28.2 C
Bengaluru
Wednesday, July 3, 2024

ಹೈದರಾಬಾದ್:‌ ಮಾರಾಟವಾಗದೇ ಉಳಿದ 1 ಲಕ್ಷ ಮನೆಗಳು-ಕಾರಣವೇನು?

ರಿಯಾಲಿಟಿ ಉದ್ಯಮವು ದುಬಾರಿ ಆಗುತ್ತಿದ್ದಂತೆ ಹೈದರಾಬಾದ್‌ನಲ್ಲಿ ಸಾಕಷ್ಟು ಪ್ರಮಾಣದ ಮನೆಗಳು ಮಾರಾಟವಾಗದೇ ಉಳಿದಿವೆ. ತೆಲಂಗಾಣ ರಾಜ್ಯದ ರಾಜಧಾನಿಯಲ್ಲಿ ಸರಿಸುಮಾರು ಒಂದು ಲಕ್ಷ ಮನೆಗಳು ಗ್ರಾಹಕರಿಗಾಗಿ ಕಾಯುತ್ತಿವೆ. ಇದು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು.

ಭಾರತ ಮೂಲದ ಡಿಜಿಟಲ್‌ ರಿಯಲ್‌ ಎಸ್ಟೇಟ್ ವಹಿವಾಟು ಮತ್ತು ಸಲಹೆಗಾರ ಸಂಸ್ಥೆ ಪ್ರಾಪ್‌ಟೈಗರ್‌ ವರದಿ ಪ್ರಕಾರ 2022ರ ಮೂರನೇ ತ್ರೈಮಾಸಿಕದಲ್ಲಿ ಹೈದರಾಬಾದ್‌ನಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 99,090.

ನಗರವು 40 ತಿಂಗಳಿಂದ ಮಾರಾಟವಾಗದ ಸ್ವತ್ತುಗಳನ್ನು ಹೊಂದಿದೆ. ದೆಹಲಿಯು (62 ತಿಂಗಳ ಓವರ್‌ಹ್ಯಾಂಗ್) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಹೈದರಾಬಾದ್‌ನದ್ದು. ಎರಡನೇ ತ್ರೈಮಾಸಿಕದಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 82,000 ದಷ್ಟಿತ್ತು.

ಒಟ್ಟಾರೆ ದೇಶದಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 2022ರ ಮೂರನೇ ತ್ರೈಮಾಸಿಕದಲ್ಲಿ 7.85 ಲಕ್ಷಕ್ಕೆ ತಲುಪಿದೆ. 2.72 ಲಕ್ಷ ಮಾರಾಟವಾಗದ ಮನೆಗಳೊಂದಿಗೆ ಈ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಮಾರಾಟವಾಗದ 77,260 ಮನೆಗಳೊಂದಿಗೆ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಇನ್ನು ಕೆಲವು ನಗರಗಳಲ್ಲಿ, ಬಿಲ್ಡರ್‌ಗಳು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಸದ್ಯದ ವೇಗದಲ್ಲೇ ಮಾರಾಟವಾಗದ ತಮ್ಮ ಸ್ವತ್ತುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಮಾರಾಟವಾಗದೇ ಉಳಿಯುವ ಮನೆಗಳ ಪ್ರಮಾಣ ತಗ್ಗಿದೆ.

ಮಾರಾಟವಾಗದ ದಾಸ್ತಾನು ಹೆಚ್ಚಳಕ್ಕೆ ನಿರ್ಮಾಣ ವೆಚ್ಚ, ನೋಂದಣಿ ಶುಲ್ಕಗಳು ಮತ್ತು ಜಮೀನು ದರಗಳು ಏರಿಕೆಯಾಗಿರುವುದೇ ಕಾರಣ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹೇಳುತ್ತಾರೆ. ಇವು ನಿರ್ಮಾಣ ಹಂತದಲ್ಲಿರುವ ಮತ್ತು ಇನ್ನಷ್ಟೇ ನಿರ್ಮಾಣ ಆಗಬೇಕಿರುವ ಮನೆಗಳ ವೆಚ್ಚವನ್ನು ಹೆಚ್ಚಿಸಿವೆ. ಅದೂ ಅಲ್ಲದೆ, ಹೈದರಾಬಾದ್‌ನಲ್ಲಿ ಹೊಸ ಯೋಜನೆಗಳ ಆರಂಭವೂ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಮಾರಾಟವಾಗದ ಮನೆಗಳ ಸಂಖ್ಯೆ ಹೆಚ್ಚಾಗಿದೆ.

2022ರ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 27,440 ಹೊಸ ಮನೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿವೆ. ಇದು ಮೊದಲ ಸ್ಥಾನದಲ್ಲಿರುವ ಮುಂಬೈಗಿಂತ (28,880) ತುಸುವೇ ಕಡಿಮೆ. ಆದರೆ ಹೊಸ ಮನೆಗಳು ಲಭ್ಯವಾದ ಪ್ರಮಾಣದಲ್ಲಿ ಮನೆ ಮಾರಾಟ ಸಾಧ್ಯವಾಗಿಲ್ಲ. ಕೇವಲ 10,570 ಮನೆಗಳು ಮಾರಾಟವಾಗಿವೆ.

ಇದೇ ವೇಳೆ ಹಬ್ಬದ ಋತು ಆರಂಭವಾಗಿರುವ ಕಾರಣ ಉದ್ಯಮ ವಲಯವು ಹೆಚ್ಚಿನ ಪ್ರಗತಿ ಕಾಣಬಹುದು ಎಂಬ ಉದ್ಯಮಿಗಳ ನಿರೀಕ್ಷೆ ನಿಜವಾಗತೊಡಗಿದೆ. ʻಕೋವಿಡ್‌ ಸಾಂಕ್ರಾಮಿಕ ಕಾಲ ಮತ್ತು ಆನಂತರದ ಅಡಚಣೆಗಳ ಹೊರತಾಗಿಯೂ ರಿಯಲ್ ಎಸ್ಟೇಟ್‌ ಉದ್ಯಮವು ಪುಟಿದೇಳುತ್ತಿದೆ ಎಂಬುದನ್ನು ಅಂಕಿಅಂಶಗಳು ಮತ್ತು ನಮ್ಮ ವರದಿಯ ಒಳನೋಟಗಳು ಸಾಬೀತುಪಡಿಸುತ್ತಿವೆ. ವಿಶೇಷವಾಗಿ ಈಗಷ್ಟೇ ಆರಂಭವಾಗಿರುವ ಹಬ್ಬದ ಋತುವಿನಲ್ಲಿ ನಾವು ಗ್ರಾಹಕರ ಪ್ರಮಾಣ ನಿರಂತರವಾಗಿ ಏರಿಕೆ ಆಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಹೂಡಿಕೆ ಕುರಿತಾದ ಸಕಾರಾತ್ಮಕ ಭಾವವನ್ನು ತೋರಿಸುತ್ತದೆʼ ಎಂದು ಮಕಾನ್.ಕಾಂ., ಹೌಸಿಂಗ್‌.ಕಾಂ. ಮತ್ತು ಪ್ರಾಪ್‌ಟೈಗರ್.ಕಾಂ. ಸಮೂಹದ ಮುಖ್ಯ ಹಣಕಾಸು ಅಧಿಕಾರಿ ವಿಕಾಸ್‌ ವಾಧವಾನ್‌ ಅಭಿಪ್ರಾಯಪಡುತ್ತಾರೆ.

ಈ ವರದಿಯಲ್ಲಿ ಅಹಮದಾಬಾದ್‌, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತ, ಮೂಂಬೈ ಮಹಾನಗರ ವಲಯ, ದೆಹಲಿ-ರಾಷ್ಟ್ರ ರಾಜಧಾನಿ ವಲಯ ಮತ್ತು ಪುಣೆ ಮಾರುಕಟ್ಟೆಗಳ ಅಧ್ಯಯನ ಇದೆ.

Related News

spot_img

Revenue Alerts

spot_img

News

spot_img