ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಶೇ. 80 ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ಮನೆ ಬಾಡಿಗೆ ಪಡೆದರೂ ಕೇವಲ 50 ರೂ. ಅಥವಾ 100 ರೂ. ಮೊತ್ತದ ಇ ಸ್ಟಾಂಪ್ ಪೇಪರ್ ನಲ್ಲಿ ಬಾಡಿಗೆ ಕರಾರು ಪತ್ರ ಮಾಡಿಸುವುದು ಸರ್ವೆ ಸಾಮಾನ್ಯವಾಗಿದೆ. ವಾಸ್ತವದಲ್ಲಿ ಬಾಡಿಗೆ ಮೊತ್ತ ಮತ್ತು ಮುಂಗಡ ಹಣಕ್ಕೆ ಅನುಗುಣವಾಗಿ ಮುದ್ರಾಂಕ ಶುಲ್ಕ ಪಡೆಯಬೇಕು. ಇಲ್ಲದಿದ್ದರೆ ಅಂತಹ ಬಾಡಿಗೆ ಕರಾರು ಪತ್ರ ತಕರಾರಿಗೆ ಒಳಪಟ್ಟರೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗುತ್ತದೆ.
ಹನ್ನೊಂದು ತಿಂಗಳ ಬಾಡಿಗೆ ಕರಾರು ಪತ್ರಕ್ಕೆ ಎಷ್ಟು ಮೊತ್ತದ ಮುದ್ರಾಂಕ ಶುಲ್ಕ ಪಾವತಿಸಬೇಕು. ಇ- ಸ್ಟಾಂಪ್ ಪೇಪರ್ ನಲ್ಲಿ ಬಾಡಿಗೆ ಕರಾರು ಮಾಡಿಸುವುದು ಸರಿಯೇ ? ಇ- ಸ್ಟಾಂಪ್ ಪೇಪರ್ ಖರೀದಿ ಯಾರು ಮಾಡಬೇಕು ಎಂಬ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.
ಯಾವುದೇ ಒಂದು ಮನೆಯನ್ನು ಬಾಡಿಗೆಗೆ ಪಡೆದಾಗ, ಮುಂಗಡ ಹಣ ಪಾವತಿ ಮಾಡಿ ಹನ್ನೊಂದು ತಿಂಗಳ ಅವದಿಗೆ ಬಾಡಿಗೆ ಕರಾರು ಮಾಡಿಸಲಾಗುತ್ತದೆ. ಐದು ಸಾವಿರ ರೂ. ಮಾಸಿಕ ಬಾಡಿಗೆ ಇರಲಿ, 30 ಸಾವಿರ ಬಾಡಿಗೆ ಇರಲಿ ಕೇವಲ 100 ರೂ. ಮೊತ್ತದ ಇ- ಸ್ಟಾಂಪ್ ಪೇಪರ್ ನಲ್ಲಿ ಬಾಡಿಗೆ ಕರಾರು ಪತ್ರವನ್ನು ಮಾಡಿಸಿಕೊಳ್ಳುತ್ತಾರೆ.
ಬಾಡಿಗೆ ಕರಾರುದಾರರ ನಡುವೆ ಯಾವುದೇ ತಕರಾರು ಉದ್ಭವಿಸದಿದ್ದರೆ ಅದನ್ನು ಯಾರೂ ಕೇಳುವುದಿಲ್ಲ. ಇ ಸ್ಟಾಂಪ್ ಪೇಪರ್ ಶುಲ್ಕದ ಸಮಸ್ಯೆಯೇ ಉದ್ಭವಿಸುವುದಿಲ್ಲ. ಆದರೆ, ಒಂದು ವೇಳೆ ವಿವಾದ ಉದ್ಭವಿಸಿ ಕೋರ್ಟ್ ಮೆಟ್ಟಿಲೇರಿದರೆ ಬಾಡಿಗೆ ಕರಾರು ಪತ್ರದ ಇ ಸ್ಟಾಂಪ್ ಪೇಪರ್ ಮೊತ್ತವೂ ಸಹ ಮಹತ್ವ ಪಡೆದುಕೊಳ್ಳುತ್ತದೆ.
ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಆರ್ಟಿಕಲ್ 30 (1) ರ ಅನ್ವಯ ಬಾಡಿಗೆ ಅವದಿ ಒಂದು ವರ್ಷದ ಒಳಗಿನ ಅವಧಿಗೆ ಇದ್ದರೆ ಸರಾಸರಿ ವಾರ್ಷಿಕ ಬಾಡಿಗೆ ಮತ್ತು ಮುಂಗಡ ಹಣ ಒಟ್ಟು ಗೂಡಿಸಿ ಅದರ ಮೇಲೆ ಶೇ 0.5, ಗರಿಷ್ಠ 500 ರೂ.ಗಳ ಮೊತ್ತದ ಮುದ್ರಾಂಕ ( ಇ ಸ್ಟಾಂಪ್ ಅಥವಾ ಮುದ್ರಾಂಕ ಶುಲ್ಕ) ಶುಲ್ಕ ಪಾವತಿಸಬೇಕು.
ಆರ್ಟಿಕಲ್ 30 (2) ರ ಅನ್ವಯ ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಶೇ. 0.5 ವಾರ್ಷಿಕ ಸರಾಸರಿ ಬಾಡಿಗೆ ಮತ್ತು ಮುಂಗಡ ಹಣದ ಮೊತ್ತದ ಮೇಲೆ ಪಾವತಿಸಬೇಕು.
ಆರ್ಟಿಕಲ್ 30(3) ರ ಅನ್ವಯ ಒಂದು ವರ್ಷಕ್ಕಿಂತ ಜಾಸ್ತಿ ಮತ್ತು ಹತ್ತು ವರ್ಷಕ್ಕಿಂತಲೂ ಕಡಿಮೆ ಅವದಿಯ ಬಾಡಿಗೆ ಕರಾರುಗಳಿಗೆ ಶೇ. 1 ರಷ್ಟು , ವಾರ್ಷಿಕ ಸರಾಸರಿ ಬಾಡಿಗೆ ಮತ್ತು ಮುಂಗಡ ಹಣ ಸೇರಿಸಿ ಪಾವತಿಸಬೇಕಾಗುತ್ತದೆ.
ಆರ್ಟಿಕಲ್ 30 (4) ರ ಅನ್ವಯ, ಹತ್ತು ವರ್ಷದಿಂದ ಮೇಲ್ಪಟ್ಟು, ಇಪ್ಪತ್ತು ವರ್ಷ ಅವಧಿಯ ಒಳಗೆ ಬಾಡಿಗೆ ಕರಾರು ಇದ್ದಲ್ಲಿ, ಬಾಡಿಗೆ ಮೊತ್ತ ಹಾಗೂ ಮುಂಗಡ ಹಣದ ಮೇಲಿನ ಶೇ. 2 ರಷ್ಟು ಮುದ್ರಾಂಕ ಶುಲ್ಕ ಪಾವತಿಸಬೇಕು.
ಆರ್ಟಿಕಲ್ 30 (5) ರ ಅನ್ವಯ , 20 ವರ್ಷದಿಂದ ಮೇಲ್ಪಟ್ಟು ,30 ವರ್ಷ ದೊಳಗಿನ ಅವಧಿಯ ಬಾಡಿಗೆ ಕರಾರು ಇದ್ದಲ್ಲಿ, ಬಾಡಿಗೆ ಮೊತ್ತ ಹಾಗೂ ಮುಂಗಡ ಹಣದ ಮೇಲಿನ ಶೇ. 3 ರಷ್ಟು ಮುದ್ರಾಂಕ ಶುಲ್ಕ ಪಾವತಿಸಬೇಕು.
ಆರ್ಟಿಕಲ್ 30 (6) ರ ಅನ್ವಯ, 30 ವರ್ಷದ ನಂತರ ಬಾಡಿಗೆ ಕರಾರು ಅವದಿ ಇದ್ದಲ್ಲಿ, ಕ್ರಯ ಪತ್ರದಂತೆ ಅಂದರೆ,ಶೇ. 5. 65, ( ಗ್ರಾಮ ಪಂಚಾಯಿತಿ ಸ್ವತ್ತುಗಳಿಗೆ) ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊರತು ಪಡಿಸಿದ ಸ್ವತ್ತುಗಳಿಗೆ ಶೇ. 5. 6 ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು. ಆಗ ಮಾತ್ರ ಅಂತಹ ಬಾಡಿಗೆ ಕರಾರು ಪತ್ರಗಳಿಗೆ ಮಾನ್ಯತೆ ಇರುತ್ತದೆ ಎಂದು ಕರ್ನಾಟಕ ಮುದ್ರಾಂಕ ಕಾಯ್ದೆ ಹೇಳುತ್ತದೆ.
ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಹನ್ನೊಂದು ತಿಂಗಳ ಅವಧಿಯ ಗೃಹ ವಾಸ ಮನೆಯ ಬಾಡಿಗೆ ಕರಾರು ಪತ್ರಕ್ಕೆ ಗರಿಷ್ಠ 500 ರೂ. ಮೊತ್ತದ ಇಸ್ಟಾಂಪ್ ಪೇಪರ್ ಬಳಸುವುದು ಕಾನೂನು ದೃಷ್ಟಿಯಿಂದ ಒಳಿತು. ಹನ್ನೆರಡು ತಿಂಗಳ ಹೆಚ್ಚಿನ ಅವಧಿಯ ಬಾಡಿಗೆ ಕರಾರು ಪತ್ರಗಳಿಗೆ ಬಾಡಿಗೆ ಮೊತ್ತ, ಮುಂಗಡ ಹಣ ಸೇರಿಸಿ ಮೇಲಿನ ನಿಯಮದಂತೆ ಮುದ್ರಾಂಕ ಶುಲ್ಕ ಲೆಕ್ಕಾಚಾರ ಹಾಕಿ ಪಾವತಿಸಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಒಂದು ವರ್ಷಕ್ಕೂ ಹೆಚ್ಚಿನ ಅವದಿಯ ಬಾಡಿಗೆ ಕರಾರು ಪತ್ರಗಳನ್ನು ಕೇವಲ 100 ರೂ. 200 ರೂ. ಬೆಲೆಯ ಇ ಸ್ಟಾಂಪ್ ನಲ್ಲಿ ಮಾಡಿಸಿದಲ್ಲಿ, ಬಾಡಿಗೆ ಕರಾರು ತಕರಾರಿಗೆ ಒಳಪಟ್ಟ ಸಂದರ್ಭದಲ್ಲಿ ನ್ಯಾಯಾಲಯವು ಇಂತಹ ಕರಾರು ಪತ್ರಗಳನ್ನು ಮಾನ್ಯ ಮಾಡದ ಸಂದರ್ಭಗಳು ಎದುರಾಗುತ್ತವೆ. ಜತೆಗೆ ಮುದ್ರಾಂಕ ಶುಲ್ಕದ ಹತ್ತು ಪಟ್ಟು ದಂಡವನ್ನು ಪಾವತಿಸಬೇಕಾದೀತು.
ಕನಿಷ್ಠ 10 ಸಾವಿರ ರೂ. ಮೇಲ್ಪಟ್ಟು ಮಾಸಿಕ ಬಾಡಿಗೆ ಪಾವತಿ ಮಾಡುತ್ತಿದ್ದರೆ, ಶೇ. 0.5 ರಷ್ಟು ಮುದ್ರಾಂಕ ಶುಲ್ಕ ಗರಿಷ್ಠ 500 ರೂ. ಯಾವುದಾದರೂ ಒಂದು ಮೊತ್ತ ಪಾವತಿಸಿ ಬಾಡಿಗೆ ಕರಾರು ಮಾಡಿಸಿಕೊಂಡಿದ್ದಲ್ಲಿ, ಈ ಕರಾರು ತರಕಾರಿಗೆ ಒಳಪಟ್ಟರೂ ಇ ಬಾಡಿಗೆ ಕರಾರು ಪತ್ರವನ್ನು ನ್ಯಾಯಾಲಯ ಮಾನ್ಯ ಮಾಡುತ್ತದೆ.