27.7 C
Bengaluru
Wednesday, July 3, 2024

ಇಲ್ಲಿ ಗಂಡನ ಆಸ್ತಿಯಲ್ಲಿ ಪತ್ನಿಗೆ, ತಂದೆಯ ಆಸ್ತಿಯಲ್ಲಿ ಮಗಳಿಗೆ ಪಾಲಿಲ್ಲ!!!

ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರ, ಪುತ್ರಿಯರಿಗೆ ಈಗ ಸಮಾನ ಪಾಲು ಇರುತ್ತದೆ. ಅದರಂತೆ ಗಂಡನ ಆಸ್ತಿಯಲ್ಲಿ ಹೆಂಡತಿ, ಮಗಳಿಗೂ ಪಾಲಿರುತ್ತದೆ. ಆದರೆ ಹಿಮಾಚಲ ಪ್ರದೇಶದ ಕಿನ್ನೌರ್‌ ಪ್ರದೇಶದ ಬುಡಕಟ್ಟು ಸಮುದಾಯವೊಂದರಲ್ಲಿ ಗಂಡ ಅಥವಾ ಪತಿಯ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ.

ಈ ಪ್ರದೇಶದ ಸಾವಿರಾರು ಮಹಿಳೆಯರು ಕಳೆದ ಹತ್ತಾರು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿಗಾಗಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ನೂರಾರು ಮಹಿಳೆಯರಿಗೆ ಇಲ್ಲಿನ 70 ವರ್ಷದ ರಥನ್‌ ಮಂಜರಿ ಆಶಾಕಿರಣ. ಮಂಜರಿ ಅವರ ನೇತೃತ್ವದಲ್ಲಿ ಮಹಿಳೆಯರು ಹೋರಾಟವನ್ನು ಮುಂದುವರಿಸಿದ್ದಾರೆ.

ಇಲ್ಲಿನ ಕಿನ್ನೌರ್‌ ಏರಿಯಾದ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಕಾನೂನು ‘ವಾಜಿಬ್‌– ಅಲ್‌– ಅರ್ಜ್‌’ ಪ್ರಕಾರ, ಗಂಡ ಹಾಗೂ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿ ಅಥವಾ ಮಗಳಿಗೆ ಯಾವುದೇ ಪಾಲು ಇಲ್ಲ.

ಈ ಹೋರಾಟದ ಮುಂಚೂಣಿ ವಹಿಸಿರುವ ರಥನ್‌ ಮಂಜರಿ ಅವರು ಬ್ರಿಟಿಷ್‌ ಇಂಡಿಯನ್‌ ಸೈನ್ಯದಲ್ಲಿ ಕಮಿಷನರ್‌ ಆಗಿದ್ದ ಕರ್ನಲ್‌ ಪಿ.ಎನ್‌. ನೇಗಿ ಅವರ ಮಗಳು. ರಥನ್‌ ಅವರು ಕಳೆದ ಐದು ದಶಕಗಳಿಂದ ಈ ಹಳೆ ಕಾನೂನನ್ನು ಮುರಿದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ದೊರೆಯಬೇಕೆಂದು ಹೋರಾಟ ನಡೆಸುತ್ತಿದ್ದಾರೆ.

“ಕೇಂದ್ರ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿದೆ ಅಂದಮೇಲೆ ಮಹಿಳೆಯರನ್ನು ನರಕಕ್ಕೆ ದೂಡುವ ಇಂತಹ ಕೆಟ್ಟ ಸಂಪ್ರದಾಯದ ಕಾನೂನುಗಳನ್ನು ಯಾಕೆ ನಿಷೇಧ ಮಾಡಬಾರದು? ನಾನು ಯೋಧನ ಮಗಳು. ಇದು ಮಹಿಳೆಯರ ಸ್ವಾಭಿಮಾನದ ವಿಷಯವಾಗಿದ್ದರಿಂದ ಈ ಹೋರಾಟವೆಂಬ ಯುದ್ಧವನ್ನು ನಾನು ಧನಾತ್ಮಕ ಅಂತ್ಯದ ಮೂಲಕ ಮುಗಿಸುತ್ತೇನೆ,” ಎಂದು ಹೇಳುತ್ತಾರೆ ಮಂಜರಿ.

ಇಲ್ಲಿನ ರಿಬ್ಬ ಹಳ್ಳಿಯಲ್ಲಿ ವಾಸಿಸುತ್ತಿರುವ ಮಂಜರಿ ಅವರು ಈ ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸಿ, ಅನೇಕ ಬಾರಿ ಇಲ್ಲಿ ತನಕ ಅಧಿಕಾರದಲ್ಲಿದ್ದ ಬಹುತೇಕ ಎಲ್ಲ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇಲ್ಲಿ ತನಕ ಈ ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚರ್ಚೆ ನಡೆಸಲು ಮಂಜರಿ ಉತ್ಸುಕರಾಗಿದ್ದು, ಅವರಿಂದಲಾದರೂ ಸಮಸ್ಯೆಗೆ ಪರಿಹಾರ ದೊರೆಯಬಹುದೇ ಎಂಬ ಆಶಾವಾದ ಅವರದು.

ಮಂಜರಿ ಅವರು ಈ ಹೋರಾಟವನ್ನು ತಮ್ಮ 22ನೇ ವಯಸ್ಸಿನಿಂದ ಆರಂಭಿಸಿದ್ದಾರೆ. ‘ಇಂತಹ ಸಂಪ್ರದಾಯದ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು 22ನೇ ವಯಸ್ಸಿನಲ್ಲಿ ಪಂಚಾಯತಿನ ಪ್ರಧಾನ್ ಆಗಿ ಆಯ್ಕೆಗೊಂಡಾಗ, ಅನೇಕ ಮಹಿಳೆಯರು ನನ್ನ ಬಳಿ ಬಂದು, ಆಸ್ತಿ ಹಕ್ಕಿನಿಂದ ತಾವು ವಂಚಿತರಾಗುತ್ತಿರುವ ಬಗ್ಗೆ ಹೇಳಿಕೊಂಡರು. ಗಂಡು ಅಥವಾ ಹೆಣ್ಣು ಎಲ್ಲರೂ ಗರ್ಭದಿಂದಲೇ ಹೊರಬರುವುದು. ಹೆಣ್ಣುಮಕ್ಕಳ ಬಗ್ಗೆ ಸಮಾಜ ಯಾಕೆ ಇಂತಹ ತಾರತಮ್ಯ, ಆಸಡ್ಡೆ ತೋರುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಮಂಜರಿ ಅವರು ಮಹಿಳಾ ಕಲ್ಯಾಣ ಪರಿಷತ್‌ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಇದು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ.

Related News

spot_img

Revenue Alerts

spot_img

News

spot_img