27.9 C
Bengaluru
Saturday, July 6, 2024

ನೀವು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುತ್ತೀರಾ..? ಹಾಗಾದರೆ ಟ್ರಾವೆಲ್‌ ವಿಮಾ ಯೋಜನೆ ಪಡೆಯುವುದನ್ನು ಮರೆಯದಿರಿ..

ಬೆಂಗಳೂರು, ಜೂ. 05 : ಸಾಮಾನ್ಯವಾಗಿ ರಸ್ತೆಯ ಮೇಲೆ ಪ್ರಯಾಣಿಸುವವರಿಗೆ ಅಪಘಾತದ ಭಯವಿರುತ್ತದೆ. ವಿಮಾನದಲ್ಲಿ ಪ್ರಯಾಣಿಸುವವರದ್ದೂ ಕೂಡ ಹೇಳಲಾಗದು. ಆದರೆ, ರೈಲಿನಲ್ಲಿ ಪ್ರಯಾಣಿಸುವವರಿಗೆ ಸುರಕ್ಷತೆ ಹೆಚ್ಚಾಗಿರುತ್ತದೆ. ಮಹಾನಗರಗಳ ಅಕ್ಕ ಪಕ್ಕದ ಜಿಲ್ಲೆಗಳ ಜನರು ಕೆಲಸಗಳಿಗೆಂದು ನಿತ್ಯ ಓಡಾಟ ನಡೆಸುತ್ತಾರೆ. ಅಧಿಕವಾಗಿ ಎಲ್ಲರೂ ರೈಲಿನ ಪ್ರಯಾಣವನ್ನು ಬಯಸುತ್ತಾರೆ. ಹೀಗೆ ಪ್ರತಿ ನಿತ್ಯ ರೈಲಿನಲ್ಲಿ ಓಡಾಡುವವರು ಕೂಡ ಟ್ರಾವೆಲ್‌ ಇನ್ಶುರೆನ್ಸ್‌ ಅನ್ನು ಮಾಡಿಸಲು ಮರೆಯಬಾರದು.

ಯಾಕೆಂದರೆ, ಕಳೆದ ವಾರವಷ್ಟೇ ಆಕಸ್ಮಿಕವಾಗಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಇದರಲ್ಲಿ ಸಾವಿರಾರು ಜನರು ಆಸ್ಪತ್ರೆಗೆ ಸೇರಿದ್ದು, 280ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ನೀವು ನಿತ್ಯ ಪ್ರಯಾಣಿಸುವಾಗ ಟ್ರಾವೆಲ್‌ ವಿಮೆಯನ್ನು ಪಡೆದಿದ್ದರೆ, ಇದರಿಂದ ಸುರಕ್ಷತೆ ಇರುತ್ತದೆ. ರೈಲು ಅಪಘಾತಗಳು ಸಂಭವಿಸುವುದು ಬಹಳ ಅಪರೂಪ. ಆದರೆ, ರೈಲು ಅಪಘಾತದ ಪರಿಣಾಮ ಮಾತ್ರ ಬಹಳ ಭೀಕರವಾಗಿರುತ್ತದೆ.

ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವವರು IRCTC ನಲ್ಲಿ ಟಿಕೆಟ್ ಬುಕ್ ಅನ್ನು ಮಾಡಿದಾಗ ಪ್ರಯಾಣ ವಿಮೆಯನ್ನು ಪಡೆಯುವುದು ಸೂಕ್ತ. ಪ್ರಯಾಣ ವಿಮೆಗೆ ಒಂದು ರೂಪಾಯಿಗಿಂತ ಕಡಿಮೆ ಖರ್ಚಾಗುತ್ತದೆ. ಇದರಿಂದ ಸಾಕಷ್ಟು ಲಾಭಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ. IRCTC ವೆಬ್‌ಸೈಟ್‌ನಲ್ಲಿ ಅಥವಾ ಅಪ್ಲಿಕೇಶನ್ ಮೂಲಕ ನಿಮ್ಮ ಟಿಕೆಟ್‌ ಅನ್ನು ಕಾಯ್ದಿರಿಸುವುದಾದರೆ, ವಿಮೆ ಆಯ್ಕೆಯನ್ನು ಮಾಡಿಕೊಳ್ಳಿ. ಟ್ರಾವೆಲ್ಇನ್ಶೂರೆನ್ಸ್ ಗಾಗಿ ಜಸ್ಟ್‌ 35 ಪೈಸೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ವಿಮೆ ಆಯ್ಕೆ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಗೆ ವಿಮಾ ಕಂಪನಿ ಲಿಂಕ್ ಅನ್ನು ಕಳಿಸುತ್ತದೆ. ಆ ಲಿಂಕ್‌ ಅನ್ನು ಕ್ಲಿಕ್ ಮಾಡಿದಾಗ ನಿಮಗೆ ಪುಟವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಾಮಿನಿ ವಿವರಗಳನ್ನು ಭರ್ತಿ ಮಾಡಿ. ನಾಮಿನಿ ನಮೂದಿಸದೇ ಹೋದರೆ, ವಿಮೆಯನ್ನು ಕ್ಲೈಮ್‌ ಮಾಡಲು ಸಾಧ್ಯವಾಗುವುದಿಲ್ಲ. IRCTC ಪ್ರಯಾಣಿಕರಿಗೆ 10 ಲಕ್ಷದವರೆಗೂ ವಿಮಾ ರಕ್ಷಣೆಯನ್ನು ನೀಡುತ್ತದೆ. ಈ ವಿಮೆಯ ಅಡಿಯಲ್ಲಿ, ಪ್ರಯಾಣದ ವೇಳೆ ಬೆಲ ಬಾಳುವ ವಸ್ತುಗಳನ್ನು ಕಳೆದುಕೊಂಡರೂ ಕೂಡ ಪರಿಹಾರ ಸಿಗುತ್ತದೆ.

ರೈಲಿನಲ್ಲಿ ಪ್ರಯಾಣಿಸುವಾಗ ವಿಮೆ ಮಾಡಿಸಿದ್ದರೆ, ಅಪಘಾತ ಸಂಭವಿಸಿದರೆ, ಚಿಕಿತ್ಸೆ ಲಭಿಸುತ್ತದೆ. ಮೃತಪಟ್ಟ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವಿಕಲರಾದವರಿಗೆ ರೂ. 10 ಲಕ್ಷದವರೆಗೂ ವಿಮೆ ಮೊತ್ತ ಸಿಗುತ್ತದೆ. ಭಾಗಶಃ ಅಂಗವಿಕಲರಾದರೆ, ರೂ.7.5 ಲಕ್ಷ ಪರಿಹಾರ ದೊರೆಯುತ್ತದೆ. ತೀವ್ರ ಗಾಯಗಳಾದರೆ 2 ಲಕ್ಷ ರೂ., ಹಾಗೂ ಸಣ್ಣಪುಟ್ಟ ಗಾಯಗಳಾದರೆ 10,000 ರೂ.ವರೆಗೆ ಪ್ರಯಾಣಿಕರಿಗೆ IRCTCಯ ವಿಮಾ ಕಂಪನಿ ನೀಡುತ್ತದೆ.

Related News

spot_img

Revenue Alerts

spot_img

News

spot_img