22.9 C
Bengaluru
Friday, July 5, 2024

ನೋಯ್ಡಾದಲ್ಲಿ ಅವಳಿ ಕಟ್ಟಡಗಳು ಉರುಳಿ ಬಿದ್ದಿದ್ದು ಹೇಗೆ? ಸಿದ್ಧತೆ ಹೇಗಿತ್ತು?

ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಲಾಗಿರುವ ಕಾರಣಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸೂಪರ್‌ ಟೆಕ್‌ ಅಪೆಕ್ಸ್‌ ಹಾಗೂ ಸಿಯಾನ್‌ ಎಂಬ ಅವಳಿ ಕಟ್ಟಡಗಳನ್ನು ಆಗಸ್ಟ್‌ 28ರಂದು ಸ್ಫೋಟಕಗಳನ್ನು ಬಳಸಿ ಉರುಳಿಸಲಾಗಿದೆ. 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಅವಳಿ ಕಟ್ಟಡಗಳ ಉರುಳಿಸುವಿಕೆಗೆ ಮುಂಬೈಯ ಎಡಿಫೈಸ್‌ ಕಂಪೆನಿ ಹಾಗೂ ದಕ್ಷಿಣ ಆಫ್ರಿಕಾದ ಜೆಟ್‌ ಡೆಮಾಲಿಷನ್‌ ಸಂಸ್ಥೆಗಳು 3,700 ಕೆ.ಜಿ ಸ್ಫೋಟಕಗಳನ್ನು ಬಳಸಿತ್ತು. ಆರಂಭದಲ್ಲಿ ಆಗಸ್ಟ್‌ 21ರಂದು ಸ್ಫೋಟಕ್ಕೆ ದಿನ ನಿಗದಿ ಮಾಡಲಾಗಿತ್ತು. ಆದರೆ ನಂತರ ಅದರ ತಯಾರಿ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಾರ್ಯಾಚರಣೆಯನ್ನು ಒಂದು ವಾರಕ್ಕೆ ಮುಂದೂಡಲಾಯಿತು.

ಕನಿಷ್ಠ ಅಂತರ ಅಗತ್ಯತೆಯನ್ನು ಉಲ್ಲಂಘಿಸಿ ಫ್ಲ್ಯಾಟ್‌ ಮಾಲೀಕರ ಒಪ್ಪಿಗೆ ಇಲ್ಲದೇ ಕಟ್ಟಡ ನಿರ್ಮಿಸಿದ್ದಕ್ಕೆ ಸುಪ್ರೀಂಕೋರ್ಟ್‌ ಕಳೆದ ವರ್ಷ ಕಟ್ಟಡ ಧ್ವಂಸಕ್ಕೆ ಆದೇಶ ನೀಡಿತ್ತು. ಈ ಅವಳಿ ಕಟ್ಟಡಗಳ ಉರುಳಿಸುವಿಕೆ ಸಂಗತಿಯು ಮಾಧ್ಯಮಗಳ ಮೂಲಕ ಭಾರಿ ವೈರಲ್‌ ಆಗಿತ್ತು. ಆಗಸ್ಟ್‌ 28ರಂದು ಉರುಳಿಸುವಿಕೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಅದರ ಕುರಿತಾದ ಸಾವಿರಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಕೇವಲ 9 ಸೆಕೆಂಡ್‌ಗಳಲ್ಲಿ 40 ಮಹಡಿಯ ಎರಡು ಕಟ್ಟಡಗಳು ನೆಲಸಮವಾಗಿ, 54 ಸಾವಿರ ಟನ್‌ಗಳಷ್ಟು ಕಟ್ಟಡದ ಭಗ್ನಾವಶೇಷಗಳ ರಾಶಿ ಒಟ್ಟುಗೂಡಿತ್ತು. ಒಂದು ವೇಳೆ ಯಂತ್ರಗಳ ಸಹಾಯದಿಂದ ಈ ಕಟ್ಟಡವನ್ನು ಒಡೆದು ಹಾಕಲು ಸುಮಾರು 3 ತಿಂಗಳು ಕಾಲ ಬೇಕಾಗಿತ್ತು.

ಕಟ್ಟಡದ ಕೆಡಹುವಿಕೆ ಹೇಗಿತ್ತು?
ಅಗತ್ಯ ಪ್ರಮಾಣದ ಸ್ಫೋಟಕಗಳು ಹಾಗೂ ಪ್ರಾಥಮಿಕ, ಮಾಧ್ಯಮಿಕ ಹಂತದ ಸ್ಫೋಟಕ್ಕಾಗಿ ಮಹಡಿಗಳ ಆಯ್ಕೆಯಂತಹ ತೀರ್ಮಾನಗಳನ್ನು ಅನುಮೋದಿಸಲು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ಸಿಬಿಆರ್‌ಐ ನೇಮಿಸಿತ್ತು.

ಧ್ವಂಸವನ್ನು ಇಂಪ್ಲೋಜನ್‌ ತಂತ್ರಜ್ಞಾನದ ಮೂಲಕ ನಡೆಸಲಾಯಿತು. ಸಾಮಾನ್ಯವಾಗಿ ಸ್ಫೋಟ ಸಂದರ್ಭದಲ್ಲಿ ಹೊರಗೆ ವಸ್ತುಗಳು ಎಸೆಯಲ್ಪಡುತ್ತವೆ. ಆದರೆ ಈ ತಂತ್ರಜ್ಞಾನದಲ್ಲಿ ಒಳಮುಖವಾಗಿ ಸ್ಫೋಟವಾಗುತ್ತವೆ.

ಸೂಪರ್‌ಟೆಕ್‌ ಅವಳಿ ಕಟ್ಟಡದ ನೆಲಮಹಡಿಯಿಂದ ಕೊನೆ ಮಹಡಿಯ ತನಕ 10 ಸಾವಿರ ರಂಧ್ರಗಳನ್ನು ಕೊರೆದು 3500 ಕೆ.ಜಿ ಸ್ಫೋಟಕಗಳನ್ನು ಅದರಲ್ಲಿ ತುಂಬಲಾಗಿತ್ತು. ಸ್ಫೋಟದ ತೀವ್ರತೆಯನ್ನು ಕಡಿಮೆಯಾಗಿಸುವ ಸ್ಪೋಟಕಗಳನ್ನೇ ಅಧಿಕಾರಿಗಳು ಆಯ್ಕೆ ಮಾಡಿದ್ದರು. ಸ್ಫೋಟಕಗಳನ್ನು ಸ್ಥಳಕ್ಕೆ ಸಾಗಿಸುವಾಗ ಗೌತಮ್ ಬುದ್ಧ ನಗರ ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತೆ ಹಾಗೂ ಸುರಕ್ಷತೆಯನ್ನು ಒದಗಿಸಿದರು ಎಂದು ವಿವರಗಳು ತಿಳಿಸಿವೆ.

ಧ್ವಂಸಕ್ಕೂ ಮೊದಲು ತೆಗೆದುಕೊಂಡಿದ್ದ ಸುರಕ್ಷತಾ ಕ್ರಮಗಳೇನು?
ಸುತ್ತ ಮುತ್ತ ಪ್ರದೇಶಗಳಲ್ಲಿ ಅವಶೇಷ ಹರಡದಂತೆ ಈ ಅವಳಿ ಕಟ್ಟಡಗಳನ್ನು ಕಪ್ಪು ಹಾಗೂ ಬಿಳಿ ಜಿಯೋಟೆಕ್ಸ್‌ಟೈಲ್‌ ಫೈಬರ್‌ನಿಂದ ಸುತ್ತುವರಿದಿತ್ತು. ಸಮೀಪದ ಎಮೆರಾಲ್ಡ್‌ ಕೋರ್ಟ್‌ ಹಾಗೂ ಎಟಿಎಸ್‌ ವಿಲೇಜ್‌ ಸೊಸೈಟಿಯ 5000 ನಿವಾಸಿಗಳಿಗೆ ಮುಂಜಾನೆ 7.30ರ ಒಳಗಾಗಿ ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿತ್ತು. ಇವರಿಗೆ ಕಟ್ಟಡದ ಅವಶೇಷ ಸ್ವಚ್ಛಗೊಳಿಸಲು ತಲಾ ಮೂರು ಲಕ್ಷ ಪಾವತಿಸಲಾಗಿತ್ತು. ಜನ, ವಾಹನ, ಪ್ರಾಣಿಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸಲಾಗಿತ್ತು.

ಸಂಚಾರ ವ್ಯವಸ್ಥೆಗೆ ನಿರ್ಬಂಧ?
ಅವಳಿ ಕಟ್ಟಡಗಳಿದ್ದ ಮುಂದಿನ ಸುಭಾಷ್‌ ಚಂದ್ರ ಬೋಸ್‌ ರಸ್ತೆಯಲ್ಲಿ ಮಧ್ಯಾಹ್ನ 12ರಿಂದ 3ರವರೆಗೆ ಎಲ್ಲಾ ರೀತಿಯ ಓಡಾಟವನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದರು. ನೋಯ್ಡಾ – ಗ್ರೇಟರ್‌ ನೋಯ್ಡಾ ಎಕ್ಸ್‌ಪ್ರೆಸ್‌ವೇಯನ್ನು ಮಧ್ಯಾಹ್ನ 2.15ರಿಂದ 2.45ರವರೆಗೆ ಸಂಪೂರ್ಣ ನಿಷೇಧಿಸಲಾಗಿತ್ತು.

Related News

spot_img

Revenue Alerts

spot_img

News

spot_img