28 C
Bengaluru
Sunday, July 7, 2024

ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿ ಮಾಡುವ ವಿಧಾನ ಹೇಗೆ ? ಇಲ್ಲಿದೆ ಮಾಹಿತಿ.

ಕಾವೇರಿ 2.0 ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ ಆಸ್ತಿ ರಿಜಿಸ್ಟ್ರೇಷನ್, ವಿವಾಹ ನೋಂದಣಿ, ಅಗ್ರಿಮೆಂಟ್ ನೋಂದಣಿ, ಜಿಪಿಎ ಕಾರ್ಯಗತ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಬಹುತೇಕ ನೋಂದಣಿ ಪ್ರಕ್ರಿಯೆ ಆನ್ಲೈನ್ ನಲ್ಲಿಯೇ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರು ಅನಾವಶ್ಯಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹೊಂದಲಾಗಿದೆ.

ಕಾವೇರಿ 2.0 ತಂತ್ರಾಂಶದ ಮುಂದುವರೆದ ಅಭಿವೃದ್ದಿಯಂತೆ ಈ ತಂತ್ರಾಂಶದಲ್ಲಿ ನೋಂದಣಿಯ ವಿಧಾನವನ್ನು ನಾಗರೀಕರಿಗಾಗಿ ಕಂದಾಯ ಇಲಾಖೆಯು ಬಿಡುಗಡೆ ಮಾಡಿದೆ. ಅದರಂತೆ ಈ ಕೆಳಕಂಡಂತೆ ಒಂದೊಂದಾಗಿ ವಿವರಿಸಲಾಗಿದೆ.

ಮೊದಲನೆಯದಾಗಿ ಕಾವೇರಿ-2.0 ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಸೇವೆಗಳನ್ನು ಪಡೆಯಲು https://kaveri.karnataka.gov.in ಪೋರ್ಟಲ್ ನಲ್ಲಿ ಹೊಸದಾಗಿ ನಿಮ್ಮ ಖಾತೆಯನ್ನು ರಚಿಸಿ ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಸೃಜಿಸಿ ಲಾಗಿನ್ ಆಗಬೇಕು. ನಂತರ “ದಸ್ತಾವೇಜು ನೋಂದಣಿ” ಸೇವೆಯನ್ನು ಪೋರ್ಟ್ಲ್ ನಲ್ಲಿ ಆಯ್ಕೆ ಮಾಡಿಕೊಂಡು ತಂತ್ರಾಂಶ ಕೇಳುವ ಮಾಹಿತಿಯನ್ನು ನಮೂದು ಮಾಡಬೇಕು, ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು.

ಸಲ್ಲಿಸಿರುವ ಮಾಹಿತಿಯನ್ನು ಉಪನೋಂದಣಾಧಿಕಾರಿಗಳು ಪರಿಶೀಲಿಸಿ ದಸ್ತಾವೇಜಿನ ನೋಂದಣಿಗೆ ಪಾವತಿಸಬೇಕಾಗಿರುವ ಶುಲ್ಕಗಳ ವಿವರವನ್ನು ಆನ್ ಲೈನ್ ಮುಖಾಂತರ ನಿಮ್ಮ ಲಾಗಿನ್ಗೆ ತಿಳಿಸುತ್ತಾರೆ. ನಂತರ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ದಿನಾಂಕದಂದು ಉಪನೋಂದಣಾಧಿಕಾರಿಗಳ ಮುಂದೆ ಭೌತಿಕ ದಸ್ತಾವೇಜಿನೊಂದಿಗೆ ಪಕ್ಷಕಾರರು ಹಾಗೂ ಸಾಕ್ಷಿಗಳು ಹಾಜರಾಗಬೇಕು. ಉಪನೋಂದಣಾಧಿಕಾರಿಗಳು ಹಾಜರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯಲು ನಿರ್ದಿಷ್ಟ ಕೌಂಟರನ್ನು ನಿಮಗೆ ನಿಗದಿ ಮಾಡುತ್ತಾರೆ. ಈದಾದ ಬಳಿಕ ನಿಮ್ಮ ಲಾಗಿನ್ ಮೂಲಕ ನಿಗದಿತ ಶುಲ್ಕವನ್ನು ಆನ್ ಲೈನ್ ಮೂಲಕ ಭರಿಸಬೇಕು. ನಂತರ ನೋಂದಣಿಗೆ / ಕಛೇರಿಗೆ ಭೇಟಿ ನೀಡಲು ನಿರ್ದಿಷ್ಟ ದಿನಾಂಕವನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು.

ನಂತರ ನಿಮಗೆ ನಿಗಧಿ ಪಡಿಸಿರುವ ಕೌಂಟರ್ನಲ್ಲಿ ಹಾಜರಾದ ಮೇಲೆ ನಿಮ್ಮ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತನ್ನು ಪಡೆಯಲಾಗುವುದು. ನಂತರ ತಮಗೆ ಒದಗಿಸಲಾಗುವ ಸಮ್ಮರಿ ರಿಪೋರ್ಟ್ ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ ನಿಮ್ಮ ಸಹಿಯನ್ನು ಮಾಡಬೇಕು.

ತದನಂತರ ಉಪನೋಂದಣಾಧಿಕಾರಿಗಳು ದಸ್ತಾವೇಜನ್ನು ನೋಂದಣಿ ಮಾಡಿದ / ಪೆಂಡಿಂಗ್ ಇಟ್ಟ ನಂತರ ನಿಗದಿತ ಕೌಂಟರ್ ನಲ್ಲಿ ದಸ್ತಾವೇಜಿನಲ್ಲಿ ಹಿಂಬರಹದ (Endorsement) ಪ್ರಿಂಟ್ ತೆಗೆಯುತ್ತಾರೆ. ದಸ್ತಾವೇಜಿನ ಹಿಂಬರಹದಲ್ಲಿ ಪಕ್ಷಕಾರರು, ಸಾಕ್ಷಿಗಳು ಹಾಗೂ ಉಪನೋಂದಣಾಧಿಕಾರಿಗಳು ಸಹಿ ಮಾಡಬೇಕು. ಸಹಿ ಮಾಡಿದ ದಸ್ತಾವೇಜನ್ನು ಸ್ಕ್ಯಾನ್ ಮಾಡಿದ ನಂತರ ಉಪನೋಂದಣಾಧಿಕಾರಿಗಳು ಡಿಜಿಟಲ್ ಸಹಿ ಮಾಡುತ್ತಾರೆ. ಈ ಪ್ರಕ್ರಿಯೆಗಳು ಮುಗಿದ ನಂತರ ಕೊನೆಯಲ್ಲಿ ಸ್ವೀಕೃತಿ (acknowledgment)ನಲ್ಲಿ ಸಹಿ ಮಾಡಿ ನಿಮ್ಮ ನೋಂದಣಿಯಾದ ದಸ್ತಾವೇಜನ್ನು ಪಡೆಯಬಹುದು.

 

ನೆನಪಿರಲಿ : ಕಾವೇರಿ 2.0 ತಂತ್ರಾಂಶದಲ್ಲಿ ದಸ್ತಾವೇಜು ನೋಂದಣಿಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ವಿಷಯಗಳನ್ನು ಗಮನಿಸಿ :-

1. ಮೊದಲನೆಯದು ನೋಂದಾಯಿಸಬೇಕಾದ ದಸ್ತಾವೇಜನ್ನು 5 MB ಮೀರದಂತೆ, ಪಿಡಿಎಫ್ ಮಾದರಿಯಲ್ಲಿ ಸ್ಕ್ಯಾನ್ ಮಾಡಿಕೊಳ್ಳಬೇಕು. ವಿಶೇಷ ಸೂಚನೆ: ಅಪ್ ಲೋಡ್ ಮಾಡಲಾದ ದಸ್ತಾವೇಜು ಮತ್ತು ಭೌತಿಕ ಪ್ರತಿಗಳಿಗೂ ಯಾವುದೇ ವ್ಯತ್ಯಾಸಗಳಿರಬಾರದು.

2. ಎಲ್ಲಾ ಪಕ್ಷಗಾರರ ಗುರುತಿನ ಪುರಾವೆಗೆ PAN/ VOTER ID/ PASSPORT/BANK PASSBOOK (With photo) ಚಾಲನಾ ಪರವಾನಗಿಗಳನ್ನು pdf ಮಾದರಿಯಲ್ಲಿ ಸ್ಕಾನ್ ಮಾಡಿಕೊಳ್ಳಬೇಕು (ಬರೆದುಕೊಡುವವರು ಬರೆಸಿಕೊಂಡವರು ಗುರುತಿಸುವವರ ).

3. ದಸ್ತಾವೇಜುಗಳ ಜೊತೆಗೆ ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳನ್ನು 5 MB ಮೀರದಂತೆ, ಪಿಡಿಎಫ್ ಮಾದರಿಯಲ್ಲಿ ಸ್ಕಾನ್ ಮಾಡಿಕೊಳ್ಳಬೇಕು.

4. ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಪಟ್ಟಂತೆ :
 ಗ್ರಾಮ ಪಂಚಾಯಿತಿ ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಸ್ವತ್ತಿನ ಖಾತೆ ಮತ್ತು ಅಸೆಸ್ಟೆಂಟ್ ವಹಿಯ ಉಧೃತ ಭಾಗ ನಮೂನೆ 9 ಮತ್ತು 11A/11B.

 ಸ್ವತ್ತುಗಳ ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ನಮೂನೆ 9 ಮತ್ತು 11A / 11B ರ ಜೊತೆಗೆ ಗ್ರಾಮ ಪಂಚಾಯತಿ/ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

 ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ ಇಲಾಖೆಗಳಿಂದ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

 ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

5. ಪಟ್ಟಣ ಪಂಚಾಯತಿ/ಪುರಸಭೆ/ನಗರ ಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಪಟ್ಟಂತೆ:
o ಪಟ್ಟಣ ಪಂಚಾತಿ / ಪುರಸಭೆ / ನಗರಸಭೆಯ ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉಧೃತ ಭಾಗ.

o ಸ್ವತ್ತುಗಳ ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದೃತ ಭಾಗದ ಜೊತೆಗೆ ಪಟ್ಟಣ ಪಂಚಾತಿ | ಪುರಸಭೆ | ನಗರಸಭೆ / ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

o ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ / ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

 

6. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಪಟ್ಟಂತೆ :

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ | ಮಹಾನಗರ ಪಾಲಿಕೆ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉಧೃತ ಭಾಗ.

 ಖಾತ ಮತ್ತು ಮೌಲ್ಯಮಾಪನ ಸಾರವನ್ನು ಇತರೆ ನಿಗಮಗಳ ಪ್ರಾಧಿಕಾರದಿಂದ ನೀಡಲಾಗುತ್ತದೆ.

 ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದ್ಭತ ಭಾಗದ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಮಹಾನಗರ ಪಾಲಿಕೆ / ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

 ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ / ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

 

7. ಕೃಷಿ ಜಮೀನಿನ ವರ್ಗಾವಣೆ ಪತ್ರಗಳ ನೋಂದಣಿ ಸಮಯದಲ್ಲಿ ಪಡೆಯಬೇಕಾದ ದಾಖಲೆಗಳು :

 ಜಮೀನಿನ (RTC) ಪಹಣಿ ಪತ್ರ (ಪತ್ರವನ್ನು ನೋಂದಣಿಗೆ ಹಾಜರುಪಡಿಸಿದ ದಿನಾಂಕದ ಹಿಂದಿನ 15 ದಿನಗಳ ಒಳಗೆ ನೀಡಲ್ಪಟ್ಟಿರುವ RTC).

 ಭೂ ಸುಧಾರಣೆ ಕಾಯ್ದೆ 1961ರ ಕಲಂ 81-ಎ ಅಡಿ ಘೋಷಣಾ ಪತ್ರ

 ಕರ್ನಾಟಕ ಪರಿಶಿಷ್ಠ ಜಾತಿ / ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಪರಬಾರೆ ನಿಷೇದ) ಕಾಯ್ದೆ 1978ರಡಿ (ಕಲಂ 6ರನ್ವರ) ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ನಿರಾಕ್ಷೇಪಣ ಪತ್ರ ಅಥವಾ ಅನುಮತಿ ಪತ್ರ.

 ಜಮೀನಿನ ಸರ್ವೇ ನಕ್ಷೆ (ಸ್ಕೆಚ್)- ನಮೂನೆ-11ಇ (ಕರ್ನಾಟಕ ಭೂ ಕಂದಾಯ ಕಾಯ್ದೆ 1961ರ ಕಲಂ 131 (ಸಿ) ಹಾಗೂ ಕರ್ನಾಟಕ ಭೂ ಕಂದಾಯ ನಿಯಮಗಳ ನಿಯಮ 46(ಎಚ್) ರಡಿ ವಿಧಿಸಿರುವಂತೆ).

 

8. ದಸ್ತಾವೇಜುಗಳ ಜೊತೆಗೆ ಹಾಜರು ಪಡಿಸಬೇಕಾದ ದಾಖಲೆಗಳು :

 ಅನುಬಂಧ -II ರಂತೆ ಪ್ರಮಾಣ ಪತ್ರ

 ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು-1977ರ ನಿಯಮ 3ರಲ್ಲಿ ನಿಗಧಿಪಡಿಸಿರುವಂತೆ ನಮೂನೆ-1.

 ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

9. ಸ್ಟಾಂಪ್ ಡ್ಯೂಟಿ ಡಿನೋಟೇಷನ್ ಅಗತ್ಯ ವಿದ್ದಲ್ಲಿ ಸಂಬಂಧ ಪಟ್ಟ ದಾಖಲೆ.

10.ಹಾಜರಾತಿ ವಿನಾಯ್ತಿ ಇದಲ್ಲಿ ಸಂಬಂಧ ಪಟ್ಟ ಪ್ರಾಧಿಕಾರಿಯ ಹಾಜರಾತಿ ವಿನಾಯಿತಿ ಸಂಬಂಧ ಪತ್ರ.

11.ಖಾಸಗಿ ಹಾಜರಾತಿಯ ಅವಶ್ಯಕತೆ ಇದ್ದಲ್ಲಿ ಅರ್ಜಿ ಮತ್ತು ವೈದ್ಯಕೀಯ ದೃಢೀಕರಣ ಪತ್ರದ ಪ್ರತಿ

Related News

spot_img

Revenue Alerts

spot_img

News

spot_img