18.5 C
Bengaluru
Friday, January 24, 2025

ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಯ ಭೂಮಿ ಒತ್ತುವರಿ: ಯಾರ ಕೈವಾಡ?

ಬೆಂಗಳೂರಿನಲ್ಲಿ ಜನಸಾಮಾನ್ಯರ ನಿವೇಶನಗಳು ಒತ್ತುವರಿಯಾಗುವುದು ಅದನ್ನು ಪ್ರಶ್ನಿಸಿದವರ ವಿರುದ್ಧ ಧಮಕಿ ಹಾಕುವುದು ಸಾಮಾನ್ಯ. ಆದರೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಯ ಭೂಮಿಯೇ ಒತ್ತುವರಿ ಅಗುತ್ತಿದ್ದು, ಇದರಲ್ಲಿ ಅಧಿಕಾರಿಗಳೂ ಸಹ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಬಿಟಿಎಂ 4ನೇ ಹಂತ,2ನೇ ಬ್ಲಾಕ್‌ನಲ್ಲಿ ನಾಗರೀಕ ಸೌಲಭ್ಯದ ನಿವೇಶನ ಸಂಖ್ಯೆ ಸಿಎ 12/1ನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇಂಡಿನ್ ಆಯಿಲ್ ಕಾರ್ಪೊರೇಷನ್ ಲಿ. (ಐಒಸಿಎಲ್)ಗೆ ಗುತ್ತಿಗೆ ನೀಡಲಾಗಿತ್ತು. ಸದ್ಯ ಈ ನಿವೇಶನವನ್ನು ಭೂಗಳ್ಳರು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸರ್ಕಾರವೂ ಸಹ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ ಬಾಬು ಆರೋಪಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ 30 ವರ್ಷಗಳ ಅವಧಿಗೆ ಮೇಲ್ಕಂಡ 12/1 ನಂಬರಿನ ಸೈಟ್ ಗುತ್ತಿಗೆ ನೀಡಿದೆ. 07-11-2019 ರ ಸ್ವಾಧೀನ ಪತ್ರದ ಮೂಲಕ ಸ್ವಾಧೀನಕ್ಕೆ ನೀಡಿದೆ. ಸದರಿ ನಿವೇಶನದಲ್ಲಿ ಪೆಟ್ರೋಲಿಯಂ ಸಂಗ್ರಹಣೆ, ಅನುಮೋದನೆಯಂತಹ ಎಲ್ಲಾ ಅಗತ್ಯ ಅನುಮತಿಗಳು, ಸ್ಫೋಟಕಗಳ ಉಪ ನಿಯಂತ್ರಕರಿಂದ ಅನುಮತಿ ಪತ್ರ, ಕಟ್ಟಡ ಮಂಜೂರಾತಿ ಯೋಜನೆ ಇತ್ಯಾದಿಗಳನ್ನು ಪಡೆದು ಐಒಸಿಎಲ್ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಿದೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಂಸ್ಥೆಗೆ ಹಂಚಿಕೆ ಮಾಡಿರುವ ಸಿಎ ನಿವೇಶನವನ್ನು ಯಾವುದೇ ವ್ಯಾಜ್ಯ ಅಥವಾ ಅಡೆತಡೆಗಳಿಲ್ಲದೆ ನೀಡಬೇಕು. ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುವ ಭೂಗಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ಕಬಳಿಸುವ ಭೂಗತ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಡಿಎ ಹಂಚಿಕೆ ಮಾಡಿರುವ ನಾಗರೀಕ ನಿವೇಶನದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವತ್ತನ್ನು ಕಬಳಿಸುವ ವ್ಯವಸ್ಥಿತ ಹುನ್ನಾರ ಬೆಂಗಳೂರಿನಲ್ಲಿ ನಡೆಯುತ್ತಿದೆ. ಐಒಸಿಎಲ್‌ಗೆ ಹಂಚಿಕೆ ಆಗಿರುವ ಮೇಲಿನ ನಿವೇಶನವು ಕೋಟ್ಯಂತರ ರೂಪಾಯಿಗಳ ಬೆಲೆಬಾಳುತ್ತಿದ್ದು, ಅದನ್ನು ಕಬಳಿಸಲು ಮಾಜಿ ಕಾರ್ಪೊರೇಟರ್‌ಗಳು ಮತ್ತು ಕೆಲವು ಭೂಗಳ್ಳರು ದಾಖಲೆಗಳನ್ನು ಸೃಷ್ಟಿ ಮಾಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗೆ ತಡೆಯೊಡ್ಡಿ ಅಲ್ಲಿನ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ.

28-07-2022ರಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸದರಿ ನಾಗರೀಕ ನಿವೇಶನದ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಸೂಕ್ತ ರಕ್ಷಣೆ ನೀಡಲು ಪತ್ರ ಬರೆದಿರುತ್ತೇನೆ. ಮುಖ್ಯಮಂತ್ರಿಗಳು ನನ್ನ ಪತ್ರದ ಮೇಲೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿರುತ್ತಾರೆ. ಆದರೆ ನಗರಾಭಿವೃದ್ಧಿ ಇಲಾಖೆಯ ಕೆಲವು ಅಧಿಕಾರಿಗಳು ಈ ದಂದೆಯಲ್ಲಿ ಭಾಗಿಯಾಗಿರುವುದರಿಂದ ಐಒಸಿಎಲ್ ಸಂಸ್ಥೆಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ನಗರಾಭಿವೃದ್ಧಿ ಇಲಾಖೆಯ ಶಾಮೀಲು ಅಧಿಕಾರಿಗಳನ್ನು ತನಿಖೆ ಮೂಲಕ ದಂಡಿಸದಿದ್ದರೆ ಬೆಂಗಳೂರಿನ ಭೂಗಳ್ಳರ ಕ್ರಮವನ್ನು ತಡೆಯಲು ಸಾಧ್ಯವಿಲ್ಲ.

ಕರ್ನಾಟಕದ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರೈಲ್ವೆ ಇಲಾಖೆಯ ಎಡಿಎಲ್‌ಆರ್ ಮತ್ತು ಬಿಡಿಎ ಸರ್ವೇಯರ್‌ಗಳು ಜಂಟಿ ಸಮೀಕ್ಷೆ ಮಾಡಿ ಐಒಸಿಎಲ್ ಗುತ್ತಿಗೆ ಪಡೆದ ಸಿಎ ಸೈಟ್‌ಗೆ ಕ್ಲೀನ್ ಚಿಟ್ ನೀಡಿದೆ . ಆದರೂ ಭೂಗಳ್ಳರು ಐಒಸಿಎಲ್ ಸಂಸ್ಥೆಯು ಸದರಿ ನಿವೇಶನದಲ್ಲಿ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ.

ಐಒಸಿಎಲ್ ಇಲ್ಲಿ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಾರ್ಯಾಚರಣೆಯ ವೆಚ್ಚ, ಭೂಗತ ಸಂಗ್ರಹಣೆ / ಟ್ಯಾಂಕ್‌ನಲ್ಲಿನ ಡೀಸೆಲ್, ವೇಳಾಪಟ್ಟಿ ಆಸ್ತಿ, ಸಂಬಳ ಇತ್ಯಾದಿ ಸೇರಿದಂತೆ ಘಟಕಕ್ಕೆ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ. ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ನಾಗರಿಕ ಸೌಲಭ್ಯದ ನಿವೇಶನ ನೀಡುವ ಸಂಪೂರ್ಣ ಉದ್ದೇಶ ಮತ್ತು ಕಾರ್ಯ ವಿಫಲವಾಗಿದೆ. ಅನೇಕ ಉದ್ಯೋಗಿಗಳು ಸಂಸ್ಥೆಯನ್ನು ಅವಲಂಬಿಸಿದ್ದಾರೆ. ಭೂಗಳ್ಳರು ಅಕ್ರಮವಾಗಿ ಅತಿಕ್ರಮಿಸಲು ನಿರಂತರ ಅಡಚಣೆಯನ್ನು ಉಂಟುಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ನಾಗರೀಕ ನಿವೇಶನವನ್ನು ಮುಕ್ತವಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ. 2019ರಲ್ಲಿ ಸಂಸ್ಥೆಗೆ ನಿವೇಶನ ಹಂಚಿಕೆಯಾಗಿದ್ದು, ಸದರಿ ಸಂಸ್ಥೆಯು ನಿವೇಶನ ಉಪಯೋಗಿಸಿಕೊಳ್ಳಲು ಅಡ್ಡಿಪಡಿಸಿರುವ ಭೂಗಳ್ಳರ ಮೇಲೆ ಮತ್ತು ಭೂಗಳ್ಳರಿಗೆ ಪರೋಕ್ಷವಾಗಿ ಸಹಕಾರ ನೀಡಿರುವ ನಗರಾಭಿವೃದ್ಧಿ ಇಲಾಖೆಯ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ರಮೇಶ್‌ಬಾಬು ಮನವಿ ಮಾಡಿದ್ದಾರೆ.

Related News

spot_img

Revenue Alerts

spot_img

News

spot_img