22 C
Bengaluru
Sunday, December 22, 2024

ಬಾಡಿಗೆಯಿಂದ ಬರುವ ಆದಾಯ ಎಷ್ಟು ಲಾಭದಾಯಕ?

ನಿವೃತ್ತಿ ಯೋಜನೆಯ ಭಾಗವಾಗಿ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಸಹಜ. ದೀರ್ಘಾವಧಿಯ ವಸತಿ ಸ್ವತ್ತುಗಳು ಖಂಡಿತವಾಗಿಯೂ ಹಣದುಬ್ಬರ ನಿರೋಧಕ ಮತ್ತು ಬಾಡಿಗೆ ರೂಪದಲ್ಲಿ ನಿಯಮಿತ ಆದಾಯ ತಂದುಕೊಡುವ ಉತ್ತಮ ಯೋಜನೆಯೂ ಹೌದು. ಈಕ್ವಿಟಿಗಳಲ್ಲಿನ ಹೂಡಿಕೆಗೆ ಹೋಲಿಸಿದರೆ ಸಂಪತ್ತನ್ನು ವೃದ್ಧಿಸಲು ಸುಲಭವಾದ ಮತ್ತು ಲಾಭದಾಯಕ ಮಾರ್ಗವೆಂದು ಇದನ್ನು ಪರಿಗಣಿಸಲಾಗಿದೆ.

ಜನರು ಮತ್ತೆ ಕೆಲಸಕ್ಕೆ ಮರಳುತ್ತಿರುವುದರಿಂದಾಗಿ ನಗರ ಪ್ರದೇಶಗಳಲ್ಲಿ ವಸತಿ ಬೇಡಿಕೆಗಳು ಹೆಚ್ಚುತ್ತಿವೆ ಮತ್ತು ಬಾಡಿಗೆಗಳು ಗಗನಕ್ಕೇರುತ್ತಿವೆ. ಆದರೆ, ಪ್ರತಿ ಮನೆಯೂ ಅತ್ಯುತ್ತಮ ಬಾಡಿಗೆ ಮೌಲ್ಯವನ್ನು ನೀಡುತ್ತದೆ ಎನ್ನಲಾಗದು. ನೆರೆಹೊರೆ ಪರಿಸರ, ವಸತಿ ಸಮುಚ್ಚಯ ಮತ್ತು ಸ್ಥಳೀಯವಾಗಿ ಲಭ್ಯವಾಗಬಲ್ಲ ಸೌಕರ್ಯಗಳು ಬಾಡಿಗೆಯ ಮೇಲೆ ಭಾರಿ ಪ್ರಭಾವ ಬೀರುತ್ತವೆ.

ಬೆಂಗಳೂರಿನ ಹಳೆಯ ಪ್ರದೇಶದಲ್ಲಿ ಇರುವುದು ಹಾಗೂ ಐಟಿ ಕಚೇರಿಗಳಿಗೆ ಸಮೀಪ ಇಲ್ಲದಿರುವ ಕಾರಣ ಒಂದೊಳ್ಳೆಯ ಇಂಡಿಪೆಂಡೆಂಟ್‌ ಮನೆಯನ್ನು ನೌಕರಿಯಲ್ಲಿರುವವರಿಗೆ ಬಾಡಿಗೆಗೆ ಕೊಡಲಾಗದೆ ವರ್ಷಗಟ್ಟಲೆ ಖಾಲಿ ಉಳಿಯುತ್ತದೆ. ಬಾಡಿಗೆದಾರರು ಜಿಮ್‌, ಮಕ್ಕಳಿಗೆ ಆಟದ ಸೌಕರ್ಯ, ಎಲ್ಲಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಮಟ್ಟದ ಜೀವನ ಸಾಗಿಸಲು ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಅವರು ಚಿಕ್ಕಪುಟ್ಟ ಸಮಸ್ಯೆಗಳಿಗೆಲ್ಲ ಸ್ಥಳೀಯ ಅಧಿಕಾರಿಗಳ ಬೆನ್ನು ಹತ್ತುವುದನ್ನು ಇಷ್ಟಪಡುವುದಿಲ್ಲ.

ಸಕಲ ಸೌಕರ್ಯ-ಭದ್ರತೆ ಇರುವ ಕೇಂದ್ರ ಸ್ಥಳದಲ್ಲಿ ಮನೆ ಹೊಂದಿದ್ದರೆ ಬಾಡಿಗೆ ರೂಪದಲ್ಲಿ ಒಳ್ಳೆಯ ಆದಾಯನ್ನು ಗಳಿಸಬಹುದು. ಆದರೆ ವಿಶ್ವಾಸಾರ್ಹ ಬಾಡಿಗೆದಾರರನ್ನು ಹುಡುಕುವುದು ಸವಾಲು. ಸರಿಯಾಗಿ ಬಾಡಿಗೆ ಪಾವತಿಸದೇ, ಮನೆ ಖಾಲಿ ಮಾಡಲು ಹೇಳಿದರೆ ಶೋಷಣೆಯ ದೂರು ನೀಡುವ ಸಾಕಷ್ಟು ಪ್ರಕರಣಗಳು ಇವೆ. ಅದೂ ಅಲ್ಲದೆ ಬಾಡಿಗೆದಾರರು ಮನೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ರಿಪೇರಿ ಮತ್ತು ಸೋರಿಕೆಯಂತಹ ಸಮಸ್ಯೆಗಳು ವೆಚ್ಚದ ಹೊರತಾಗಿಯೂ ಸಮಯ ಮತ್ತು ಶ್ರಮವನ್ನು ಬೇಡುವ ಗಂಭೀರ ತಲೆನೋವುಗಳು. ಆದ್ದರಿಂದ ಬಾಡಿಗೆಯಿಂದ ಆದಾಯ ಬಯಸುವವರು ಅದರಿಂದ ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳನ್ನೂ ನಿಭಾಯಿಸುವ ತಾಳ್ಮೆ ಹೊಂದಿದ್ದೇವೆಯೇ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡುವುದು ಜಾಣತನ.

ಹಣಕಾಸು ದೃಷ್ಟಿಯಿಂದ, ಆಸ್ತಿಯ ಮೌಲ್ಯದ ಶೇ 2-3ರಷ್ಟು ಸಿಗಬಹುದಾದ ವಾರ್ಷಿಕ ಬಾಡಿಗೆ ಆದಾಯವೇನೂ ಅಂಥ ಆಕರ್ಷಕವಲ್ಲ. ಆಸ್ತಿ ಮೌಲ್ಯ ಹೆಚ್ಚಳವಾಗುತ್ತದೆ ಎಂದುಕೊಂಡರೂ ಹೂಡಿಕೆದಾರರು ವಾರ್ಷಿಕ ಒಟ್ಟಾರೆ ಶೇ 7-8ರಷ್ಟು ಆದಾಯ ನಿರೀಕ್ಷಿಸಬಹುದು. ಬಾಡಿಗೆಯ ಒಟ್ಟು ಮೌಲ್ಯವು ಒಂದು ದೊಡ್ಡ ಮೊತ್ತ ಆಗಿರುವುದರಿಂದ ತಾವು ಒಂದೊಳ್ಳೆಯ ಆದಾಯವನ್ನು ಗಳಿಸುತ್ತಿದ್ದೇವೆ ಎಂದು ಹೂಡಿಕೆದಾರರು ಗ್ರಹಿಸುತ್ತಾರೆ. ಆದರೆ ಹಾಗಾಗುವುದಿಲ್ಲ. ನಿರ್ವಹಣೆ ಮತ್ತು ರಿಪೇರಿ ಕಾರ್ಯವು ಒಟ್ಟು ಆದಾಯದ ಶೇ 0.5-1 ರಷ್ಟನ್ನು ನುಂಗಿಹಾಕುತ್ತದೆ.

ನಿಯಮಿತ ಆದಾಯದ ಖಾತ್ರಿಯ ಕಾರಣ ಹೂಡಿಕೆದಾರರು ಬಾಡಿಗೆ ಆದಾಯವನ್ನು ಪರಿಗಣಿಸುತ್ತಾರೆ. ಮಾಸಿಕ ಆದಾಯವೇ ಮುಖ್ಯ ಎಂದಾದರೆ, ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟರೂ ಆಸ್ತಿ ಮೇಲಿನ ಹೂಡಿಕೆಗಿಂತ ಹೆಚ್ಚಿನ ಲಿಕ್ವಿಡಿಟಿಯೊಂದಿಗೆ ವಾರ್ಷಿಕ ಶೇ 4-5ರಷ್ಟು ಲಾಭ ತಂದುಕೊಡುತ್ತದೆ.

ಆಸ್ತಿ ನಿರ್ವಹಣೆಯ ಜಂಜಾಟಗಳಿಂದ ಮುಕ್ತರಾಗಿರಬೇಕು ಎಂಬ ಹೂಡಿಕೆದಾರರು ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (ಆರ್‌ಇಐಟಿ) ನಲ್ಲಿ ಕೂಡ ಹೂಡಿಕೆ ಮಾಡಬಹುದು. ಇದು ತೆರಿಗೆ ಪೂರ್ವ ಶೇ 5.5ರಷ್ಟು ಆದಾಯ ಕೊಡುತ್ತದೆ.

Related News

spot_img

Revenue Alerts

spot_img

News

spot_img