21.5 C
Bengaluru
Monday, December 23, 2024

ಮನೆ ಸ್ವಚ್ಛ ಮಾಡುತ್ತೀರಾ?: ಅಲರ್ಜಿ ಇರುವವರು ಈ ಟಪ್ಸ್ ಓದಿ

ಕೊರೊನಾ ಸಾಂಕ್ರಾಮಿಕ ಕಾರಣದಿಂದ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದ ಸಮಯದಲ್ಲಿ ಬಹುತೇಕರು ‘ಮಾಸ್ಕ್‌ನಿಂದ ಧೂಳು, ಅಲರ್ಜಿಯಿಂದ ಮುಕ್ತಿ ಸಿಕ್ಕಿತು’ ಎಂಬ ಮಾತನ್ನು ಆಡುತ್ತಿದ್ದರು. ಈಗಲೂ ಧೂಳು ಅಥವಾ ಇತರ ಪದಾರ್ಥಗಳಿಂದ ಅಲರ್ಜಿ ಸಮಸ್ಯೆ ಇರುವವರು ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವುದನ್ನು ಮುಂದುವರಿಸಿದ್ದಾರೆ. ಈಗ ನವರಾತ್ರಿ ಹಬ್ಬದ ಸಮಯ. ಮನೆ, ಮನೆಯಂಗಳ, ಮನೆಯ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಧೂಳು ಹೊಡೆದು, ಬಣ್ಣ ಬಳಿಯುವ ಸಂಭ್ರಮ. ಆದರೆ ಈ ಧೂಳು, ಬಣ್ಣದ ಸಣ್ಣ ಸಣ್ಣ ಕಣಗಳಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ವಿಪರೀತ ಸೀನುವುದು, ಶೀತ, ನೆಗಡಿ ತಂದೊಡ್ಡುವ ಈ ಅಲರ್ಜಿ, ಕೆಲವೊಮ್ಮೆ, ಮೈಯಲ್ಲಿ ತುರಿಕೆ, ಜ್ವರಕ್ಕೂ ಕಾರಣವಾಗುತ್ತದೆ. ಸಣ್ಣ ಅಲರ್ಜಿ ಎಂದು ನಿರ್ಲಕ್ಷಿಸಿದರೆ ಜೀವಕ್ಕೂ ಅಪಾಯ ತರಬಹುದು.

ಸಾಮಾನ್ಯವಾಗಿ ಹಬ್ಬದಂತಹ ಖುಷಿಯ ಸಂದರ್ಭಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವಾಗ ಅಲರ್ಜಿ ಸಮಸ್ಯೆ ಇದ್ದರೂ ನಾವು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಅಲರ್ಜಿ ಸಮಸ್ಯೆ ಇರುವವರಿಗೆ ಧೂಳಿನ ನಡುವೆ ಕೆಲಸ ಮಾಡಲು ಆರಂಭಿಸಿದರೆ ದಿನವಿಡೀ ಸೀನುವುದು, ಸೈನಸ್‌ನಂತಹ ಆರೋಗ್ಯ ಕಾಯಿಲೆಗಳು ಕಾಡಲು ಆರಂಭವಾಗುತ್ತವೆ. ಹಾಗೇ ಉಬ್ಬಸ, ಅಸ್ತಮಾದಂತಹ ಕಾಯಿಲೆ ಇರುವವರಿಗೆ ಆರೋಗ್ಯ ಹದಗೆಡಬಹುದು. ಕಣ್ಣಿನ ಉರಿ, ಕೆಮ್ಮು, ಗಂಟಲು ನೋವು, ಚರ್ಮದಲ್ಲಿ ತುರಿಕೆ ಅಲರ್ಜಿಯ ಸಾಮಾನ್ಯ ಲಕ್ಷಣಗಳು. ಹಾಗಾಗಿ ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಮುಂಚೆ ಕಾಳಜಿ ವಹಿಸುವುದು ಮುಖ್ಯ.

ಬರೀ ಇಷ್ಟೇ ಅಲ್ಲ, ಅಲರ್ಜಿ ಕಾಣಿಸಿಕೊಂಡರೆ ನಿದ್ರೆಗೆ ಭಂಗ, ವಿಪರೀತ ಆಯಾಸ, ಏಕಾಗ್ರತೆ ಕೊರತೆ, ಸಿಡುಕುತನವೂ ಕಾಣಿಸಿಕೊಳ್ಳುತ್ತದೆ. ಇದರಿಂದ ಕೆಲಸದಲ್ಲಿ ನಿರುತ್ಸಾಹವೂ ಕಂಡುಬರಬಹುದು. ಅಲರ್ಜಿ ಅತಿರೇಕಕ್ಕೆ ಹೋಗುವ ಮೊದಲು ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಗಂಟಲು, ಮೂಗು ಪರೀಕ್ಷಿಸಿ ಅಲರ್ಜಿಗೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ಹಾಗೆಯೇ ಚರ್ಮದ ಅಲರ್ಜಿಗೆ ಚುಚ್ಚು ಪರೀಕ್ಷೆ ಮೂಲಕ ಪರೀಕ್ಷೆಯನ್ನು ಮಾಡುತ್ತಾರೆ.

ಧೂಳಿನಿಂದ ರಕ್ಷಣೆ ಹೇಗೆ?
ಧೂಳನ್ನು ಸಂಪೂರ್ಣ ತಪ್ಪಿಸುವುದು ಅಥವಾ ಮನೆಯಲ್ಲಿ ಧೂಳು ಬರದಂತೆ ತಡೆಗಟ್ಟುವುದು ಅಸಾಧ್ಯ. ಆದರೆ ಮನೆಯಲ್ಲಿ ಧೂಳು ಹೆಚ್ಚು ಸೇರದಂತೆ ನಾವು ಖಂಡಿತ ಪ್ರಯತ್ನಿಸಬಹುದು.

ಧೂಳು ಬರದಂತೆ ಕೆಲವೊಬ್ಬರು ಮನೆ ಕಿಟಕಿಗಳನ್ನು ಭದ್ರವಾಗಿ ಮುಚ್ಚಿಡುತ್ತಾರೆ. ಆದರೆ ಮನೆಯೊಳಗೆ ಸೂರ್ಯನ ಕಿರಣಗಳು ಪ್ರವೇಶಿಸಿದರೆ ಧೂಳು ಹೆಚ್ಚು ಸೇರುವುದಿಲ್ಲ ಎಂಬುದು ಸತ್ಯ. ಬಾತ್‌ರೂಮ್‌, ಅಡುಗೆ ಕೋಣೆಗಳಲ್ಲಿ ಫ್ಯಾನ್‌ಗಳನ್ನು ಬಳಸಬೇಕು. ಮನೆಯೊಳಗೆ ಬಟ್ಟೆಗಳನ್ನು ಒಣಗಿಸದೇ ಬಿಸಿಲಿನಲ್ಲಿ ಚೆನ್ನಾಗಿ ಹರಡಿ ಒಣಗಿಸಿದರೆ ಉತ್ತಮ. ಬೆಡ್‌‌ರೂಮ್‌ಗಳಲ್ಲಿ ತೇವಾಂಶ ಹೆಚ್ಚು ಅಥವಾ ಕಡಿಮೆ ಮಾಡಲು ಬಳಸುವ ಹ್ಯೂಮಿಡೈಫರ್ಸ್‌ಗಳನ್ನು ಕಡಿಮೆ ಬಳಸಬೇಕು.

ಬೆಡ್‌ರೂಮ್‌ಗಳಲ್ಲಿನ ಬೆಡ್‌ಶೀಟ್‌, ದಿಂಬು ಕವರ್‌, ಬೆಡ್‌ ಕವರ್‌ಗಳನ್ನು ವಾರದಲ್ಲಿ ಒಮ್ಮೊಯಾದರೂ ತೊಳೆದು ಬಿಸಿಲಿನಲ್ಲಿ ಒಣಗಿಸಿ ಬಳಸಬೇಕು. ಬೆಡ್‌ ಅಥವಾ ಪೀಠೋಪಕರಣಗಳ ಮೇಲೆ ತಿನ್ನುವುದು ಚೆಲ್ಲುವುದು ಮಾಡಬಾರದು. ಬೆಡ್‌ರೂಮ್‌ ಒಳಗೆ ಸಾಕುಪ್ರಾಣಿಗಳನ್ನು ಬಿಡಬಾರದು. ಬೆಡ್‌ ಅಥವಾ ಸೋಫಾದಲ್ಲಿ ಧೂಳು ಸೇರದಂತೆ ಈಗ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಯೋಗ್ಯ ಶೀಟ್‌ಗಳು ಸಿಗುತ್ತವೆ. ಅವುಗಳನ್ನು ಬಳಸಬಹುದು. ಮಲಗುವ ಕೋಣೆಗಳಲ್ಲಿ ಪುಸ್ತಕದ ಕಪಾಟು ಅಥವಾ ದಿನಪತ್ರಿಕೆಗಳನ್ನು ಜೋಡಿಸಿಟ್ಟಿದ್ದರೆ ಅದನ್ನು ಸ್ಥಳಾಂತರ ಮಾಡಿ.

ಮನೆಯೊಳಗೆ ಅತಿ ಹೆಚ್ಚು ಧೂಳು ಸೇರಿಕೊಳ್ಳುವುದು ಕಾರ್ಪೆಟ್‌ನಲ್ಲಿ. ಅತಿ ಹೆಚ್ಚು ರತ್ನಗಂಬಳಿ ಬಳಕೆಯನ್ನು ತಪ್ಪಿಸಿ, ಇವು ಧೂಳು ಹೆಚ್ಚು ಹಿಡಿದಿಟ್ಟುಕೊಳ್ಳುತ್ತವೆ. ಇವುಗಳನ್ನು ದೊಡ್ಡ, ಅಗಲ ಹಾಗೂ ಭಾರವಾಗಿರುವುದರಿಂದ ಆಗಾಗ ಸ್ವಚ್ಛಗೊಳಿಸಲು ಕಷ್ಟ. ವ್ಯಾಕ್ಯೂಮ್‌ ಕ್ಲೀನರ್‌ ಕೂಡ ಕಾರ್ಪೆಟ್‌ನ್ನು ಪೂರ್ಣ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಕಾರ್ಪೆಟ್‌ ಬಳಸುವವರಾಗಿದ್ದರೆ ಆಗಾಗ ಸ್ವಚ್ಛಗೊಳಿಸುತ್ತಲೇ ಇರಬೇಕು.

ಮಕ್ಕಳ ಮೃದುವಾದ ಆಟಿಕೆ ವಸ್ತುಗಳು ಸಹ ಕಾರ್ಪೆಟ್‌ಗಳಂತೆ ಅತಿ ಹೆಚ್ಚು ಧೂಳು ಹಿಡಿದಿಟ್ಟುಕೊಳ್ಳುತ್ತವೆ. ಸಣ್ಣ ಆಟಿಕೆಗಳಾಗಿದ್ದರೆ ಆಗಾಗ ಸೋಪ್‌ ನೀರಿನಿಂದ ತೊಳೆಯಬಹುದು. ಅಥವಾ ದೊಡ್ಡ ಆಟಿಕೆಗಳನ್ನು ಸೂರ್ಯನ ಬೆಳಕಿನಲ್ಲಿ ನಾಲ್ಕೈದು ಗಂಟೆ ಇಟ್ಟು ಧೂಳು ಜಾಡಿಸಬೇಕು. ಹಾಗೇ ಅಲರ್ಜಿ ಸಮಸ್ಯೆ ಇರುವವರು ಧೂಳು ತುಂಬಿದ ಆಟಿಕೆಗಳನ್ನು ತಾವಿರುವ ಪ್ರದೇಶದಿಂದ ದೂರ ಇಟ್ಟುಬಿಡಿ.

Related News

spot_img

Revenue Alerts

spot_img

News

spot_img