20 C
Bengaluru
Tuesday, July 9, 2024

ಎಲ್ಲರಿಗೂ ವಸತಿ: ಗುರಿ ಸಾಧನೆ ದೂರದ ಮಾತು: ಸಿಎಜಿ ವರದಿ ಶಾಕ್!

ನಗರ ಪ್ರದೇಶದ ಬಡವರನ್ನು ಗುರುತಿಸಿ ವಸತಿ ಕಲ್ಪಿಸಲು ಕೈಗೊಂಡ ಸಮೀಕ್ಷೆ ಪರಿಣಾಮಕಾರಿಯಾಗಿಲ್ಲ. ಪರಿಣಾಮವಾಗಿ 20.35 ಲಕ್ಷದ ಬದಲು 13.72 ಲಕ್ಷ ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದೆ. ನಿಗದಿತ ದಿನಾಂಕದೊಳಗೆ ಸಮೀಕ್ಷೆ ಪೂರ್ಣಗೊಂಡಿಲ್ಲ, ಅದರ ನಂತರವೇ ಶೇ 49ರಷ್ಟು ಫಲಾನುಭವಿಗಳನ್ನು ಸೇರಿಸಲಾಗಿದೆʼ ಎಂದು ಇತ್ತೀಚೆಗೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ.

2,472 ಯೋಜನೆಗಳ 5.17 ಲಕ್ಷ ಫಲಾನುಭವಿಗಳಲ್ಲಿ 3.43 ಲಕ್ಷ ಫಲಾನುಭವಿಗಳನ್ನು ಮಾತ್ರ ಅನುಮೋದಿತ ವಸತಿ ಪಾಲುದಾರಿಕೆ (ಎಎಚ್‌ಪಿ) ಮತ್ತು ಫಲಾನುಭವಿ ಪಾಲುದಾರಿಕೆಯಲ್ಲಿ ನಿರ್ಮಾಣ (ಬಿಎಲ್‌ಸಿ) ಯೋಜನೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಬಳಸಿಕೊಂಡು ಮೌಲ್ಯಮಾಪನ ಮಾಡುವಲ್ಲಿ ಉಂಟಾದ ಲೋಪದಿಂದ ಕೆಲವು ಫಲಾನುಭವಿಗಳು ಒಂದೇ/ವಿಭಿನ್ನ ಯೋಜನೆಗಳ ಅಡಿಯಲ್ಲಿ ಬಹು ಪ್ರಯೋಜನಗಳನ್ನು ಪಡೆದಿದ್ದಾರೆ.

ಎಎಚ್‌ಪಿ ಅಡಿಯಲ್ಲಿ ಶೇ 12ರಷ್ಟು ಫಲಾನುಭವಿಗಳಿಗೆ ಮಾತ್ರ ನಿಜವಾದ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ. ಅದೇ ಸಂದರ್ಭದಲ್ಲಿ ಶೇ 44ರಷ್ಟು ಫಲಾನುಭವಿಗಳು ಈವರೆಗೂ ಸಂಭಾವ್ಯ ಫಲಾನುಭವಿಗಳ ಪಟ್ಟಿಗೆ ಸೇರ್ಪಡೆಗೊಂಡಿಲ್ಲ. ಇದರಿಂದಾಗಿ ಅರ್ಹರಲ್ಲದವರಿಗೂ ಯೋಜನೆಯ ಲಾಭ ಸಿಗುವಂತಾಗಿದೆ. ನಿರ್ಮಾಣವಾದ ಮನೆಗಳ ಜಂಟಿ ಪರಿಶೀಲನೆಯ ವೇಳೆ, 30 ಚದರ ಮೀಟರ್‌ಗಿಂತ ಹೆಚ್ಚು ಕಾರ್ಪೆಟ್ ಏರಿಯಾದ ಬಹು ಮಹಡಿ ಕಟ್ಟಡಗಳಲ್ಲಿ ಶೇ 41ರಷ್ಟು ಮನೆಗಳಿಗೆ ನಿಗದಿತ 5 ಲಕ್ಷ (ಪ್ರತಿ ಮನೆಗೆ) ರೂಪಾಯಿ ಮಿತಿಗಿಂತ ಹೆಚ್ಚು ವೆಚ್ಚವಾಗಿದೆ ಎಂಬುದು ತಿಳಿದುಬಂದಿದೆ.

ರಾಜ್ಯ ಸರ್ಕಾರವು ನಿಗದಿತ ಷರತ್ತುಗಳನ್ನು ಪೂರೈಸದ ಮತ್ತು ಫಲಾನುಭವಿಗಳು ಭರಿಸಬೇಕಿದ್ದ 8,360.78 ಕೋಟಿ ರೂಪಾಯಿ ಪಾಲನ್ನು ಸಂಗ್ರಹಿಸಲು ವಿಫಲವಾದ ಕಾರಣ ಎಎಚ್‌ಪಿ ಯೋಜನೆಗೆ ಕೇಂದ್ರ ಸರ್ಕಾರ ನೀಡಬೇಕಿದ್ದ 1,003.55 ಕೋಟಿ ರೂಪಾಯಿ ನಿಧಿಯನ್ನು ತಡೆಹಿಡಿದಿದೆ. ಇದರಿಂದಾಗಿ ಯೋಜನೆಯು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಇದು ಪೂರ್ಣಗೊಂಡ ಮನೆಗಳಿಗೆ ನಾಗರಿಕ ಮೂಲಸೌಕರ್ಯಗಳ ಕೊರತೆ ಮತ್ತು ಎಎಚ್‌ಪಿ ಯೋಜನೆಗಳ ರದ್ದತಿಗೆ ಕಾರಣವಾಗಿದೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ಶೇ 14ರಷ್ಟು ಯೋಜನೆಗಳು ಮತ್ತು ಖಾಸಗಿಯಾಗಿ ಕೈಗೆತ್ತಿಕೊಂಡ ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಈ ಮನೆಗಳಿಗೆ ನೀರು, ಒಳಚರಂಡಿ, ರಸ್ತೆ, ವಿದ್ಯುತ್‌ ಮತ್ತಿತರ ಮೂಲಸೌಕರ್ಯಗಳಿಲ್ಲವಾಗಿವೆ.

ಬಿಎಲ್‌ಸಿ ಯೋಜನೆಯಲ್ಲಿ ಫಲಾನುಭವಿಗಳ ಗುರುತಿಸುವಿಕೆ ಕೊರತೆಯಿಂದಾಗಿ ಕೇಂದ್ರ ಸರ್ಕಾರವು 569.56 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿದಿದೆ. ನೇರ ನಗದು ವರ್ಗಾವಣೆ ಅಡಿ ಆಧಾರ್‌ ಕಾರ್ಡ್ ಆಧರಿಸಿ ಸರಿಯಾದ ಪ್ರಮಾಣೀಕರಣ ನಡೆಸದ ಕಾರಣ 12,757 ಫಲಾನುಭವಿಗಳಿಗೆ 172.64 ಕೋಟಿ ರೂಪಾಯಿ ಪಾವತಿ ಬಾಕಿ ಇದೆ ಮತ್ತು 111 ಪ್ರಕರಣಗಳಲ್ಲಿ 1.30 ಕೋಟಿ ರೂಪಾಯಿ ಮೊತ್ತದ ಡಬಲ್‌ ಪೇಮೆಂಟ್‌ ಆಗಿದ್ದನ್ನು ಲೆಕ್ಕಪರಿಶೋಧನೆ ವರದಿ ಬಹಿರಂಗಪಡಿಸಿದೆ. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಅಡಿ ಮೇಲ್ವಿಚಾರಣೆ ಲೋಪದ ಪರಿಣಾಮ 471 ಫಲಾನುಭವಿಗಳು ಬಿಎಲ್‌ಸಿ ಮತ್ತು ಎಎಚ್‌ಪಿ ಎರಡೂ ಯೋಜನೆಗಳಲ್ಲಿ ಲಾಭ ಪಡೆದಿದ್ದಾರೆ.

2021ರ ಮಾರ್ಚ್‌ ವರೆಗೆ, ಬಿಎಲ್‌ಸಿ ಮತ್ತು ಎಎಚ್‌ಪಿ ಯೋಜನೆಗಳಡಿ ಶೇ 38ರಷ್ಟು ಮನೆಗಳಿಗೆ (5,17,531 ಮನೆಗಳು) ಮಾತ್ರ ಅನುಮೋದನೆ ದೊರೆತಿದೆ. ಈ ಪೈಕಿ ಶೇ 17ರಷ್ಟು ಮಾತ್ರ ಪೂರ್ಣಗೊಂಡಿವೆ ಮತ್ತು ಶೇ 20ರಷ್ಟು ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಶೇ 63ರಷ್ಟು ಮನೆಗಳ ಕಾಮಗಾರಿ ಇನ್ನಷ್ಟೇ ಆರಂಭ ಆಗಬೇಕಿದೆ. ಆದ್ದರಿಂದ 2022ರ ವೇಳೆಗೆ ʻಎಲ್ಲರಿಗೂ ವಸತಿʼ ಎಂಬ ಘೋಷವಾಕ್ಯವನ್ನು ಸಾಧ್ಯವಾಗಿಸುವುದು ದೂರದ ಮಾತು ಎನ್ನುವಂತಾಗಿದೆ.

Related News

spot_img

Revenue Alerts

spot_img

News

spot_img