಕಾಸು ಹೊಂದಿಸಲು ಎಷ್ಟು ಪ್ರಯತ್ನ ಪಡುತ್ತಾನೋ ಅಷ್ಟೇ ಮನೆ ಅಥವಾ ಫ್ಲಾಟ್‌ಗೆ ಸಂಬಂಧಿದಿದ ದಾಖಲೆಗಳನ್ನು ನಿರ್ವಹಿಸುವುದು ಅಥವಾ ಪರಿಶೀಲನೆ ಮಾಡುವುದೂ ಸಹ ಪ್ರಮುಖವಾಗಿರುತ್ತದೆ.
ಯಾವುದೇ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುವಾಗ ಅವುಗಳಿಗೆ ಲೈಸನ್ಸ್ ಮತ್ತು ಕಟ್ಟಡದ ನಕ್ಷೆ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ನಗರ ಪ್ರದೇಶಗಳಲ್ಲಿ ಪುರಸಭೆ, ನಗರಸಭೆ, ನಗರಪಾಲಿಕೆ ಇವುಗಳು ಪ್ಲಾನ್ ಅಪ್ರೂವಲ್ ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಯವರು ಪ್ಲಾನ್‌ಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ಜನರು ಪ್ಲಾನ್ ಅಪ್ರೂವಲ್ ಪಡೆಯುವ ಮೊದಲು ಪ್ಲಾನ್ ಅಪ್ರೂವಲ್ ಪಡೆಯಬೇಕಾದರೆ ಕಾನೂನಿನ ಅನ್ವಯ ರಸ್ತೆ ಹಾಗೂ ನಿವೇಶನಕ್ಕೆ ಅನುಗುಣವಾಗಿ ಸೆಟ್‌ಬ್ಯಾಕ್ ಮತ್ತು ಕೆಲವು ನಾಗರಿಕ ಸೌಲಭ್ಯಗಳನ್ನು ಬಿಡಬೇಕು ಎಂಬ ನಿಯಮವಿದೆ. ಅದರನುಸಾರ ಪ್ಲಾನ್‌ಗೆ ಅರ್ಜಿ ಹಾಕುವಾಗ ಕಾನೂನಿನ ಅನ್ವಯ ಪ್ಲಾನ್ ತಯಾರಿಸಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯುತ್ತಾರೆ.
ತದನಂತರ ಕಟ್ಟಡ ಕಟ್ಟಲು ಪ್ರಾರಂಭಿಸಿ ಶೇಕಡಾ 95ರಷ್ಟು ಜನ ಪ್ಲಾನ್‌ನ ಪ್ರಕಾರ ಕಟ್ಟುವುದಿಲ್ಲ. ಅವರಿಗೆ ಹೇಗೆ ಸರಿ ಎನಿಸುತ್ತದೋ ಆ ಪ್ರಕಾರವೇ ನಿರ್ಮಾಣ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಆ ರಸ್ತೆಗೆ ಮೂರು ಅಂತಸ್ತು ಅನುಮತಿ ಇದ್ದರೆ ನಾಲ್ಕು ಅಂತಸ್ತು ಕಟ್ಟುವುದು, ನಿವೇಶನ ಸುತ್ತ ಸೆಟ್‌ಬ್ಯಾಕ್ ಬಿಡದೆ ಕಟ್ಟುವುದು, ಒಂದು ಮನೆಗೆ ಮತ್ತೊಂದು ಮನೆಗೆ ಕ್ಲಬ್ ಆಗಿ ಕಟ್ಟುವುದು, ಸಾರ್ವಜನಿಕ ರಸ್ತೆಯನ್ನೂ ಸ್ವಲ್ಪ ಮಟ್ಟಿಗೆ ಒತ್ತುವರಿ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತದೆ.
ಮನೆ ಕಟ್ಟಿದ ನಂತರ ಗೃಹ ಪ್ರವೇಶ ಮಾಡಿ ವಾಸ ಮಾಡಲು ಪ್ರಾರಂಭಿಸುತ್ತಾರೆ. ಇಂತಹ ಸಂದರ್ಭದಲ್ಲಿಯೇ ಎದುರಾಗುವುದು ಓಸಿ- ಆಕ್ಯುಪೆನ್ಸ್ಇ ಸರ್ಟಿಫಿಕೇಟ್ ಮತ್ತು ಸಿಸಿ- ಕಂಪ್ಲೀಷನ್ ಸರ್ಟಿಫಿಕೇಟ್.
ಕಾಮಗಾರಿ ಪೂರ್ಣಗೊಂಡ ನಂತರ ಇಂತಹ ನಿವೇಶನಗಳಿಗೆ ಆಕ್ಯಪೆನ್ಸಿ ಸರ್ಟಿಫಿಕೇಟ್ ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಪ್ರಾಧಿಕಾರದವರು ಸ್ಥಳ ತನಿಖೆ ಮಾಡಿದಾಗ ಪ್ಲಾನ್ ಉಲ್ಲಂಘನೆ ಆಗಿರುವುದು ಕಂಡುಬರುತ್ತದೆ. ಆದ್ದರಿಂದ ಅವರು ಓಸಿ ಮತ್ತು ಸಿಸಿ ನೀಡುವುದಿಲ್ಲ.
ಓಸಿ ಮತ್ತು ಸಿಸಿ ನೀಡುವುದಾದರೆ ಕೆಲವು ಸಣ್ಣ ನಿವೇಶನಗಳ ಅಂದರೆ 20×30, 200 ಚ.ಅಡಿ. ಇಂತಹ ನಿವೇಶನಗಳಲ್ಲಿ ನಿಯಮ ಪಾಲಿಸಿ ಕಟ್ಟಿದರೆ ವಾಸ ಮಾಡಲು ಜಾಗ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಓಸಿ ಮತ್ತು ಸಿಸಿ ಗೋಜಿಗೆ ಹೋಗುವುದೇ ಇಲ್ಲ. ಅದಾಗ್ಯೂ ಸಹ ಬೆರಳೆಣಿಕೆಯಷ್ಟು ಬಿಲ್ಡರ್‌ಗಳು ಮತ್ತು ಪಾರ್ಟಿಗಳು ನಿಯಮ ಬದ್ಧವಾಗಿ ಕಟ್ಟಿ ಓಸಿ ಮತ್ತು ಸಿಸಿ ಪಡೆಯುತ್ತಾರೆ. ತದನಂತರ ಪ್ರತಿ ಫ್ಲಾಟ್ ನಿವೇಶನಗಳಿಗೆ ಖಾತಾ ಕಂದಾಯ ರಸೀದಿ ಇನ್ನಿತರ ದಾಖಲೆಗಳು ಲಭ್ಯವಾಗುತ್ತವೆ.
ಓಸಿ- ಸಿಸಿ ಪಡೆಯುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ. ಆದರೆ, ಕಾನೂನು ಪಾಲನೆ ಮಾತ್ರ ಸಾರ್ವಜನಿಕರಲ್ಲಿ ನಿರಾಶಾದಾಯಕವಾಗಿದೆ. ಇದನ್ನು ನಿಯಂತ್ರಿಸುವ ಪ್ರಾಧಿಕಾರಗಳೂ ಸಹ ಕಣ್ಣಿದ್ದೂ ಕಾಣದಂತೆ ಕುರುಡಾಗಿವೆ.