ಸಾಮಾನ್ಯವಾಗಿ ಸ್ಥಿರ ಆಸ್ತಿಗಳ ಖರೀದಿಗೆ ಸಾಲ ಪಡೆಯಬೇಕೆಂದರೆ ಸಾಲ ಪಡೆಯುವವರು ಸಾಲದಾತ ಸಂಸ್ಥೆಗಳಿಗೆ ಆಸ್ತಿಯನ್ನು ಅಡಮಾನ ಇಡುವುದು ಅವಶ್ಯ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸುವ ವರೆಗೂ ಆ ಆಸ್ತಿಯು ಅಡಮಾನದ ರೂಪದಲ್ಲಿಯೇ ಇರುತ್ತದೆ.
ಆಸ್ತಿಯು ಅಡಮಾನವಾಗಿ ಇರುವ ಅವಧಿಯಲ್ಲಿ ಅದರ ಮಾಲೀಕನು ಸಾಲದ ಹೊರೆ ತಗ್ಗಿಸುವುದಕ್ಕಾಗಿಯೋ, ಹಣದ ಅನಿವಾರ್ಯಕ್ಕೋ ಅಥವಾ ಆಸ್ತಿಗೆ ಒಳ್ಳೆಯ ಲಾಭ ಸಿಗುತ್ತಿದೆ ಎಂಬ ಕಾರಣಕ್ಕಾಗಿಯೋ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭ ಬರಬಹುದು. ಆದರೆ, ಆಸ್ತಿಯ ಎಲ್ಲಾ ಮೂಲ ದಾಖಲೆಗಳು ಸಾಲದಾತ ಸಂಸ್ಥೆಯ ಸುಪರ್ದಿಯಲ್ಲಿ ಇರುವಾಗ ಆಸ್ತಿಯನ್ನು ಮಾರಾಟ ಮಾಡುವ ವಿಧಾನ ಯಾವುದು? ಇಲ್ಲಿದೆ ಅನುಸರಿಸಬೇಕಾದ ಮಾರ್ಗ…
ʻಸಾಲ ಬಾಕಿʼ ಪತ್ರ
ಎಲ್ಲಕ್ಕಿಂತ ಮೊದಲನೆಯದಾಗಿ, ಆಸ್ತಿ ಮಾರಾಟ ಮಾಡುವವರು ಸಾಲದಾತ ಸಂಸ್ಥೆಗೆ ʻಸಾಲ ಬಾಕಿʼ ಪತ್ರ ನೀಡುವಂತೆ ಮನವಿ ಮಾಡಿಕೊಳ್ಳಬೇಕು. ಅದರಲ್ಲಿ, ನಿರ್ದಿಷ್ಟ ದಿನಾಂಕಕ್ಕೆ ಬಾಕಿ ಉಳಿದಿರುವ ಸಾಲದ ಮೊತ್ತವನ್ನು ತಿಳಿಸಿರಲಾಗುತ್ತದೆ ಮತ್ತು ಆಸ್ತಿಗೆ ಸಂಬಂಧಿಸಿ ತಮ್ಮ ಬಳಿ ಇರುವ ದಾಖಲೆಗಳ ಪಟ್ಟಿಯನ್ನು ಸಾಲದಾತ ಸಂಸ್ಥೆ ಅದರಲ್ಲಿ ನಮೂದಿಸಿರುತ್ತದೆ.
ಖರೀದಿದಾರರಿಂದ ಹಣ ಪಾವತಿ
ಆಸ್ತಿ ಖರೀದಿ ಮಾಡಲು ಬಯಸುವ ವ್ಯಕ್ತಿಯು, ಸಾಲ ಬಾಕಿ ಪತ್ರದಲ್ಲಿ ತಿಳಿಸಿರುವ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ ಮತ್ತು ಸಾಲ ಖಾತೆ ಚುಕ್ತಾ ಮಾಡುವಂತೆ ಕೇಳಬೇಕು.
ಸಾಲ ಬಾಕಿ ಇಲ್ಲ ಎಂಬ ಪ್ರಮಾಣಪತ್ರ
ಒಮ್ಮೆ ಸಾಲದಾತ ಸಂಸ್ಥೆಯು ಪಾವತಿ ಸ್ವೀಕರಿಸಿ, ಸಾಲ ಮುಕ್ತಾಯಕ್ಕೆ ಮನವಿ ಸ್ವೀಕರಿಸಿದ ನಂತರ ಅದು ನಿರ್ದಿಷ್ಟ ಸಾಲಕ್ಕೆ ಸಂಬಂಧಿಸಿ, ʻಯಾವುದೇ ಸಾಲ ಬಾಕಿ ಇರುವುದಿಲ್ಲʼ ಎಂಬ ಪ್ರಮಾಣ ಪತ್ರವನ್ನು ನೀಡುತ್ತದೆ ಮತ್ತು ಆಸ್ತಿಗೆ ಸಂಬಂಧಿಸಿ ತನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಬಿಡುಗಡೆಗೊಳಿಸಿ, ಮಾಲೀಕರಿಗೆ ಹಸ್ತಾಂತರಿಸುತ್ತದೆ.
ಮಾರಾಟ ವಹಿವಾಟು
ಯಾವುದೇ ಸಾಲ ಬಾಕಿ ಇಲ್ಲ ಎಂಬ ಪ್ರಮಾಣಪತ್ರ ಮತ್ತು ಆಸ್ತಿಯ ಎಲ್ಲ ಮೂಲ ದಾಖಲೆಗಳನ್ನು ಪಡೆದುಕೊಂಡ ನಂತರ, ಮಾಲೀಕರು ಮಾರಾಟ ವಹಿವಾಟು ನಡೆಸಲು ಮತ್ತು ಖರೀದಿದಾರರಿಗೆ ಆಸ್ತಿಯನ್ನು ಪರಭಾರೆ ಮಾಡಲು ಸಾಧ್ಯವಾಗುತ್ತದೆ.
ಗಮನಿಸಬೇಕಾದ ಅಂಶ
• ಅಡಮಾನ ಇರುವ ಆಸ್ತಿಯನ್ನು ಮಾರಾಟ ಮಾಡುವ ಇನ್ನೊಂದು ವಿಧಾನವೆಂದರೆ, ಬಾಕಿ ಇರುವ ಸಾಲದ ಮೊತ್ತವನ್ನು ಮೂಲ ಸಾಲಗಾರರಿಂದ ಅದೇ ಸಾಲದಾತ ಸಂಸ್ಥೆಯು ಆಸ್ತಿ ಖರೀದಿಸುವ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವುದು (ಖರೀದಿ ಮಾಡುವ ವ್ಯಕ್ತಿ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದ ಸಂದರ್ಭದಲ್ಲಿ).
• ಆಸ್ತಿಯ ಮೂಲ ದಾಖಲೆಗಳು ಲಭ್ಯವಿಲ್ಲದ ಪಕ್ಷದಲ್ಲಿ, ಸ್ಕ್ಯಾನ್ ಮಾಡಿದ ಅಥವಾ ನಕಲುಪ್ರತಿಯನ್ನೂ ವಹಿವಾಟು ನಡೆಸಲು ಬಳಸಿಕೊಳ್ಳಬಹುದಾಗಿದೆ.