23.9 C
Bengaluru
Sunday, December 22, 2024

ಭಾರತದಲ್ಲಿ ಎನ್ಆರ್ಐಗಳ ಹೂಡಿಕೆ: ರಿಯಲ್ ಎಸ್ಟೇಟ್‌ನಲ್ಲಿ ಆಸಕ್ತಿ

3.2 ಕೋಟಿ ಅನಿವಾಸಿ ಭಾರತೀಯರ (ಎನ್ಆರ್ಐ) ಸಮುದಾಯವು ಭಾರತಕ್ಕೆ ವಿದೇಶಿ ಆದಾಯ ಗಳಿಕೆಯ ದೊಡ್ಡ ಮೂಲವಾಗಿದೆ. ಅವರು ಇಲ್ಲಿರುವ ತಮ್ಮ ಕುಟುಂಬಕ್ಕಾಗಿಯೋ ಭಾರತದಲ್ಲಿ ಹೂಡಿಕೆಯ ಉದ್ದೇಶಕ್ಕಾಗಿಯೋ ಹಣವನ್ನು ಕಳುಹಿಸುತ್ತಾರೆ. ಹಿಂತಿರುಗಿ ನೋಡಿದರೆ ಅನಿವಾಸಿ ಭಾರತೀಯರು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತದಲ್ಲಿ ನೆಲೆಯನ್ನು ಸ್ಥಾಪಿಸುವುದು, ಜೀವನಶೈಲಿಯನ್ನು ಉನ್ನತೀಕರಿಸುವುದು, ಕೊನೆಯದಾಗಿ ತಾವು ಕಳುಹಿಸಿದ ಹಣಕ್ಕೆ ಪ್ರತಿಫಲ ಸಿಗುವಂತಾಗಲು ಹಾಗೂ ಹೂಡಿಕೆಯ ಪ್ರಯೋಜನ ಪಡೆಯುವುದು ಇದಕ್ಕೆ ಮುಖ್ಯ ಕಾರಣಗಳು.

ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಬಾಡಿಗೆಯಿಂದ ಆದಾಯ ಗಳಿಸಲು ಆದ್ಯತೆ ನೀಡುವ ಹಲವು ಎನ್ಆರ್ಐಗಳಿದ್ದಾರೆ. ಮನೆಗಳ ನಿರ್ವಹಣೆ ಮತ್ತು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು, ಸಮಯಕ್ಕೆ ಬಾಡಿಗೆ ಸಂಗ್ರಹಿಸುವುದು ಮತ್ತು ಆಸ್ತಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಅವರಿಗೆ ಎದುರಾಗುವ ತಲೆನೋವುಗಳು. ಹೂಡಿಕೆದಾರರು ಎಲ್ಲೋ ದೂರದಲ್ಲಿರುವುದರಿಂದ ಈ ಆಲೋಚನೆಗಳು ಅನೇಕ ಬಾರಿ ರಿಯಲ್ ಎಸ್ಟೇಟ್ನಲ್ಲಿನ ಯಾವುದೇ ಹೂಡಿಕೆ ಮತ್ತು ಸ್ವತ್ತು ಬಾಡಿಗೆಗೆ ನೀಡದೇ ಇರಲು ಕಾರಣವಾಗುತ್ತದೆ.

ಈ ಹಂತದಲ್ಲಿಯೇ ಎನ್ಆರ್ಐಗಳು ಅಥವಾ ಭಾರತದ ನಿವಾಸಿಗಳು ಹೊಸ ಯುಗದ ಬೆಳವಣಿಗೆಗಳ ಲಾಭ ಪಡೆಯಬಹುದು. ಬಾಡಿಗೆ ಕರಾರುಗಳು ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ನೆರವಾಗುವ ಹೊಸ ಕಾಲದ ಪ್ರಮುಖ ಸೇವೆಯಾಗಿದೆ. ಈ ಹೂಡಿಕೆದಾರರು ಬಾಡಿಗೆ ಸಂಗ್ರಹಿಸುವ ಮತ್ತು ತಮ್ಮ ಆಸ್ತಿಗಳನ್ನು ನಿರ್ವಹಿಸುವ ವಿಧಾನವನ್ನು ಸಹ ಇದು ಸುಲಭಗೊಳಿಸುತ್ತದೆ.

ಬಾಡಿಗೆ ಕರಾರು ಎಂದರೆ ಸ್ವತ್ತಿನ ಮಾಲೀಕ, ಬಾಡಿಗೆದಾರ ಮತ್ತು ಜಾಮೀನುದಾರ ಸಂಸ್ಥೆಯ ನಡುವಿನ ಒಪ್ಪಂದ. ಭೂ ಮಾಲೀಕರಿಗೆ ಆಗುವ ಹಾನಿ ತಪ್ಪಿಸಲು ಇದೊಂದು ಸಾಂಸ್ಥಿಕ ಖಾತರಿಯಾಗಿದೆ. ಅಪಾರ್ಟ್ಮೆಂಟ್ ಬಾಡಿಗೆ ನೀಡುವಾಗ ಎದುರಾಗುವ ಎರಡು ಮುಖ್ಯ ಸಮಸ್ಯೆಗಳೆಂದರೆ, ಬಾಕಿ ವಸೂಲಿ ಮಾಡುವುದು ಮತ್ತು ಅಗತ್ಯವಿದ್ದಾಗ ಮನೆ ಖಾಲಿ ಮಾಡಿಸಲು ಸಾಧ್ಯವಾಗದಿರುವುದು. ಅದೇ ಬಾಡಿಗೆದಾರರ ಕಡೆಯಿಂದ ನೋಡುವುದಾದರೆ, ದೊಡ್ಡ ಪ್ರಮಾಣದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ; ಅದು ಕನಿಷ್ಠ 3 ತಿಂಗಳಿಂದ ಗರಿಷ್ಠ 10 ತಿಂಗಳ ವರೆಗಿನ ಬಾಡಿಗೆ ಮೊತ್ತವೂ ಆಗಬಹುದು. ಬಾಡಿಗೆದಾರರಿಗೆ ಇಷ್ಟು ದೊಡ್ಡ ಮೊತ್ತ ಭಾರಿ ಹೊರೆಯಾಗಬಹುದು. ಈ ಸಮಸ್ಯೆಗೆ ಅಂತ್ಯ ಹಾಡಲೆಂದೇ ಬಾಡಿಗೆ ಕರಾರು ಅಸ್ತಿತ್ವಕ್ಕೆ ಬಂದಿರುವುದು.

ಭೂ ಮಾಲೀಕರ ಹಿತವನ್ನು ಕಾಯುವ ನಿಟ್ಟಿನಲ್ಲಿ ಬಾಡಿಗೆದಾರರ ಪರವಾಗಿ ಜಾಮೀನುದಾರ ಸಂಸ್ಥೆಯೇ ಬಾಡಿಗೆ ಕರಾರನ್ನು ಪೂರೈಸುತ್ತದೆ. ಸಮಯಕ್ಕೆ ಬಾಡಿಗೆ ಭರಿಸದೇ ಇರುವುದು, ಸ್ವತ್ತು ಹಾನಿ, ಲಾಕ್-ಇನ್ ಅವಧಿಯನ್ನು ಉಲ್ಲಂಘಿಸುವುದು ಮತ್ತು ಪಾವತಿಯಾಗದ ಯುಟಿಲಿಟಿ ಬಿಲ್‌ಗಳ ಬಗೆಗೆ ಭದ್ರತೆ ನೀಡುವುದನ್ನು ಈ ಕರಾರು ಒಳಗೊಂಡಿರುತ್ತದೆ.

ವಿವಿಧ ಕಾರಣಕ್ಕೆ ಭಾರತದ ನಗರ ಪ್ರದೇಶಗಳಲ್ಲಿ 1.1 ಕೋಟಿಗೂ ಹೆಚ್ಚು ಮನೆಗಳು ಬಾಡಿಗೆದಾರರಿಲ್ಲದೇ ಖಾಲಿ ಉಳಿದಿವೆ. ಈ ಸಮಸ್ಯೆ ನಿವಾರಿಸಲೂ ಬಾಡಿಗೆ ಕರಾರು ವಿಧಾನ ಅನುಕೂಲವಾಗುತ್ತದೆ. ಇದರಿಂದಾಗಿ ದೇಶಕ್ಕೆ ಅನಿವಾಸಿಗಳಿಂದ ಇನ್ನಷ್ಟು ಹೂಡಿಕೆ ಆಕರ್ಷಿಸಲು ನೆರವಾಗುತ್ತದೆ. ಆದರೆ ಇದು ದೀರ್ಘಾವಧಿಯ ಹೂಡಿಕೆ ಆಗಿರುವುದರಿಂದ, ಅಗತ್ಯ ಮುನ್ನೆಚ್ಚರಿಕೆ ಮತ್ತು ಕಾಳಜಿ ತೆಗೆದುಕೊಳ್ಳುವುದೂ ಮುಖ್ಯ. ಜೊತೆಗೆ ಭಾರತದಲ್ಲಿನ ವಿವಿಧ ನಿಯಮಗಳು ಮತ್ತು ತೆರಿಗೆ ಕಾನೂನುಗಳಿಗೆ ಬದ್ಧವಾಗಿರುವುದು ಅನಿವಾರ್ಯ.

Related News

spot_img

Revenue Alerts

spot_img

News

spot_img