ಬೆಂಗಳೂರು, ಆ. 18 : ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳು ರಿಯಲ್ ಎಸ್ಟೇಟ್ ಉದ್ಯಮ ಕೈಗೆಟುಕದಂತಾಗಿದೆ. ವರ್ಷದಿಂದ ವರ್ಷಕ್ಕೆ ನಿವೇಶನಗಳ ಬೆಲೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬಾಡಿಗೆ ಮನೆಗಳ ಬೆಲೆ ಕೈಗೆಟುಕದ ರೀತಿಯಲ್ಲಿ ಬೆಳೆಯುತ್ತಿದೆ. ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮ ಹೆಚ್ಚಾಗುತ್ತಿದೆ. ನಿವೇಶನ, ಮನೆ ಹಾಗೂ ಫ್ಲಾಟ್ ಗಳನ್ನು ಖರೀದಿಸುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಫ್ಲಾಟ್ಗಳಿಗೂ ಬೇಡಿಕೆ ಹೆಚ್ಚಾಗಿದೆ.
ಹೀಗಿರುವಾಗ ಮನೆಯನ್ನು ಖರೀದಿಸುವ ಕನಸು ಕಂಡವರದ್ದು, ಕನಸಾಗಿಯೇ ಉಳಿಯುತ್ತದೆ. ಬ್ಯಾಂಕ್ ಗಳಲ್ಲಿ ಈಗ ನಿವೇಶನ ಖರೀದಿಗೆಲೋನ್ ಏನೋ ಸಿಗುತ್ತದೆ. ಆದರೆ, ನಿವೇಶನಗಳ ಬೆಲೆಯೇ ಅಧಿಕವಾಗಿರುವಾಗ ಬಹಳ ಕಷ್ಟ. ಆದರೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ನಿವೇಶನ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವಸತಿ ಬಡಾವಣೆ ನಿರ್ಮಾಣ ಯೋಜನೆಯನ್ನು ಆರಂಭಿಸಲಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬಡಾವಣೆ ನಿರ್ಮಾಣದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಕೈಗೆಟಕುವ ಬಡಾವಣೆಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಸುಸಜ್ಜಿತ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಕರ್ನಾಟಕ ರಾಜ್ಯದ ಹಾಸನ, ಬಳ್ಳಾರಿ, ಮಂಗಳೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಹಾಸನ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಸತಿ ಬಡಾವಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಖರೀದಿಸುವ ಆಸೆ ಇರುತ್ತದೆ. ಇವರ ಕನಸಿಗೆ ನಾವು ಆಸರೆಯಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಭರವಸೆಯನ್ನು ನೀಡಿದ್ದಾರೆ. ಏಳು ಜಿಲ್ಲೆಗಳಲ್ಲಿ ನಿರ್ಮಾಣವಾಗುತ್ತಿರುವ ಬಡಾವಣೆಗಳ ನಿವೇಶನಗಳು ಕಡಿಮೆ ದರದಲ್ಲಿ ಖರೀದಿಸುವ ಆಸೆ ಈಗ ಸಾರ್ವಜನಿಕರದ್ದಾಗಿದೆ.