ಬೆಂಗಳೂರು, ಜು. 26 : ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ಪ್ರತಿಯೊಬ್ಬ ಭಾರತೀಯ ಮಹಿಳೆಯರು ತೆರೆಯಬಹುದಾಗಿದೆ. ಬಾಲಕಿಯರಿಗೆ ಅವರ ವಾರಸುದಾರರು ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಒಂದು ಬಾರಿ ಮಾತ್ರವೇ ಠೇವಣಿ ಮಾಡಲು ಅವಕಾಶವನ್ನು ನೀಡಲಾಗಿದೆ. ಹಾಗಾಗಿ, ಎಷ್ಟು ಠೇವಣಿ ಮಾಡಬೇಕು ಎಂಬುದನ್ನು ಮಹಿಳೆಯರು ಮೊದಲೇ ನಿರ್ಧಾರ ಮಾಡಬೇಕು. ಲೆಕ್ಕಾಚಾರ ಹಾಕಿ, ಅನುಕೂಲವನ್ನು ನೋಡಿಕೊಂಡು, ಅದಕ್ಕೆ ತಕ್ಕಂತೆ ಠೇವಣಿ ಮಾಡಬೇಕು.
ಮಹಿಳಾ ಸಮ್ಮಾನ್ ಖಾತೆಯನ್ನು ತೆರೆದ ಬಳಿಕ ಕನಿಷ್ಠ 1,000 ರೂ.ಗಳನ್ನು ಠೇವಣಿ ಮಾಡಲೇಬೇಕು. ಗರಿಷ್ಠ 2 ಲಕ್ಷ ರೂ.ಗಳವರೆಗೆ ಠೇವಣಿ ಮಾಡಲು ಅವಕಾಶವಿದೆ. ಈ ಯೋಜನೆಗೆ ವಾರ್ಷಿಕ ಶೇ. 7.5ರಷ್ಟು ಬಡ್ಡಿದರವನ್ನು ಸರ್ಕಾರ ನಿಗದಿ ಮಾಡಿದೆ. ಇದರ ಬಡ್ಡಿಯ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಬಡ್ಡಿಯನ್ನು ವರ್ಗಾಯಿಸಲು ಕೆಲ ನಿಬಂಧನೆಗಳು ಇವೆ. ಇಲ್ಲದೇ ಹೋದಲ್ಲಿ ಅಂಚೆ ಕಚೇರಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
2025ರ ಮಾ. 31ರೊಳಗೆ ಅರ್ಜಿ ನಮೂನೆ – 1 ಅನ್ನು ಸಲ್ಲಿಸಬಹುದು. ಈ ಮೂಲಕ ಖಾತೆಯನ್ನು ತೆರೆಯಲು ಮಹಿಳೆಯರಿಗೆ ಅವಕಾಶವಿದೆ. 2 ವರ್ಷಗಳ ಬಳಿಕ ಈ ಯೋಜನೆ ಮೆಚ್ಯುರಿಟಿ ಹೊಂದಲಿದ್ದು, ಹಣವನ್ನು ಅರ್ಜಿ ನಮೂನೆ -2 ಅನ್ನು ಸಲ್ಲಿಸಿ ಪಡೆಯಬಹುದು. ಮೆಚ್ಯೂರಿಟಿ ಆದ ಬಳಿಕ ಖಾತೆಯಲ್ಲಿರುವ ಹಣದ ಪೈಸೆಗಳ ಲೆಕ್ಕಾಚಾರವನ್ನು ಸರಿಸಮಾನವಾಗಿ ವಿತರಿಸಲು ಯೋಜಿಸಿದೆ. ಅಂದರೆ, 50 ಪೈಸೆಗಿಂತ ಹೆಚ್ಚಿಗೆ ಇದ್ದರೆ ಒಂದು ರೂಪಾಯಿ ಕೊಡಲು ಇಲ್ಲವೇ 50 ಪೈಸೆಗಿಂತ ಕಡಿಮೆ ಇದ್ದಲ್ಲಿ ಒಂದು ರೂಪಾಯಿ ಕಡಿಮೆ ಕೊಡುತ್ತದೆ.
ಖಾತೆಯನ್ನು ಮೆಚ್ಯುರಿಟಿಗೂ ಮುನ್ನವೇ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಆದರೆ, ಖಾತೆದಾರರು ಮರಣ ಹೊಂದಿದರೆ, ಇಲ್ಲವೇ ಗಂಭೀರ ಕಾಯಿಲೆಗೆ ತುತ್ತಾದರೆ ಹಾಗೂ ಬಾಲಕಿಯರ ವಾರಸುದಾರರು ಸಾವನ್ನಪ್ಪಿದರೆ ಮಾತ್ರವೇ ಖಾತೆಯನ್ನು ನಿಷ್ಕ್ರಿಯಗೊಳಿಸಲು ಅವಕಾಶವಿದೆ. ಖಾತೆಯನ್ನು ನಿಷ್ಕ್ರಿಯಗೊಳಿಸಿ, ಸಂಪೂರ್ಣ ಹಣವನ್ನು ಡ್ರಾ ಮಾಡಬಹುದಾಗಿದೆ. ಇನ್ನು ಮಹಿಳಾ ಸಮ್ಮಾನ್ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ತೆರೆಯುವುದು ಹೇಗೆ ಎಂಬುದನ್ನು ತಿಳಿಯಿರಿ.
ಮೊದಲು ಅಂಚೆ ಕಚೇರಿಗೆ ಭೇಟಿ ನೀಡಿ. ಬಳಿಕ ಖಾತೆ ತೆರೆಯುವ ಫಾರ್ಮ್ ಅನ್ನು ಪಡೆದು, ಅದರಲ್ಲಿ ಸಂಪೂರ್ಣ ವಿವರವನ್ನು ಭರ್ತಿ ಮಾಡಿ. ಇದನ್ನು ಅಲ್ಲಿರುವ ಸಿಬ್ಬಂದಿಗೆ ಸಲ್ಲಿಸಿ. ನಂತರ ಕೆವೈಸಿ ಡಾಕ್ಯುಮೆಂಟ್ ಅಂದರೆ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀಡಿ. ಹೊಸ ಖಾತೆದಾರರು ಕೆವೈಸಿ ಫಾರ್ಮ್ ಭರ್ತಿ ಮಾಡಿ. ಹತ್ತಿರದ ಅಂಚೆ ಕಛೇರಿಯಲ್ಲಿ ಠೇವಣಿ ಮೊತ್ತ/ಚೆಕ್ ಜೊತೆಗೆ ಪೇ-ಇನ್-ಸ್ಲಿಪ್ ಪಡೆಯಿರಿ.