20 C
Bengaluru
Tuesday, July 9, 2024

ಬೆಂಗಳೂರಲ್ಲಿ ಆಸ್ತಿ ಹೊಂದಿದ್ದೀರಾ? ಆನ್‌ಲೈನ್‌ನಲ್ಲೇ ತೆರಿಗೆ ಪಾವತಿಸಿ…

ನಮ್ಮ ಜೀವನ ಶೈಲಿ, ಆದ್ಯತೆಗಳು ಬದಲಾಗುವ ಈ ಹೊತ್ತಿನಲ್ಲಿ ಮತ್ತು ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಸರಳವಾಗಿ ಪ್ರವೇಶ ಲಭ್ಯವಾಗುತ್ತಿರುವ ಕಾರಣಕ್ಕೆ ಜಗತ್ತು ತೀರಾ ಚಿಕ್ಕದಾಗುತ್ತಿದೆ. ನಾವು ಹುಟ್ಟಿದ ಪ್ರದೇಶದಲ್ಲೇ ಬದುಕು ಕಟ್ಟಿಕೊಳ್ಳುವ ಕಾಲ ಇದಲ್ಲ; ಬದಲಾಗಿ, ಉದ್ಯೋಗದ ನಿಮಿತ್ತ, ಮದುವೆ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಬಾರಿ ಸ್ಥಳಾಂತರಗೊಳ್ಳುತ್ತಲೇ ಇರುತ್ತೇವೆ. ಪರಿಣಾಮವಾಗಿ, ಸದ್ಯ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಜನರು ಮನೆ ಕೊಳ್ಳುತ್ತಿರುತ್ತಾರೆ. ಒಮ್ಮೆ ಜನರು ತಮ್ಮ ಮೂಲ ಸ್ಥಳದಿಂದ ಬೇರೆಡೆಗೆ ಹೋದರೆ, ಕೇವಲ ಆಸ್ತಿ ತೆರಿಗೆ ಕಟ್ಟುವ ಸಲುವಾಗಿಯೇ ಮತ್ತೆ ಆ ಊರಿಗೆ ಬರಬೇಕಾಗುವ ಪರಿಸ್ಥಿತಿಯೂ ಇದೆ. ಆದರೆ ಇದು ಎಲ್ಲಾ ಸಂದರ್ಭದಲ್ಲಿಯೂ ಎಲ್ಲರಿಗೂ ಸಾಧ್ಯವಿರುವುದಿಲ್ಲ.

ಇದೀಗ ಖುಷಿಯ ವಿಚಾರವೆಂದರೆ, ಬೆಂಗಳೂರಿನ ರಿಯಲ್ ಎಸ್ಟೇಟ್ ಸ್ವತ್ತುಗಳ ತೆರಿಗೆ ಪಾವತಿ ವಿಚಾರದಲ್ಲಿ ಇನ್ನುಮುಂದೆ ಈ ತಲೆನೋವು ಇರುವುದಿಲ್ಲ. ಆರಂಭದಿಂದ ಕೊನೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆ ಅಡಿಯಲ್ಲಿ ತರಲಾಗಿದೆ.

ಹಾಗಾದರೆ ಬೆಂಗಳೂರಿನಲ್ಲಿನ ನಿಮ್ಮ ಆಸ್ತಿಯ ತೆರಿಗೆಯನ್ನು ಆನ್‌ಲೈನ್‌ನಲ್ಲಿ ತುಂಬುವ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…

1. ಮೊದಲು ಬಿಬಿಎಂಪಿ ಆಸ್ತಿ ತೆರಿಗೆ ವೆಬ್ ಪುಟ ಪರಿಶೀಲಿಸಿ. (https://bbmptax.karnataka.gov.in/)
2. ಅಲ್ಲಿ ನೀಡಲಾದ ಖಾಲಿ ಜಾಗದಲ್ಲಿ ನಿಮ್ಮ ಆಸ್ತಿಯ ಸಂಖ್ಯೆ ನಮೂದಿಸಿ ಮತ್ತು ಸಬ್ಮಿಟ್ ಗುಂಡಿ ಒತ್ತಿರಿ.
3. ಹೊಸ ಪರದೆ ತೆರೆದುಕೊಳ್ಳುತ್ತದೆ, ಅಲ್ಲಿ ಮತ್ತೊಮ್ಮೆ ನಿಮ್ಮ ಆಸ್ತಿ ಸಂಖ್ಯೆ, ನೋಂದಣಿ ಆದ ದಾಖಲೆಗಳಲ್ಲಿ ಇರುವಂತೆ ನಿಮ್ಮ ಹೆಸರು ಮತ್ತು ಐಡಿ ನಮೂದಿಸಿ ಸಬ್ಮಿಟ್ ಗುಂಡಿ ಒತ್ತಬೇಕು.
4. ಆಗ ಬೇರೊಂದು ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನಿಮ್ಮ ಸಂಪರ್ಕ ಮಾಹಿತಿ, ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಿ, ಸಬ್ಮಿಟ್ ಆಯ್ಕೆ ಒತ್ತಿರಿ.
5. ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಮತ್ತು/ಅಥವಾ ಇ-ಮೇಲ್ ವಿಳಾಸಕ್ಕೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ.
6. ನೀವು ಭರಿಸಬೇಕಿರುವ ಆಸ್ತಿ ತೆರಿಗೆಯ ಮೊತ್ತದ ಮಾಹಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
7. ತೆರಿಗೆ ಮೊತ್ತವನ್ನು ಆಯ್ಕೆ ಮಾಡಿ ಮತ್ತು ನೀಡಲಾದ ಪಾವತಿ ವಿಧಾನಗಳಲ್ಲಿ ನಿಮ್ಮ ಅನುಕೂಲದ ವಿಧಾನವನ್ನು ಆಯ್ದುಕೊಳ್ಳಿ.
8. ನಿಮ್ಮ ಪಾವತಿಯನ್ನು ಖಚಿತಪಡಿಸುವ ರಸೀದಿಯನ್ನು ನೀವು ಸ್ವೀಕರಿಸುವಿರಿ. ಈ ರಸೀದಿಯ ಪ್ರಿಂಟ್ ತೆಗೆದು ನಿಮ್ಮ ಬಳಿ ಇರಿಸಿಕೊಳ್ಳಿ, ಮುಂದೆ ಅಗತ್ಯ ಬೀಳಬಹುದು.

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳ ಪ್ರವೇಶ ಮಾಡಿದವರು ಮತ್ತು ನಗರದಿಂದ ಹೊರಗೆ ಇರುವವರು ಆಸ್ತಿ ತೆರಿಗೆ ಭರಿಸಲು ಆನ್‌ಲೈನ್ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕೆಲಸವನ್ನು ಸುಲಭವಾಗಿಸಿಕೊಂಡಿದ್ದಾರೆ. ನಗರದ ಪ್ರತಿ ಅಪಾರ್ಟ್‌ಮೆಂಟ್ ತೆರಿಗೆಯನ್ನೂ ಈ ವಿಧಾನದಲ್ಲಿ ಪಾವತಿಸುವ ಅವಕಾಶವಿದೆ.

ಹೀಗಾಗಿ ನೀವು ಎಲ್ಲೇ ಇದ್ದರೂ ಬೆಂಗಳೂರಿನಲ್ಲಿ ಇರುವ ನಿಮ್ಮ ಆಸ್ತಿಯ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿ ಮಾಡುವ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಿ.

Related News

spot_img

Revenue Alerts

spot_img

News

spot_img