ಬೆಂಗಳೂರು, ಮೇ. 18 : ಭಾರತ ದೇಶ ಬೆಳೆಯುತ್ತಿರುವಂತೆ, ಶ್ರೀಮಂತರ ಪಟ್ಟಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ, ಅದೇಕೋ ಕಳೆದ ವರ್ಷ ಶ್ರೀಮಂತರ ಪಟ್ಟಿ ಇಳಿಕೆಯಾಗಿದೆ. ಈ ಬಗ್ಗೆ ನೈಟ್ ಫ್ರಾಂಕ್ ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ, ದೇಶದಲ್ಲಿ ಶೇ. 7.5 ರಷ್ಟು ಶ್ರೀಮಂತರ ಪಟ್ಟಿ ಇಳಿಕೆ ಕಂಡಿದೆ. ಇದರೊಂದಿಗೆ ಬಿಲಿಯನೇರ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ ಎಂದು ನೈಟ್ ಫ್ರಾಂಕ್ ನ ವೆಲ್ತ್ ರಿಪೋರ್ಟ್-2023 ಹೇಳಿದೆ.
247 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಅತಿಶ್ರೀಮಂತರ ಸಂಖ್ಯೆಯು 2022ರಲ್ಲಿ ಹೆಚ್ಚಾಗಿದೆ. 2021ರಲ್ಲಿ ಅತಿ ಶ್ರೀಮಂತರ ಸಂಖ್ಯೆ 13,637 ಇತ್ತು. ಇನ್ನು 2022ರಲ್ಲಿ ಈ ಸಂಖ್ಯೆ 12,069ಕ್ಕೆ ಬಂದಿದ್ದು ಇಳಿಕೆಯಾಗಿದೆ. ಆದರೆ, 2027ರ ವೇಳೆಗೆ ಅತಿಶ್ರೀಮಂತರ ಸಂಖ್ಯೆಯು 19,119ಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ನೈಟ್ ಫ್ರಾಂಕ್ ಅಂದಾಜಿಸಿದೆ. ಇನ್ನು ಬಿಲಿಯನೇರ್ ಗಳು ಎಂದರೆ, 7,570 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರು ಎಂದರ್ಥ.
ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ 2021ರಲ್ಲಿ 145 ಇದ್ದಿದ್ದು, 2022ರಲ್ಲಿ 161ಕ್ಕೆ ಏರಿಕೆಯಾಗಿದೆ. 2027ರ ವೇಳೆಗೆ 195ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. 2022ರಲ್ಲಿ ಜಾಗತಿಕ ಮಟ್ಟದಲ್ಲಿ ಅತಿಶ್ರೀಮಂತರ ಸಂಖ್ಯೆ ಶೇ 3.8ರಷ್ಟು ಇಳಿಕೆಯನ್ನು ಕಂಡಿದೆ. ಮಂದಗತಿಯ ಆರ್ಥಿಕ ಬೆಳವಣಿಗೆ, ಬಡ್ಡಿದರ ಹೆಚ್ಚುತ್ತಿರುವುದರಿಂದ ಜೊತೆಗೆ, ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣಗಳಿಂದಾಗಿ ಈ ಇಳಿಕೆ ದಾಖಲಾಗಿದೆ ಎಂದು ಹೇಳಲಾಗಿದೆ. 2021ರಲ್ಲಿ ಅತಿಶ್ರೀಮಂತರ ಸಂಖ್ಯೆ ಶೇ 9.3ರಷ್ಟು ದಾಖಲೆಯ ಏರಿಕೆಯನ್ನು ಕಂಡಿತ್ತು.
ಇನ್ನು ಭಾರತದಲ್ಲಿ 78 ಕೋಟಿಗೂ ಅಧಿಕ ಸಂಪತ್ತನ್ನು ಹೊಂದಿರುವ ಶ್ರೀಮಂತರ ಸಂಖ್ಯೆ 7.63 ಲಕ್ಷದಿಂದ 7.97 ಲಕ್ಷಕ್ಕೆ ಏರಿಕೆ ಆಗಿದೆ. ಕೋರ್ ಮತ್ತು ನಾನ್-ಕೋರ್ ವಲಯಗಳಲ್ಲಿನ ಬಲವಾದ ಚಟುವಟಿಕೆಗಳಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯು ವೇಗವನ್ನು ಪಡೆದುಕೊಂಡಿದೆ. ಇದಲ್ಲದೆ, ಭಾರತವು ಜಾಗತಿಕ ಸ್ಟಾರ್ಟ್ಅಪ್ ಹಬ್ ಆಗುವುದರೊಂದಿಗೆ ಹೊಸ ಸಂಪತ್ತನ್ನು ಕೂಡ ಸೃಷ್ಟಿಸುತ್ತಿದೆ.