ಭಾರತವು ತನ್ನ ದೇಶದ ನಿವಾಸಿಗಳಿಗೆ ವಿದೇಶಗಳ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಲು ಕೆಲ ನಿಯಮಗಳನ್ನು ಸರಾಗಗೊಳಿಸಿದೆ. ಇದರಿಂದ ದುಬೈ ಸೇರಿದಂತೆ ಬೇರೆ ಬೇರೆ ದೇಶಗಳ ವಸತಿ ಕ್ಷೇತ್ರದಲ್ಲಿ ಭಾರತೀಯ ಹೂಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈಗಿನ ಹೊಸ ಪರಿಷ್ಕೃತ ವಿದೇಶಿ ವಿನಿಮಯ ನಿರ್ವಹಣಾ ನಿಯಮಗಳು ಸಹ ಭಾರತೀಯ ಕಂಪೆನಿಗಳಿಗೆ ಬೇರೆ ಬೇರೆ ದೇಶಗಳ ಹಣಕಾಸು ವಲಯದ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಭಾರತದ ಅನೇಕ ಉದ್ಯಮಿಗಳಿಗೆ ವೈಯಕ್ತಿಕ ಹಾಗೂ ಕಾರ್ಪೋರೇಟ್ ಹೂಡಿಕೆಗೆ ದುಬೈ ಪ್ರಮುಖ ತಾಣವಾಗಿದೆ.
ದುಬೈನಲ್ಲಿ ನಾನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿದವರಲ್ಲಿ ಸಿಂಹಪಾಲು ಭಾರತೀಯರೇ ಆಗಿರುವುದು ವಿಶೇಷ. ದುಬೈನಂತರ ಅನೇಕ ಭಾರತೀಯರು ಹೆಚ್ಚು ಆಸ್ತಿಗಳನ್ನು ಲಂಡನ್‌ನಲ್ಲಿ ಹೊಂದಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಂಪೆನಿಗಳು ಗ್ಲೋಬಲ್ ಚೈನ್ ವ್ಯಾಲ್ಯುವಿನ ಭಾಗವಾಗಬೇಕಾದ ಅವಶ್ಯಕತೆಯಿರುವುದರಿಂದ ರಿಯಲ್ ಎಸ್ಟೇಟ್ ನಿಯಮಗಳನ್ನು ಸರಳಗೊಳಿಸಲಾಯಿತು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.
ಪರಿಷ್ಕೃತ ನಿಯಮಗಳಿಂದ ಸಾಗರೋತ್ತರ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಬೇಕಾದ ಸಂದರ್ಭದಲ್ಲಿ ಅಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸರಳೀಕರಣಗೊಳಿಸುತ್ತದೆ ಎಂದು ತಿಳಿಸಿದೆ.