ಬೆಂಗಳೂರು: ರಾಜ್ಯದಲ್ಲಿ ಸೈಟ್, ಭೂಮಿ, ವಿಲ್ಲಾ, ಕಟ್ಟಡ ಸೇರಿ ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಿಕೆ ಮಾಡುವವರು ಮತ್ತು ಖರೀದಿಗೆ ಇಚ್ಛಿಸುವರು ಕೂಡಲೇ ಹಣ ವಿನಿಯೋಗಿಸುವುದು ಉತ್ತಮ. ಕಾರಣ, ಸೆಪ್ಟೆಂಬರ್ನಲ್ಲಿ ಸ್ಥಿರಾಸ್ತಿ ಮೇಲಿನ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ.
ಕಾಂಗ್ರೆಸ್ ಸರ್ಕಾರ, ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಅದಕ್ಕೆ ಹಣ ಸಂಗ್ರಹ ದೊಡ್ಡ ಸವಾಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ ಮತ್ತು ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಿಸಲು ಮಾತ್ರ ಅವಕಾಶವಿದೆ. ಅದರಲ್ಲಿಯೂ ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ 3ನೇ ಅತಿದೊಡ್ಡ ಇಲಾಖೆ ಆಗಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕಳೆದ 4 ವರ್ಷಗಳಿಂದ ಹೆಚ್ಚಳ ಮಾಡಿಲ್ಲ. ಹೆಚ್ಚಳ ಮಾಡಲು ಸರ್ಕಾರ ವರದಿ ಪಡೆದುಕೊಂಡರೂ ಕೊನೇ ಕ್ಷಣದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಕರೊನಾ ಲಾಕ್ ಡೌನ್ ಮತ್ತು ಚುನಾವಣಾ ವರ್ಷ ಎಂಬ ನೆಪದಲ್ಲಿ ಆ ಸಾಹಸಕ್ಕೆ ಕೈಹಾಕಲಿಲ್ಲ. ಆದರೆ, ಇದೀಗ ಸರ್ಕಾರಕ್ಕೆ ಗ್ಯಾರಂಟಿ ಸ್ಕೀಮ್ಗೆ ಹಣ ಸಂಗ್ರಹ ಮಾಡುವ ಉದ್ದೇಶಕ್ಕೆ ಸೆಪ್ಟೆಂಬರ್ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಏರಿಕೆ ಮಾಡಲು ಸರ್ಕಾರ ತಯಾರಿ ನಡೆಸಿದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವೊಂದು ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ಸರ್ಕಾರದ ದರಪಟಿಯೇ ಸಾಕಷ್ಟು ಪ್ರದೇಶಗಳಲ್ಲಿ ಹೆಚ್ಚಾಗಿದೆ, ಕೆಲವೆಡೆ ಸರ್ಕಾರದ ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ಬೆಲೆ ಹೆಚ್ಚಾಗಿದೆ. ಪರಿಣಾಮ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಖರೀದಿದಾರರಿಗೆ ದೊಡ್ಡ ಹೊರೆ ಬಿದ್ದಿದೆ. ಮಧ್ಯಮ ವರ್ಗದ ಜನರು ಸರ್ಕಾರದ ಮಾರ್ಗಸೂಚಿ ಬೆಲೆಗೆ ಜಮೀನು, ಸೈಟು, ಫ್ಲ್ಯಾಟ್ ಖರೀದಿಸಲು ಸಾಧ್ಯ ಆಗುತ್ತಿಲ್ಲ. ನೋಂದಣಿ ಪ್ರಕ್ರಿಯೆ ಮಂದಗತಿಯಲ್ಲಿ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸ ತುಂಬಿಸಲು ಸಾಧ್ಯವಾಗದೆ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಹೊಸದಾಗಿ ಮಾರ್ಗಸೂಚಿ ದರದ ಜತೆಗೆ ಯಾವ ಯಾವ ಪ್ರದೇಶದಲ್ಲಿ ದರ ಏರಿಕೆ ಮಾಡಬೇಕೆಂದು ಪರಿಶೀಲನೆ ನಡೆಸಿ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ನಿಗದಿತ ಆದಾಯಕ್ಕಿಂತ ಐದಾರು ಸಾವಿರ ಕೋಟಿ ರೂ. ಹೆಚ್ಚಾಗಿ ಸಂಗ್ರಹ ಆಗುವ ನಿರೀಕ್ಷೆಯಲ್ಲಿ ಸರ್ಕಾರವಿದೆ. ಆದರಿಂದ ರಿಯಲ್ ಎಸ್ಟೇಟ್ನಲ್ಲಿ ಬಂಡವಾಳ ಹೂಡಿಕೆ ಮಾಡುವವರು ಮತ್ತು ಹೊಸದಾಗಿ ಆಸ್ತಿ ಖರೀದಿ ಮಾಡಲು ಇಚ್ಛಿಸುವವರು ಶೀಘ್ರದಲ್ಲಿಯೇ ನೋಂದಣಿ ಪ್ರಕ್ರಿಯೆ ಮುಗಿಸಿದರೆ ಒಳಿತು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜನರಿಗೆ ಹೊರೆ ಆಗಲಿದೆ
ರಾಜ್ಯದಲ್ಲಿ ಸ್ಥಿರಾಸ್ತಿಯ ಮಾರ್ಗಸೂಚಿ ದರದಲ್ಲಿ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಯಾವುದೇ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೂ ಜನರಿಗೆ ಹೊರೆ ಆಗಲಿದೆ. ಸೈಟ್, ಮನೆ, ಕಟ್ಟಡ, ವಿಲ್ಲಾ ಭೂಮಿ ಸೇರಿ ಸ್ಥಿರಾಸ್ತಿ ಖರೀದಿ ವೇಳೆ ಸರ್ಕಾರಕ್ಕೆ ದುಪ್ಪಟ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದರಿಂದ ಸ್ಥಿರಾಸ್ತಿ ಖರೀದಿಗೆ ಇಚ್ಛಿಸುವರು ಕೂಡಲೇ ಬಂಡವಾಳ ಹೂಡಿಕೆ ಮಾಡಬೇಕೆಂಬುದು ರಿಯಲ್ ಎಸ್ಟೇಟ್ ತಜ್ಞರ ಸಲಹೆ ಆಗಿದೆ.
ಏನಿದು ಶುಲ್ಕ ಪರಿಷ್ಕರಣೆ?
ಪ್ರತಿಯೊಂದು ಪ್ರದೇಶದ ಭೂಮಿಗೂ ಸರ್ಕಾರ ತನ್ನದೇ ಮಾರ್ಗಸೂಚಿ ದರವನ್ನು ನಿಗದಿ ಮಾಡುತ್ತದೆ. ಕ್ರಯ ಮತ್ತು ಕರಾರು ನೋಂದಣಿ ಸಮಯದಲ್ಲಿ ಪತ್ರದಲ್ಲಿ ಉಲ್ಲೇಖಿಸುವ ಮೊತ್ತ ಅಥವಾ ಸರ್ಕಾರದ ಮಾರ್ಗಸೂಚಿ ದರಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವೆಂದು ಶೇ.6.5 ಸಂಗ್ರಹ ಮಾಡಲಾಗುತ್ತದೆ. ಒಂದು ವೇಳೆ ಮಾರ್ಗಸೂಚಿ ದರ ಹೆಚ್ಚಾದರೆ ಆ ಮೊತ್ತಕ್ಕೆ ತಕ್ಕಂತೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಹ ಏರಿಕೆ ಆಗಲಿದೆ. ಇದರಿಂದ ಸರ್ಕಾರಕ್ಕೆ ದುಪ್ಪಟ್ಟು ಆದಾಯ ಬರಲಿದೆ. ಮತ್ತೊಂದು ಮಾರ್ಗವೆಂದರೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ (ಶೇ.5, ಶೇ.1.5) ಶೇ.6.5ರಲ್ಲಿ ಏರಿಕೆ ಮಾಡಿದರೆ (ಶೇ.1 ಆದರೂ) ಸಾವಿರಾರು ಕೋಟಿ ರೂ. ಆದಾಯ ಬರಲಿದೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸರ್ಕಾರ ಚಿಂತನೆ ನಡೆಸಿದೆ.