ಬೆಂಗಳೂರು, ಆ. 11 : ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ಮನೆಯನ್ನು ತಾವೇ ನಡೆಸುವಷ್ಟು ಜವಾಬ್ದಾರಿಗಳನ್ನು ಹೊತ್ತು ಎಲ್ಲವನ್ನು ಒಬ್ಬರೇ ನಿಭಾಯಿಸುವಷ್ಟು ಮಹಿಳೆಯರು ಸಮರ್ಥರಾಗಿದ್ದಾರೆ. ಹೀಗಿರುವಾಗ ಮಹಿಳೆಯರು ಸದ್ಯ ಸಾಸಿವೆ ಡಬ್ಬಿ, ತೊಗರಿ ಬೇಳೆ ಡಬ್ಬಿಗಳಲ್ಲಿ ಹಾಗೂ ಬಟ್ಟೆಗಳ ಸಂಧಿಯಲ್ಲಿ, ಹಾಸಿಗೆ ಅಡಿಯಲ್ಲಿ ಹಣವನ್ನು ಕದ್ದು ಮುಚ್ಚಿ ಉಳಿತಾಯ ಮಾಡುವ ಕಾಲ ಈಗ ಮುಗಿದಿದೆ. ಈಗೇನಿದ್ದರೂ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಮಾಡುತ್ತಾರೆ.
ಹಾಗಾದರೆ, ಮಹಿಳೆಯರು ಕೂಡ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಬೆಸ್ಟ್ ಎಂಬುದನ್ನು ನೋಡೋಣ ಬನ್ನಿ. ಮಹಿಳೆಯರು ಕೂಡ ಈಗ ದೊಡ್ಡ ದೊಡ್ಡ ಕಡೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಕೇವಲ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಡುವ ಬದಲು, ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಎಫ್ ಡಿ ಮಾಡಿ ಹಣವನ್ನು ಉಳಿತಾಯ ಮಾಡುವುದು ಮಹಿಳೆಯರಿಗೆ ಬೆಸ್ಟ್ ಆಲೋಚನೆ ಯಾಗಿದೆ. ಸಣ್ಣ ಸಣ್ಣ ಎಫ್ ಡಿ ಗಳೇ ಮುಂದೆ ದೊಡ್ಡ ಮೊತ್ತವಾಗಿ ಕೈ ಸೇರುತ್ತದೆ.
ಇದಿಲ್ಲದೇ ಹೋದರೆ, ಆರ್ ಡಿ ಕೂಡ ಮಾಡಬಹುದು. ಆದರೆ, ಆರ್ ಡಿ ನಲ್ಲಿ ಹಣವನ್ನು ಹೂಡಿಕೆ ಮಾಡುವುದಾದರೆ, ಎಷ್ಟು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಒಂದು ತಿಂಗಳು ತಪ್ಪಿದರೂ ಸಮಸ್ಯೆ ಆಗುತ್ತದೆ. ಇನ್ನು ಚಿನ್ನದ ಮೇಲಿನ ಹೂಡಿಕೆಯೂ ಕೂಡ ಹೆಂಗಳೆಯರಿಗೆ ಖುಷಿಯ ಜೊತೆಗೆ ಭವಿಷ್ಯಕ್ಕೂ ಆಧಾರವಾಗಿರುತ್ತದೆ. ಇವತ್ತು ಖರೀದಿಸಿದ ಚಿನ್ನವೂ ಮನೆಯಲ್ಲೇ ಇದ್ದರೂ ಬಡ್ಡಿ ಹಣ ಬೆಳೆದಂತೆ ಚಿನ್ನದ ಬೆಲೆಯೂ ಏರಿಕೆಯಾಗುತ್ತಲೇ ಇರುತ್ತದೆ.
ಹಾಗಾಗಿ ಹೆಣ್ಣು ಮಕ್ಕಳು ಚಿನ್ನದ ಮೇಲೂ ಹೂಡಿಕೆ ಮಾಡಿ ಲಾಭವನ್ನು ಪಡೆಯಬಹುದು. ಇದರೊಂದಿಗೆ ಪೆನ್ಷನ್ ಸ್ಕೀಮ್ ಗಳಲ್ಲೂ ಮಹಿಳೆಯರು ತಮ್ಮ ಉಳಿತಾಯದ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು ಅವರ ಕೊನೆಗಾಲದಲ್ಲೂ ಸಹಾಯಕ್ಕೆ ಬರುತ್ತದೆ. ಇನ್ನು ಆರೋಗ್ಯ ವಿಮೆಯಲ್ಲೂ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ಹೀಗೆಲ್ಲಾ ಹೂಡಿಕೆ ಮಾಡಿ ತಮ್ಮ ಉಳಿತಾಯದ ಮೊತ್ತವನ್ನು ಹೆಚ್ಚಿಸಿಕೊಳ್ಳುವುದು ಬಹಳ ಒಳ್ಳೆಯದು.