28.2 C
Bengaluru
Wednesday, July 3, 2024

ಮಂತ್ರಿ ಡೆವಲಪರ್ಸ್ ವಿರುದ್ಧದ ಸಿಐಡಿ ತನಿಖೆಗೆ ಹೈಕೋರ್ಟ್ ತಡೆ !

ಬೆಂಗಳೂರು, ಸೆ. 16: ಮಂತ್ರಿ ಡೆವಲಪರ್ಸ್ “ವೆಬ್ ಸಿಟಿ’ ಪ್ರಾಜೆಕ್ಟ್ ನ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಂತ್ರಿ ಡೆವಲಪರ್ಸ್ ಪ್ರೈ. ಲಿಮಿಟೆಡ್ ನಿರ್ದೇಶಕ ಸುಶೀಲ್ ಮಂತ್ರಿ ಮತ್ತು ಅವರ ಪುತ್ರ ಪ್ರತೀಕ್ ಮಂತ್ರಿ ವಿರುದ್ಧದ ವಿವಿಧ ವಂಚನೆ ಪ್ರಕರಣಗಳ ತನಿಖೆಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ.

ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿತರು ಜಾಮೀನು ಪಡೆದ ಬಳಿಕವಷ್ಟೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಹೆಣ್ಣೂರು ಬಳಿ ಮಂತ್ರಿ ಡೆವಲಪರ್ಸ್ ವತಿಯಿಂದ ಕೈಗೊಂಡಿರುವ ‘ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್’ ನ ವಂಚನೆ ಪ್ರಕರಣ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ. ಮಂತ್ರಿ ಡೆವಲಪರ್ಸ್ ಒಡೆತನಕ್ಕೆ ಸೇರಿದ 300 ಕೋಟಿ ರೂ. ಮೊತ್ತದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ವಂಚನೆ ಪ್ರಕರಣಗಳ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.


ಕೆಲ ದಿನಗಳ ಹಿಂದಷ್ಟೇ ಆರೋಪಿತ ಸುಶೀಲ್ ಮಂತ್ರಿ ಮತ್ತು ಪ್ರತೀಕ್ ಮಂತ್ರಿಯನ್ನು ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದರ ಬೆನ್ನಲ್ಲೇ ಸಿಐಡಿ ತನಿಖೆಗೆ ತಡೆ ನೀಡುವಂತೆ ಮಂತ್ರಿ ಡೆವಲಪರ್ಸ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ. ನಾಗಪ್ರಸನ್ನ ಎಂ. ನೇತೃತ್ವದ ಏಕ ಸದಸ್ಯ ಪೀಠ ಇದೀಗ ಸಿಐಡಿ ತನಿಖೆಗೆ ತಡೆ ನೀಡಿದೆ.

ಬೆಂಗಳೂರಿನ ಹೆಣ್ಣೂರು ಬಳಿ ಮಂತ್ರಿ ಡೆವಲಪರ್ಸ್ “ಮಂತ್ರಿ ವೆಬ್ ಸಿಟಿ’ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. ಸುಮಾರು 1000 ಸಾವಿರಕ್ಕೂ ಅಧಿಕ ಮಂದಿಯಿಂದ 70 ರಿಂದ 80 ಲಕ್ಷ ರೂ. ಮೊತ್ತದ ಪೂರ್ಣ ಮೊತ್ತವನ್ನು ಪಡೆದಿತ್ತು. ಗ್ರಾಹಕರ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡದೇ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಂತ್ರಿ ಡೆವಲಪರ್ಸ್ ಜತೆ ಕೈ ಜೋಡಿಸಿ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಿತ್ತು. 2014 ರಲ್ಲಿ ಆರಂಭಿಸಿದ್ದ ವೆಬ್ ಸಿಟ ಪ್ರಾಜೆಕ್ಟ್ ನ್ನು 2016 ನವೆಂಬರ್ ಒಳಗೆ ಪೂರ್ಣಗೊಳಿಸಬೇಕಿತ್ತು. ಅವಧಿ ಮುಗಿದು ಆರು ವರ್ಷವಾದದರೂ ಯೋಜನೆ ಪೂರ್ಣಗೊಳಿಸದೇ ಪ್ಲಾಟ್ ಖರೀದಿ ಮಾಡಿದವರು ಬಡ್ಡಿ ಸಮೇತ ಲೋನ್ ಪಾವತಿ ಮಾಡುತ್ತಿದ್ದಾರೆ. ಇದರಿಂದ ನೊಂದ ಗ್ರಾಹಕರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಂತ್ರಿ ವೆಬ್‌ಸಿಟಿ ಪ್ರಾಜೆಕ್ಟ್‌ನಲ್ಲಿ ಅಪಾರ್ಟ್ ಮೆಂಟ್ ಘಟಕಗಳನ್ನು ಸ್ವಾಧೀನಪಡಿಸಿಕೊಳ್ಳದ ಆರೋಪದ ಮೇಲೆ ಗ್ರಾಹಕರು ಈಗಾಗಲೇ ನೋಂದಾಯಿಸಿರುವ ಒಂದೇ ರೀತಿಯ ಶುಲ್ಕಗಳಿಗೆ ತಡೆ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಇದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಅದನ್ನು ಪರಿಗಣಿಸದೆ ಅವರನ್ನು ಬಂಧಿಸಿದ್ದಾರೆ ಎಂದು ಮಂತ್ರಿ ಡೆವಲಪರ್ಸ್ ಪರ ವಕೀಲರು ವಾದ ಮಂಡಿಸಿದ್ದರು.

ಸಾಂಕ್ರಾಮಿಕ ರೋಗ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿನ ಕುಸಿತ ಸೇರಿದಂತೆ ಹಲವಾರು ಕಾರಣಗಳಿಂದ ಯೋಜನೆಯು ವಿಳಂಬವಾಗಿದೆ ಎಂದು ಅವರ ಅರ್ಜಿಯಲ್ಲಿ ತಿಳಿಸಲಾಗಿದೆ. ಯೋಜನೆಯು ಸುಮಾರು 2,000 ಗ್ರಾಹಕರನ್ನು ಹೊಂದಿದ್ದರೂ ಅವರಲ್ಲಿ ಕೆಲವರು ವಿಳಂಬದ ಕಾರಣಕ್ಕಾಗಿ ಭಾರಿ ಬಡ್ಡಿ ಪರಿಹಾರ ಮತ್ತು ಹೆಚ್ಚುವರಿ ಪ್ರಯೋಜನಗಳಿಗೆ ಬೇಡಿಕೆಯಿಡುವ ಮೂಲಕ ಪ್ರವರ್ತಕರ ಮೇಲೆ ಬಲವಂತದ ಒತ್ತಡವನ್ನು ತರಲು ಪ್ರಾರಂಭಿಸಿದ್ದಾರೆ. ಫ್ಲಾಟ್ ಗಳನ್ನು ಕಾಯ್ದಿರಿಸದ ಕೆಲವು ಗ್ರಾಹಕರು ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಅಕ್ರಮ ಬೇಡಿಕೆಗಳನ್ನು ವಜಾಗೊಳಿಸಿದಾಗ, ಅವರು ರೇರಾ ಮುಂದೆ ಸುಳ್ಳು ದೂರುಗಳನ್ನು ಸಲ್ಲಿಸಲು ಕೆಲವು ಗ್ರಾಹಕರನ್ನು ಪ್ರಚೋದಿಸಿದರು ಎಂದು ಅರ್ಜಿದಾರರು ಹೇಳಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸದ್ಯಕ್ಕೆ ಮಂತ್ರಿ ಡೆವಲಪರ್ಸ್ ವಿರುದ್ಧದ ಸಿಐಡಿ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು, ಮಂತ್ರಿ ಡೆವಲಪರ್ಸ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.

Related News

spot_img

Revenue Alerts

spot_img

News

spot_img