ಬೆಂಗಳೂರು, ಜ. 31 : 2023-24 ರ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಸಂಸತ್ ನಲ್ಲಿ ಘೋಷಣೆಯಾಗಲಿದೆ. ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಗುಡ್ ನ್ಯೂಸ್ ಸಿಗುವುದಂತೂ ಪಕ್ಕಾ ಆಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಪ್ರತೀ ವರ್ಷ ರೈತರ ಖಾತೆಗೆ 6 ಸಾವಿರ ರೂಪಾಯಿಯನ್ನು ಜಮಾ ಮಾಡುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಹೇಳುತ್ತಿರುವುದು ಏನೆಂದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಬಜೆಟ್ ನಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ರೈತರ ಖಾತೆಗೆ ಬರುವ ಮೊತ್ತವನ್ನು ಈ ಭಾರಿ ಹೆಚ್ಚಿಸುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತನ್ನು ರಿಲೀಸ್ ಮಾಡುವ ಯೋಚನೆಯಲ್ಲಿದೆ. ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ರೂ 6,000 ದಿಂದ ರೂ 8,000 ಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ. ಈ ಮೂಲಕ 2,000 ರೂ.ಗಳಂತೆ ನಾಲ್ಕು ಕಂತುಗಳಾಗಿ 8000ರೂ. ಗಳನ್ನು ವಿಂಗಡಿಸುವ ಸಾಧ್ಯತೆಯಿದೆ. ಪ್ರತಿ 3 ತಿಂಗಳಿಗೊಮ್ಮೆ ಕಂತಿನ ಮೊತ್ತ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಸದ್ಯ ರೈತರು ಯೋಜನೆಯ 13 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ವರ್ಷಕ್ಕೆ 4 ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ರೂ 6,000 ಆದಾಯವನ್ನು ರೈತರ ಕುಟುಂಬಗಳಿಗೆ ನೀಡಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೂ ಸಂಪೂರ್ಣವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಬರೋಬ್ಬರಿ 13 ಕೋಟಿ ರೈತ ಕುಟುಂಬಗಳು ಫಲಾನಿಭವಿಗಳಾಗಿದ್ದಾರೆ. ಈ ಯೋಜನೆಯಲ್ಲಿ ಫಲಾನುಭವಿಗಳಾಗಲು ಇ-ಕೆವೈಸಿ ಮತ್ತು ಇತರ ಮಾನದಂಡಗಳ ನಿಯಮಗಳನ್ನು ಪೂರೈಸಬೇಕು. ರೈತರಿಗೆ ಮಾತ್ರವೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ದೊರೆಯುತ್ತದೆ. ಅದಾಗಲೇ ಕಳೆದ ವರ್ಷವೇ ಕೆಲ ರಾಜ್ಯಗಳಿಗೆ ಆದಾಯವನ್ನು ರೂ 6,000 ದಿಂದ ರೂ 8,000 ಕ್ಕೆ ಹೆಚ್ಚಿಸಿತ್ತು. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ 5 ರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ಘೋಷಣೆಯನ್ನು ನಿರ್ಧರಿಸಿತ್ತು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣವನ್ನು ಹೆಚ್ಚಿಸುವುದರ ಜೊತೆಗೆ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೇಲೆ ಪ್ಯಾನಲ್ ಅನ್ನು ಸ್ಥಾಪಿಸಬಹುದು. ಈ ಬಗ್ಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಮೇಲೆ ಪ್ಯಾನಲ್ ಸ್ಥಾಪಿಸುವ ಬಗ್ಗೆಯೂ ಸಹ ಘೋಷಿಸುವ ಸಾಧ್ಯತೆ ಇದೆ. ರೈತರು ಕೂಡ ಈ ಬಾರಿಯ ಬಜೆಟ್ ನಲ್ಲಿ ತಮಗೆ ಯಾವೆಲ್ಲಾ ಶುಭ ಸುದ್ದಿಗಳು ಸಿಗಬಹುದು ಎಂದು ಲೆಕ್ಕಾಚಾರ ಹಾಕುತ್ತಾ ಬಜೆಟ್ ಮಂಡನೆಗಾಗಿ ಕಾಯುತ್ತಿದ್ದಾರೆ.