20.5 C
Bengaluru
Tuesday, July 9, 2024

ಮನಸ್ಸು ಪ್ರಫುಲ್ಲಗೊಳ್ಳಳು ಒಳಾಂಗಣ ವಿನ್ಯಾಸದಲ್ಲಿ ಈ ಕೊಂಚ ಬದಲಾವಣೆ ಮಾಡಿ

ಮನೆ ಅಂದಾಗ ಅಚ್ಚುಕಟ್ಟು, ವ್ಯವಸ್ಥಿತ, ಸೌಕರ್ಯ ಹಾಗೂ ಉತ್ತಮವಾಗಿ ಗಾಳಿ ಬೆಳಕಿನ ಜೊತೆಗೆ ಒಳಾಂಗಣ ವಿನ್ಯಾಸವೂ ಈಗ ಮಹತ್ವ ಪಡೆದಿವೆ. ಮನೆಯೊಳಗೆ ಮಾಡಿಕೊಳ್ಳುವ ಕೆಲ ಮಾರ್ಪಾಡು, ವಿನ್ಯಾಸಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಒಳಾಂಗಣ ವಿನ್ಯಾಸ ಕೊಂಚ ಖರ್ಚು ಬೇಡುವುದಂತೂ ನಿಜ. ಆದರೆ, ಮನಸಿನ ಸಂತೋಷಕ್ಕಾಗಿ ಸ್ವಲ್ಪ ಅಡ್ಜಸ್ಟ್‌ ಮಾಡಿದ್ದಲ್ಲಿ ಅಂದವಾದ ಮನೆ ಸಜ್ಜಾಗುತ್ತದೆ. ಸ್ಟೈಲಿಷ್‌ ರೀತಿಯಲ್ಲಿ ಮನೆ ಅಲಂಕಾರ ಮಾಡಲು ಒಳಾಂಗಣ ವಿನ್ಯಾಸಕಾರರು ಕೊಂಚ ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

ಕಣ್ಣಿಗೆ ಹಬ್ಬ
ಮನೆಯನ್ನು ಕ್ರಿಯಾಶೀಲತೆಯಿಂದ ಅಲಂಕರಿಸುವುದು, ಕಡಿಮೆ ಜಾಗವನ್ನು ಉತ್ತಮವಾಗಿ ಬಳಸಿಕೊಳ್ಳುವುದು ಒಳಾಂಗಣ ವಿನ್ಯಾಸದಲ್ಲಿ ಪ್ರಮುಖವಾದುದು. ಮನೆಗೆ ಪ್ರವೇಶಿಸುವಾಗಲೇ ಸಿಗುವ ಸಣ್ಣ ಲಾಬಿಯ ಗೋಡೆಯಲ್ಲಿ ಕನ್ನಡಿಗಳನ್ನು ನೀಟಾಗಿ ಜೋಡಿಸುವುದರಿಂದ ಆ ಜಾಗ ಅಗಲವಾಗಿ ಕಾಣುತ್ತದೆ ಹಾಗೂ ಅಲ್ಲಿಗೆ ಗ್ಲಾಮರ್‌ ಸ್ಪರ್ಶ ನೀಡುತ್ತದೆ. ಕನ್ನಡಿ ಕೋಣೆಗೆ ಉತ್ತಮ ಹಾಗೂ ಸಕಾರಾತ್ಮಕ ಶಕ್ತಿಯನ್ನು ತಂದು ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಕ್ಲಸ್ಟರ್ಡ್‌, ಹೂವಿನ ಆಕಾರ, ಡಿಸೈನರ್‌ ವಾಲ್‌ ಮಿರರ್‌ ಹೀಗೆ ನಾನಾ ರೀತಿಯ, ವಿನ್ಯಾಸ, ಗಾತ್ರದ ಕನ್ನಡಿಗಳು ಮಾರುಕಟ್ಟೆಯಲ್ಲಿ ಲಭ್ಯ.

ಬೆಳಕಿನ ಆಟ
ಮನೆಯಲ್ಲಿರುವ ಸಾಧಾರಣ ಎಲ್‌ಇಡಿ ಬಲ್ಬ್‌ಗಳನ್ನು ಬದಲಾಯಿಸಿ ಅವುಗಳ ಜಾಗಕ್ಕೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ವಿನ್ಯಾಸದ ಅಲಂಕಾರಿಕ ಬಲ್ಬ್‌ಗಳನ್ನು ಜೋಡಿಸಬಹುದು. ಇವುಗಳು ಆ ಪ್ರದೇಶಕ್ಕೆ ಕ್ರಿಯಾತ್ಮಕತೆ ತರುತ್ತವೆ. ಆ್ಯಂಟಿಕ್‌ ಲೈಟ್‌ಗಳನ್ನು ಸೇರಿಸಬಹುದು. ಕೆಲವೊಮ್ಮೆ ಹಳೆ ಲೈಟ್‌ಗಳನ್ನು ಸ್ವಲ್ಪ ಮಾರ್ಪಡಿಸಿಕೊಂಡು ಪ್ಲಾಸ್ಟಿಕ್‌ ಹೂವುಗಳ ಮಧ್ಯೆ, ಹೂದಾನಿಗಳಲ್ಲಿ ಜೋಡಿಸಿದರೆ ಮನೆಯ ಒಳಗಿನ ದೃಶ್ಯವೇ ಬದಲಾಗಬಹುದು. ಒಣ ಹಾಗೂ ತಾಜಾ ಹೂವುಗಳನ್ನು ಜೋಡಿಸಿಕೊಂಡು ಅದರ ಸಮೀಪ ಅಥವಾ ಮಧ್ಯೆ ಬೇರೆ ಬೇರೆ ಗಾತ್ರದ ಕ್ಯಾಂಡಲ್‌ಗಳನ್ನು ಉರಿಸಿದರೆ, ಲೈಟ್‌ಗಳನ್ನು ಇಟ್ಟರೆ ವಿನ್ಯಾಸದಲ್ಲಿ ಅಗಾಧ ಬದಲಾವಣೆ ಕಾಣಬಹುದು. ಚಿಕ್ಕಮಕ್ಕಳ ಸಂತೋಷಕ್ಕಾಗಿ ಗ್ಲಾಸ್‌ ಜಾರ್‌ಗಳಲ್ಲಿ ಫೇರಿ ಲೈಟ್‌ಗಳ ಅಲಂಕಾರ ಮಾಡಿದರೆ ಆಕರ್ಷಣೀಯವಾಗಿರುತ್ತದೆ.

ಸುವಾಸನೆ
ಮನೆಗೆ ಪ್ರವೇಶಿಸಿದ ಕೂಡಲೇ ಹಿತವಾದ ಸುವಾಸನೆಯು ನಿಮ್ಮ ನಾಸಿಕಕ್ಕೆ ಬಡಿದರೆ ನರ ನಾಡಿಗಳಲ್ಲಿ ಮಧುರ ಭಾವ ಉಂಟಾಗುತ್ತದೆ. ಮನೆ ಯಾವಾಗಲೂ ಉತ್ತಮವಾದ ಸುವಾಸನೆಯನ್ನು ಹೊಂದಿರಬೇಕು ಎನ್ನುತ್ತಾರೆ ವಿನ್ಯಾಸಕಾರರು. ಸೋಫಾ ಅಥವಾ ದೇವರ ಕೋಣೆ ಮುಂದೆ ಒಂದು ಅಗಲ ಪಾತ್ರೆಯಲ್ಲಿ ಬೇರೆ ಬೇರೆ ರೀತಿಯ ಹೂವುಗಳನ್ನು ಇಡುವುದು, ಹೂದಾನಿಗಳಲ್ಲಿ ತಾಜಾ ಹೂವುಗಳನ್ನು ಇರಿಸುವ ಅಭ್ಯಾಸವು ಕಣ್ಣಿಗೆ, ಮೂಗಿಗೆ ಎರಡಕ್ಕೂ ಹಿತಕರ. ಸ್ನಾನದ ಮನೆಗಳಲ್ಲಿ ಶುದ್ಧ ತೈಲದ ಡಿಫ್ಯೂಸರ್‌ಗಳನ್ನು ಬಳಸಬಹುದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಫ್ರಾಗ್ರನ್ಸ್‌ ವಸ್ತುಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆದಲ್ಲ ಎನ್ನುತ್ತಾರೆ ವಿನ್ಯಾಸಕಾರರು.

ಬಣ್ಣಗಳ ಸಂಯೋಜನೆ
ಗೋಡೆಗಳಲ್ಲಿ ಅಭಿರುಚಿಗೆ ತಕ್ಕಂತೆ ಕಲಾಕೃತಿಗಳ ಜೋಡಣೆಯು ಮನೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಕಲಾಕೃತಿ ಎಂದರೆ ಬಣ್ಣ, ತಾಂತ್ರಿಕತೆ ಹಾಗೂ ಕಲಾವಿದನ ಅಮೂರ್ತ ಕಲ್ಪನೆಯ ರಚನೆ. ಕಲಾಕೃತಿ ಜೋಡಿಸುವಾಗ ಗೋಡೆಯ ಬಣ್ಣವೂ ಮುಖ್ಯ. ಗೋಡೆ ಬಿಳಿ ಬಣ್ಣದ್ದಾಗಿದ್ದರೆ ಬೇರೆ ಬೇರೆ ಬಣ್ಣಗಳನ್ನು ಬಳಸಿ ಮಾಡಿದ ಕಲಾಕೃತಿ ಎದ್ದು ಕಾಣುತ್ತದೆ. ಕೋಣೆಯ ಫರ್ನಿಚರ್‌, ಕರ್ಟನ್‌ ಕೂಡ ಕಲಾಕೃತಿ ಜೊತೆ ಹೊಂದಾಣಿಕೆಯಾಗುವಂತಿದ್ದರೆ ಚಂದಕಾಣುತ್ತದೆ.

Related News

spot_img

Revenue Alerts

spot_img

News

spot_img