ಬೆಂಗಳೂರು;ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಯೋಜನೆ ಏಪ್ರಿಲ್ 1 ರಿಂದ ಆರಂಭವಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.ಫೆಬ್ರವರಿ 28ರಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದ ಬೆಳೆ ಸಾಲ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದರು.ಸದ್ಯದಲ್ಲಿಯೇ ರಾಜ್ಯಪಾಲರ ಅನುಮತಿ ದೊರೆಯಲಿದ್ದು, ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯೋಜನೆ ಜಾರಿ ಆಗಲಿದೆ. 33 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ ರೈತರಿಗೆ ಡಿಸಿಸಿ ಬ್ಯಾಂಕಿನಿ೦ದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗಲಿದೆ. ಈ ಮಿತಿಯನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈಚೆಗಷ್ಟೇ ಬಜೆಟ್ ಘೋಷಣೆಯಾದ್ದು; .ಹಾಗಂತ ಈ ಸಾಲ ಮಿತಿ ಇದೇ ಮೊದಲ ಬಾರಿಗೇನು ಹೆಚ್ಚಳವಾಗಿದ್ದಿಲ್ಲ. ಈ ಹಿಂದೆಯೂ ಹಲವು ಬಾರಿ ಸದರಿ ಶೂನ್ಯ ಬಡ್ಡಿ ಸಾಲ ಮಿತಿಯನ್ನು ಹೆಚ್ಚಿಸುತ್ತ ಬರಲಾಗುತ್ತಿದೆ. ರಾಜ್ಯದ ರೈತರಿಗೆ ಸರಕಾರವು ಶೇಕಡಾ 3ರ ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬ೦ಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. 2012-13ನೇ ಸಾಲನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು.
2013-14ನೇ ಸಾಲಿನಿಂದ 2 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಯಿತು. 2014-15ನೇ ಸಾಲಿನಿಂದ 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಈಗ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ, ಇದೇ ಏಪ್ರಿಲ್ 1ರಿಂದ ಹೊಸ ಮಿತಿಯ ಶೂನ್ಯಬಡ್ಡಿ ಸಾಲ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿವ ಸೋಮಶೇಖರ್ ಅವರು ತಿಳಿಸಿದ್ದಾರೆ.ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕೃಷಿ ಉಪಕರಣ ಖರೀದಿ ಸೇರಿದಂತೆ ರೈತರ ಕೃಷಿ ಚಟುವಟಿಕೆಗೆ ನೆರವಾಗಲೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿ೦ದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಕೃಷಿ ಚಚುವಟಿಕೆಗಷ್ಟೇ ಅಲ್ಲದೇ, ಕೃಷಿ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ ಇನ್ಮುಂದೆ 5 ಲಕ್ಷ ರೂಪಾಯಿ ವರೆಗೆ ಸಾಲ ಸಿಗಲಿದೆ.
ಸಾಲ ತಗೆದುಕೊಳ್ಳಲು ಬೇಕಾಗುವ ದಾಖಲೆಗಳೇನು?
ಬಹುಮುಖ್ಯವಾಗಿ ಡಿಸಿಸಿ ಬ್ಯಾಂಕಿನಿ೦ದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು. ಪಹಣಿ, ಆಧಾರ್ ಕಾರ್ಡ್ ಇರಬೇಕು. ರೈತರು ಯಾವ ಬ್ಯಾಂಕಿನಿ೦ದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.