26.7 C
Bengaluru
Sunday, December 22, 2024

ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿ ಮಾಡುವ ವಿಧಾನ ಹೇಗೆ ? ಇಲ್ಲಿದೆ ಮಾಹಿತಿ.

ಬೆಂಗಳೂರು, ಜು. 24 : ಕಾವೇರಿ 2.0 ತಂತ್ರಾಂಶದ ಮುಂದುವರೆದ ಅಭಿವೃದ್ದಿಯಂತೆ ಈ ತಂತ್ರಾಂಶದಲ್ಲಿ ನೋಂದಣಿಯ ವಿಧಾನವನ್ನು ನಾಗರೀಕರಿಗಾಗಿ ಕಂದಾಯ ಇಲಾಖೆಯು ಬಿಡುಗಡೆ ಮಾಡಿದೆ. ಅದರಂತೆ ಈ ಕೆಳಕಂಡಂತೆ ಒಂದೊಂದಾಗಿ ವಿವರಿಸಲಾಗಿದೆ. ಮೊದಲನೆಯದಾಗಿ ಕಾವೇರಿ-2.0 ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಸೇವೆಗಳನ್ನು ಪಡೆಯಲು https://kaveri.karnataka.gov.in ಪೋರ್ಟಲ್ ನಲ್ಲಿ ಹೊಸದಾಗಿ ನಿಮ್ಮ ಖಾತೆಯನ್ನು ರಚಿಸಿ ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಸೃಜಿಸಿ ಲಾಗಿನ್ ಆಗಬೇಕು. ನಂತರ “ದಸ್ತಾವೇಜು ನೋಂದಣಿ” ಸೇವೆಯನ್ನು ಪೋರ್ಟ್ಲ್ ನಲ್ಲಿ ಆಯ್ಕೆ ಮಾಡಿಕೊಂಡು ತಂತ್ರಾಂಶ ಕೇಳುವ ಮಾಹಿತಿಯನ್ನು ನಮೂದು ಮಾಡಬೇಕು, ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು.

 

ಸಲ್ಲಿಸಿರುವ ಮಾಹಿತಿಯನ್ನು ಉಪನೋಂದಣಾಧಿಕಾರಿಗಳು ಪರಿಶೀಲಿಸಿ ದಸ್ತಾವೇಜಿನ ನೋಂದಣಿಗೆ ಪಾವತಿಸಬೇಕಾಗಿರುವ ಶುಲ್ಕಗಳ ವಿವರವನ್ನು ಆನ್ ಲೈನ್ ಮುಖಾಂತರ ನಿಮ್ಮ ಲಾಗಿನ್ಗೆ ತಿಳಿಸುತ್ತಾರೆ. ನಂತರ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ದಿನಾಂಕದಂದು ಉಪನೋಂದಣಾಧಿಕಾರಿಗಳ ಮುಂದೆ ಭೌತಿಕ ದಸ್ತಾವೇಜಿನೊಂದಿಗೆ ಪಕ್ಷಕಾರರು ಹಾಗೂ ಸಾಕ್ಷಿಗಳು ಹಾಜರಾಗಬೇಕು. ಉಪನೋಂದಣಾಧಿಕಾರಿಗಳು ಹಾಜರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯಲು ನಿರ್ದಿಷ್ಟ ಕೌಂಟರನ್ನು ನಿಮಗೆ ನಿಗದಿ ಮಾಡುತ್ತಾರೆ.

ಇದಾದ ಬಳಿಕ ನಿಮ್ಮ ಲಾಗಿನ್ ಮೂಲಕ ನಿಗದಿತ ಶುಲ್ಕವನ್ನು ಆನ್ ಲೈನ್ ಮೂಲಕ ಭರಿಸಬೇಕು. ನಂತರ ನೋಂದಣಿಗೆ / ಕಛೇರಿಗೆ ಭೇಟಿ ನೀಡಲು ನಿರ್ದಿಷ್ಟ ದಿನಾಂಕವನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ನಿಗಧಿ ಪಡಿಸಿರುವ ಕೌಂಟರ್ನಲ್ಲಿ ಹಾಜರಾದ ಮೇಲೆ ನಿಮ್ಮ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತನ್ನು ಪಡೆಯಲಾಗುವುದು. ನಂತರ ತಮಗೆ ಒದಗಿಸಲಾಗುವ ಸಮ್ಮರಿ ರಿಪೋರ್ಟ್ ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ ನಿಮ್ಮ ಸಹಿಯನ್ನು ಮಾಡಬೇಕು.

ತದನಂತರ ಉಪನೋಂದಣಾಧಿಕಾರಿಗಳು ದಸ್ತಾವೇಜನ್ನು ನೋಂದಣಿ ಮಾಡಿದ / ಪೆಂಡಿಂಗ್ ಇಟ್ಟ ನಂತರ ನಿಗದಿತ ಕೌಂಟರ್ ನಲ್ಲಿ ದಸ್ತಾವೇಜಿನಲ್ಲಿ ಹಿಂಬರಹದ ಪ್ರಿಂಟ್ ತೆಗೆಯುತ್ತಾರೆ. ದಸ್ತಾವೇಜಿನ ಹಿಂಬರಹದಲ್ಲಿ ಪಕ್ಷಕಾರರು, ಸಾಕ್ಷಿಗಳು ಹಾಗೂ ಉಪನೋಂದಣಾಧಿಕಾರಿಗಳು ಸಹಿ ಮಾಡಬೇಕು. ಸಹಿ ಮಾಡಿದ ದಸ್ತಾವೇಜನ್ನು ಸ್ಕ್ಯಾನ್ ಮಾಡಿದ ನಂತರ ಉಪನೋಂದಣಾಧಿಕಾರಿಗಳು ಡಿಜಿಟಲ್ ಸಹಿ ಮಾಡುತ್ತಾರೆ. ಈ ಪ್ರಕ್ರಿಯೆಗಳು ಮುಗಿದ ನಂತರ ಕೊನೆಯಲ್ಲಿ ಸ್ವೀಕೃತಿ ನಲ್ಲಿ ಸಹಿ ಮಾಡಿ ನಿಮ್ಮ ನೋಂದಣಿಯಾದ ದಸ್ತಾವೇಜನ್ನು ಪಡೆಯಬಹುದು.

Related News

spot_img

Revenue Alerts

spot_img

News

spot_img