ಬೆಂಗಳೂರು, ಮಾ. 08 : ರೈತರ ಜಮೀನು ನೆರೆಹೊರೆಯವರಿಂದ ಒತ್ತುವರಿಯಾಗುತ್ತಿರುತ್ತದೆ. ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಜಮೀನು ಒತ್ತುವರಿಯಾಗಿರುವ ಅನುಮಾನವೇನಾದರೂ ಬಂದರೆ ಹದ್ದು ಬಸ್ತು ಮಾಡಿಸಬಹುದು. ಇದಕ್ಕಾಗಿ ಅರ್ಜಿಯನ್ನು ಕೂಡ ಸಲ್ಲಿಸಬೇಕಾಗುತ್ತದೆ. ಜಮೀನು ಒತ್ತುವರಿಯಾಗಿದೆ ಎಂದು ಹದ್ದುಬಸ್ತು ಮಾಡಿಸುವಾಗ ಪಕ್ಕದ ಜಮೀನುದಾರರಿಗೆ ನೋಟೀಸ್ ಅನ್ನು ನೀಡಬೇಕು. ಇಲ್ಲದಿದ್ದರೆ, ಸಮಸ್ಯೆ ಎದುರಾಗುತ್ತದೆ.
ಪಕ್ಕದ ಜಮೀನುದಾರರಿಗೆ ನೋಟಿಸ್ ಕೊಟ್ಟು ಬಳಿಕಷ್ಟೇ ಹದ್ದುಬಸ್ತು ಮಾಡಿಸಬೇಕಾಗುತ್ತದೆ. ಒಂದು ವೇಳೆ ಪಕ್ಕದ ಜಮೀನುದಾರರು ನೋಟಿಸ್ ಅನ್ನು ಪಡೆದುಕೊಂಡು ಹದ್ದುಬಸ್ತಿಗೆ ಬಾರದೇ ಹೋದರೆ ತಪ್ಪಾಗುತ್ತದೆ. ಮೊದಲು ಅರ್ಜಿದಾರ ಜಮೀನು ಹದ್ದುಬಸ್ತಿಗೆ ಅರ್ಜಿಯನ್ನು ಸಲ್ಲಿಸಬೇಕು. ಜಮೀನು ಹದ್ದುಬಸ್ತಿನ ಪ್ರಕ್ರಿಯೆ ಹೇಗೆ ನಡೆಯುತ್ತದೆ..? ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ..? ಹದ್ದುಬಸ್ತಿನ ನೋಟಿಸ್ ಅನ್ನು ಪಕ್ಕದ ಜಮೀನುದಾರರು ಪಡೆಯದಿದ್ದರೆ ಏನಾಗುತ್ತೆ..? ಪಕ್ಕದ ಜಮೀನುದಾರರು ಹದ್ದು ಬಸ್ತಿಗೆ ಬಾರದಿದ್ದರೆ ಏನಾಗಬಹುದು ಎಂದು ನೋಡೋಣ ಬನ್ನಿ..
ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದೆ ಎಂದರೆ, ಅಳತೆ ಮಾಡಿಸಲು ಅರ್ಜಿಯನ್ನು ಸಲ್ಲಿಸಬೇಕು. ಈ ಪ್ರಕ್ರಿಯೆಗೆ ಹದ್ದುಬಸ್ತು ಎಂದು ಹೇಳುತ್ತಾರೆ. ಮೊದಲು ಜಮೀನುದಾರರು ಹದ್ದುಬಸ್ತಿಗೆ ಅರ್ಜಿಯನ್ನು ಸಲ್ಲಿಸಿದರೆ ಭೂ ಮಾಪಕರು ರೈತರ ಜಮೀನಿಗೆ ಬರುತ್ತಾರೆ. ಬಳಿಕ ಸರ್ವೆ ದಾಖಲೆಗಳ ಆಧಾರದ ಮೇಲೆ ಭೂ ಮಾಪಕರು ಜಮೀನಿನ ಅಳತೆ ಕಾರ್ಯವನ್ನು ಮಾಡುತ್ತಾರೆ. ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಮಾಡಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.
ಇನ್ನು ಹದ್ದು ಬಸ್ತಿಗೆ ಅರ್ಜಿಯನ್ನು ಸಲ್ಲಿಸಲು ರೈತ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಹಣಿಯನ್ನು ಕೂಡ ಇಟ್ಟಿರಬೇಕು. ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ನೀಡಬೇಕು. ಹತ್ತಿರದ ನಾಡಕಚೇರಿ ಇಲ್ಲವೇ ತಾಲೂಕು ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿದ ಬಳಿಕ ಭೂ ಮಾಪಕರು ರೈತರ ಜಮೀನಿನ ಅಳತೆ ಮಾಡಿ ಒತ್ತುವರಿ ಎಷ್ಟಾಗಿದೆ ಎಂಬ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ.
ಜಮೀನು ಅಳತೆ ಮಾಡಲು ಭೂ ಮಾಪಕರು ಪಕ್ಕದ ಜಮೀನುದಾರರಿಗೆ ನೋಟಿಸ್ ನೀಡುತ್ತಾರೆ. ಜಮೀನು ಅಳತೆ ಮಾಡುವಾಗ ಪಕ್ಕದ ಜಮೀನುದಾರರು ಬರಬೇಕು. ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. ನೋಟಿಸ್ ಪಡೆದು ಬರದಿದ್ದರೆ, ತಪ್ಪು ಅವರದ್ದೇ ಆಗುತ್ತದೆ. ಇನ್ನು ಒತ್ತುವರಿಯಾದ ಜಾಗವನ್ನು ಭೂ ಸರ್ವೇಯರ್ ಬಿಡಿಸಿಕೊಡಲು ಆಗುವುದಿಲ್ಲ. ಅದಕ್ಕಾಗಿ ಪಕ್ಕದ ಜಮೀನಿನ ಸರ್ವೇ ಅನ್ನು ಮಾಡುವುದಿಲ್ಲ. ಇನ್ನು ಅಳತೆ ಸರಿಯಿಲ್ಲ ಎಂದು ಅರ್ಜಿದಾರ ತಿಳಿದರೆ, ಎಡಿಎಲ್ ಆರ್ ಗೆ ಅಪೀಲು ಮಾಡಬಹುದು. ಇಲ್ಲವೇ ಡಿಡಿಎಲ್ ಆರ್ ಗೂ ಕೂಡ ಅಪೀಲ್ ಸಲ್ಲಿಸಬಹುದು.
ಪಕ್ಕದ ಜಮೀನುದಾರರು ಜಾಗ ಬಿಟ್ಟುಕೊಡಲು ಒಪ್ಪದಿದ್ದರೆ, ಜಮೀನುದಾರರು ಕೋರ್ಟ್ ನಲ್ಲೂ ಕೇಸ್ ಹಾಕಿಕೊಳ್ಳಬಹುದು. ಇನ್ನು ಕೋರ್ಟ್ ಹೋದ ಮೇಲೆ ಪ್ರಕರಣಗಳು ಬೇಗ ಇತ್ಯರ್ಥ ಆಗುವುದೇ ಕಷ್ಟ. ಹಾಗಾಗಿ ಪಕ್ಕದ ಜಮೀನುದಾರರ ಮನವೊಲಿಸಿ, ಒತ್ತುವರಿ ಜಾಗವನ್ನು ಬಿಡಿಸಿಕೊಳ್ಳುವುದು ಸೂಕ್ತ. ಇಲ್ಲವೇ ಕೋರ್ಟ್ ನಲ್ಲಿಯೇ ಸಮಸ್ಯೆ ಅನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ.